ಸೋಮವಾರ, ಮೇ 23, 2022
30 °C

ಒಂಟಿಗಾಲಿನ ಕನಸುಗಳು

ಸಿ.ಎಸ್‌.ನಿರ್ವಾಣ ಸಿದ್ದಯ್ಯ Updated:

ಅಕ್ಷರ ಗಾತ್ರ : | |

‘ಬೊಂಬೆ ಅಡಿಸೋನು ಮ್ಯಾಲೆ ಕುಂತನೋ ನಮಗೂ ನಿಮಗೂ ಯ್ಯಾಕೆ ಟೆನ್ಷನ್‌’

ನಿಜ, ಬದುಕು ಎಂದಿಗೂ ಕೂಡ ನಮ್ಮ ಕೈಯಲ್ಲಿ ಇರಲ್ಲ. ಅದು ಇರುವುದು ಭಗವಂತನ ಕೈಯಲ್ಲಿ. ನಾವು ಇಲ್ಲಿ ಎಷ್ಟೇ ಲಾಗಾ ಹಾಕಿದರೂ ಭಗವಂತನ ಚಿತ್ತದಂತೆಯೇ ಜೀವನ ಸಾಗುತ್ತದೆ. ಹಾಗಾಗಿ ಮೇಲಿನ ಸಾಲುಗಳು ನನಗೆ ತುಂಬಾ ಇಷ್ಟ. ನನ್ನ ಹೆಸರು ಚಂದ್ರಶೇಖರ್. ಹುಟ್ಟೂರು ದಾವಣಗೆರೆ ಜಿಲ್ಲೆಯ ಚನ್ನಗಿರಿ. ಕನಸುಗಳ ನೊಗ ಹೊತ್ತು ಬದುಕಿನ ಫಲ ಉತ್ತಿ ಬೆಳೆಯಲು ಬೆಂಗಳೂರಿಗೆ ಬಂದೆ. ಎರಡು ಕಾಲುಗಳಿದ್ದಾಗ ಗಾರ್ಮೆಂಟ್‍ನಲ್ಲಿ ಟೈಲರ್, ರಾತ್ರಿ ಹೊತ್ತು ಕಾರು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಒಂದು ಕಾಲು ಹೋದ ಮೇಲೆ ಪೇಂಟರ್‌. ಮನೆಗಳಿಗೆ ಸುಣ್ಣ ಬಣ್ಣ ಹೊಡೆಯುವುದು.

ನಮ್ಮದು ದೊಡ್ಡ ಕುಟುಂಬ. ನಾಲ್ಕು ಹೆಣ್ಣು, ನಾಲ್ಕು ಗಂಡು ಮಕ್ಕಳು ನಮ್ಮ ಅಪ್ಪನಿಗೆ. ನಾನೇ ಕೊನೆಯವನು. ಅವತ್ತಿನ ಗಂಜೀನ ಅವತ್ತೇ ಹುಟ್ಟಿಸಿಕೊಂಡು ಬದುಕುವ ಬಡತನ ನಮ್ಮಲ್ಲಿ ಇತ್ತು. ಹೇಗಾದರೂ ಮಾಡಿ ಈ ಸಂಸಾರದ ನೊಗವನ್ನು ಸರಾಗವಾಗಿ ಎಳೆಯಬೇಕೆಂದು ಬೆಂಗಳೂರಿಗೆ ಬಂದೆ. ಹಳ್ಳಿಯಲ್ಲಿದ್ದಾಗ ಟೈಲರಿಂಗ್‌ ಕಲಿತ್ತಿದ್ದ ನನಗೆ ಗೋರಗುಂಟೆಪಾಳ್ಯದಲ್ಲಿದ್ದ ಗಾರ್ಮೆಂಟ್ ಒಂದರಲ್ಲಿ ಕೆಲಸ ಸಿಕ್ಕಿತ್ತು. ತಿಂಗಳಿಗೆ ಹತ್ತು ಸಾವಿರ ಸಂಬಳ. ಪೋಣಿಸಿಕೊಂಡು ಬಂದಿದ್ದ ಕನಸುಗಳಿಗೆ ಸಂಬಳ ಸಾಕಾಗುತ್ತಿರಲಿಲ್ಲ. ಅಕ್ಕ ತಂಗಿಯರ ಮದುವೆಯ ಸಂಭ್ರಮದ ಕನಸುಗಳು ಕಣ್ಮುಂದೆ ಸುಳಿದಾಗ ದುಡಿಯುತ್ತಿದ್ದ ಸಂಬಳ ಏನು ಅಲ್ಲ ಅಂತ ಅನಿಸುತ್ತಿತ್ತು.

ಗೆಳೆಯನೊಬ್ಬ ಡ್ರೈವರ್ ಕೆಲಸ ಮಾಡಿದರೆ ಹೆಚ್ಚು ಸಂಬಳ ಸಿಗುತ್ತದೆ ಎಂದು ಸಲಹೆ ನೀಡಿದ. ಗಾರ್ಮೆಂಟ್ಸ್‌ ಸಂಬಳದಲ್ಲಿಯೇ ಒಂದಿಷ್ಟು ಉಳಿಸಿ ಚಾಲಕ ತರಬೇತಿ ಪಡೆದು ಲೈಸೆನ್ಸ್‌ ಮಾಡಿಸಿದೆ. ಟ್ರಾವೆಲ್ಸ್‌ ಒಂದರಲ್ಲಿ ಚಾಲಕನಾಗಿ ಸೇರಿಕೊಂಡೆ. ಗಾರ್ಮೆಂಟ್ಸ್‌ಗಿಂತ ಹೆಚ್ಚಿಗೆ ದುಡಿಯುತ್ತಿದ್ದೆ. ತಿಂಗಳಿಗೆ ಇಪ್ಪತ್ತು ಸಾವಿರ ಸಂಪಾದನೆಗೆ ಮೋಸ ಇರಲಿಲ್ಲ. ನನ್ನ ಕನಸುಗಳಿಗೆ ಜೀವ ಬಂತು. ನಮ್ಮೂರಿನಲ್ಲಿ ಒಂದು ಸೂರು ಮಾಡ್ಬೇಕು. ಅಪ್ಪ, ಅಮ್ಮ ಅರಾಮಾಗಿ ಕೂತು ತಿನ್ನಬೇಕು, ಇಷ್ಟೇ ನನ್ನ ಬದುಕಿನಲ್ಲಿ ಇದ್ದ ಗುರಿ ಮತ್ತು ಕನಸು. ಡ್ರೈವರ್ ಅಗಿ ಮಾಡುತ್ತಿದ್ದ ದುಡಿಮೆ ಈ ಕನಸುಗಳಿಗೆ ಜೀವ ನೀಡಿತ್ತು.

ಕನಸುಗಳ ಬೆನ್ನೆಟ್ಟಿ ಹೊರಟಿದ್ದ ನನಗೆ ವಿಧಿ ಬಡಿದು ಕೂರಿಸಿತ್ತು. ಅವತ್ತು ರಾತ್ರಿ ರಾಣೆಬೆನ್ನೂರಿನಲ್ಲಿ ಕಾರು ಓಡಿಸ್ಕೊಂಡು ಹೋಗುತ್ತಿದ್ದೆ. ಲಾರಿ ಬಂತು ಅಷ್ಟೇ. ಅಮೇಲೆ ಏನಾಯಿತು ನನಗೆ ಗೋತ್ತೇ ಅಗಲಿಲ್ಲ. ಕಣ್ಣು ಬಿಟ್ಟಾಗ ಅಸ್ಪತ್ರೆಯಲ್ಲಿ ಇದ್ದೆ. ನನ್ನ ಬಲಗಾಲು ತುಂಡಾಗಿತ್ತು. ತಂದೆ ತಾಯಿಗಳಿಗೆ ಮತ್ತೆ ನಾನು ಹೊರೆಯಾದೆ. ಪ್ರತಿ ದಿನ ಮಾತ್ರೆಗಳು, ಇಂಜೆಕ್ಷನ್‍ಗಳಿಗೆ ಜೀವನ ಹೈರಾಣವಾಯಿತು.

ನೆರೆ ಹೊರೆಯರೆಲ್ಲ ಓಡೋಡಿ ಬಂದ್ರು, ಸಹಾಯ ಹಸ್ತ ಚಾಚಿದರು. ಕೃತಕ ಕಾಲನ್ನು ಜೋಡಿಸಿದರು. ಮತ್ತೆ ಬದುಕಿಗೆ ಕನಸುಗಳ ಕಸಿ ಮಾಡಿ ದುಡಿಯುವ ಕೈಗೆ ಶಕ್ತಿ ನೀಡಿದರು. ಮತ್ತೆ ಒಂಟಿಗಾಲನ್ನು ಹೊತ್ತುಕೊಂಡು ಬೆಂಗಳೂರಿಗೆ ಬಂದೆ. ಆದರೆ ಯಾವ ಕನಸುಗಳೂ ಇರಲಿಲ್ಲ.   ಅಪ್ಪ ಅಮ್ಮ ಇರಲಿಲ್ಲ. ಸಹೋದರಿಯ ಮದುವೆಯಾಗಿತ್ತು. ನನ್ನ ಹೊಟ್ಟೆ ತುಂಬಿದರೆ ಸಾಕು ಎನ್ನುವ ಸಂಕಲ್ಪದಿಂದ ಬಂದೆ. ಏನು ಕೆಲಸ ಮಾಡಬೇಕೆಂದು ನಿರ್ಧಾರವಾಗಿರಲಿಲ್ಲ. ಕಾಲು ಕಳೆದುಕೊಂಡವನಿಗೆ ಏನು ಕೆಲ್ಸ ಸಿಗುತ್ತೆ? ಯಾರು ಕೆಲ್ಸ ಕೊಡ್ತಾರೆ? ಈ ಎರಡು ಪ್ರಶ್ನೆಗಳು ಪ್ರತಿ ದಿನ ಕಾಡುತ್ತಿತ್ತು.

ಮಹಾಲಕ್ಷ್ಮೀ ಲೇಔಟ್‍ನ ರೂಮಿನಲ್ಲಿದ್ದ ನನಗೆ, ಕೈ ಇಲ್ಲದ ನಾರಾಯಣ್ ಎನ್ನುವರು ಪರಿಚಯವಾದರು. ಅವರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ‘ಈ ಕೆಲಸ್ ಮಾಡ್ತೀರಾ?’ ಎಂದು ಕೇಳಿದ್ರು. ಜೈ ಅಂತ ಧುಮುಕಿದೆ. ಒಂದು ದಿನಕ್ಕೆ ₹ 600 ಕೊಡ್ತಾರೆ. ಪರವಾಗಿಲ್ಲ ಈ ಸುಸ್ತು ನೋವಿನಲ್ಲಿಯೂ ಒಂದು ಸುಖ ಇದೆ. ದುಡಿದೇ ಬಾಳಬೇಕೆಂಬ ಗುರಿ ಇರುವ ನಮ್ಮಂತಹವರಿಗೆ ಈ ನೋವು ಅನಿವಾರ್ಯ. ಪರಾವಲಂಬನೆಯಾಗಿ ಬದುಕುವುದಕ್ಕಿಂತ ಈ ನೋವು ಹೆಚ್ಚಿನ ನೋವು ಅಲ್ಲ. ಬದುಕು ಈಗ ಒಂದು ಹದಕ್ಕೆ ಬಂದಿದೆ. ಯಾವುದಕ್ಕೂ ಮನಸ್ಸು ಜಗ್ಗಲ್ಲ. ಬಂದಿದ್ದನ್ನು ಸ್ವೀಕರಿಸಿಕೊಂಡು ಹೋಗುತ್ತಿದೆ. ಹೀಗೆ ಸ್ವೀಕರಿಸಿಕೊಂಡು ಹೋದಾಗಲೇ ಬದುಕು ಚನ್ನ ಅಂತ ನನ್ನ ಭಾವನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.