ಸೋಮವಾರ, ಮೇ 23, 2022
30 °C

ಜ್ಞಾನೇಶ್ವರನ ಕೈ ಹಿಡಿದ ಹಲಸಿನ ವ್ಯಾಪಾರ

ವಿದ್ಯಾಶ್ರೀ ಗಾಣಿಗೇರ Updated:

ಅಕ್ಷರ ಗಾತ್ರ : | |

ನನ್ನ ಹೆಸರು ಜ್ಙಾನೇಶ್ವರ. ಕೆ.ಎರ್. ಪುರಂ ನಿವಾಸಿ. ಹುಟ್ಟೂರು ಕನಕಪುರ. ಈಗ 63 ವರ್ಷ. ಜೀವನದಲ್ಲಿ ಸಾಕಷ್ಟು ನೋವು ಕಂಡಿದ್ದೇನೆ. ಅದರ ಜತೆಗೆ ಕುಟುಂಬವನ್ನು ಸಲಹುತ್ತಿದ್ದೇನೆ. ಓದಿದ್ದೂ ಎಸ್.ಎಸ್.ಎಲ್.ಸಿ ವರೆಗೆ ಮಾತ್ರ. ಮನೆಯ ಹಿರಿಯ ಮಗ ನಾನು. ಮನೆಯಲ್ಲಿ ಬಡತನವಿದ್ದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಬೇಕಾಯಿತು. ಮುಂದೆ ಮದುವೆ ಆಯಿತು.

ಜವಾಬ್ದಾರಿ ಎನ್ನುವುದು ಹೆಗಲ ಮೇಲಿತ್ತು. ತಂದೆ, ತಾಯಿ, ತಮ್ಮ ಮತ್ತು ಹೆಂಡತಿ ಎಲ್ಲರನ್ನೂ ನೋಡಿಕೊಳ್ಳುವುದು ನನ್ನ ಕರ್ತವ್ಯ. ಮದುವೆಯಾದ ಹೊಸದರಲ್ಲಿ  ಮೈಸೂರಿನಲ್ಲಿ ಮೀಸಲು ದಳದ ಪೊಲೀಸ್‌ ಆಗಿ ಕೆಲಸ ಸಿಕ್ಕಿತ್ತು. ಆದರೆ ಅಲ್ಲಿ ಕೊಡುತ್ತಿದ್ದ ವೇತನ ಸಾಕಾಗುತ್ತಿರಲಿಲ್ಲ. ಕಾರಣ 1987ರಲ್ಲಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು, ನ್ಯಾಯಬೆಲೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ನನಗೆ ಗಂಡು ಮಗು ಜನಿಸಿತು. ಮಗುವಿನ ಪಾಲನೆ, ಪೊಷಣೆ, ವಿದ್ಯಾಭ್ಯಾಸ ಹೀಗೆ ಜವಾಬ್ದಾರಿ ಹೆಚ್ಚಾಗತೊಡಗಿತು. ನನಗೆ ಆರ್ಥಿಕ ಸಂಕಷ್ಟವೂ ಎದುರಾಯಿತು. ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಹಣವೂ ಸಾಕಾಗುತ್ತಿರಲಿಲ್ಲ.

ನಂತರ ಎಳನೀರು ಮಾರಲು ಮುಂದಾದೆ. ಅದರಲ್ಲಿ ದಿನಕ್ಕೆ ₹ 1,200 ಸಂಪಾದಿಸುತ್ತಿದ್ದೆ. ಇಬ್ಬರು ಗಂಡು ಮಕ್ಕಳಿರುವ ನನಗೆ ಅವರ ಶಿಕ್ಷಣದ ಬಗ್ಗೆಯೇ ಚಿಂತೆಯಾಗುತ್ತಿತ್ತು. ನನ್ನ ಜೀವನದ ಹಾಗೇ ಮಕ್ಕಳ ಜೀವನವೂ ಆಗಬಾರದೆಂದು ಅವರ ಶಿಕ್ಷಣಕ್ಕೆ ಒತ್ತು ನೀಡಿದೆ.

ಹಗಲೂ ರಾತ್ರಿ ಎನ್ನದೆ ದುಡಿದೆ. ನನ್ನ ಮಡದಿ ನನಗೆ ಬೆನ್ನೆಲುಬಾಗಿ ನಿಂತಳು. ನನ್ನ ಕಷ್ಟದ ದುಡಿಮೆ ನೋಡಿ ಎಷ್ಟೋದಿನ ಮಕ್ಕಳೂ ಮರುಕಪಟ್ಟಿದ್ದುಂಟು. ನನ್ನ ಶ್ರಮಕ್ಕೆ ಪ್ರತಿಫಲವಾಗಿ ಅವರೂ ಚೆನ್ನಾಗಿ ಓದಿದರು. ದೊಡ್ಡ ಮಗನಿಗೆ ಡಿಪ್ಲೊಮಾ ಓದಿಸಿದೆ. ಚಿಕ್ಕ ಮಗ ಎಂಜಿನಿಯರಿಂಗ್ ಓದಿದ. ಒಟ್ಟಿನಲ್ಲಿ ಇಬ್ಬರೂ ತಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕೆಂಬ ನನ್ನ ಕನಸನ್ನು ನನಸು ಮಾಡಿದ್ದಾರೆ.

ದೊಡ್ಡ ಮಗನಿಗೆ ನೌಕರಿ ಸಿಕ್ಕಿದ್ದು, ಅವನಿಗೆ ತಿಂಗಳಿಗೆ ₹ 60,000 ಸಂಬಳ ಬರುತ್ತಿದೆ. ಅವನಿಗೆ ಮದುವೆಯೂ ಮಾಡಿಸಿದ್ದೇನೆ. ಅವನ ಹೆಂಡತಿ ಎಂಸಿಎ ಪದವೀಧರೆಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಚಿಕ್ಕ ಮಗ ಎಲೆಕ್ಟ್ರಾನಿಕ್‌ ಸಿಟಿಯ ಕಂಪನಿಯೊಂದರಲ್ಲಿ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದು, ತಿಂಗಳಿಗೆ ₹23,000 ವೇತನ ಪಡೆಯುತ್ತಿದ್ದಾನೆ.

ಇತ್ತೀಚೆಗೆ ಬೊಮ್ಮನಹಳ್ಳಿಯಲ್ಲಿ ಸ್ವಂತ ಮನೆಯನ್ನು ಕಟ್ಟಿಸಿದ್ದೇನೆ. ಜೀವನವೆಲ್ಲಾ ದುಡಿದಿರುವ ನನಗೆ ಮನೆಯಲ್ಲಿ ಹಾಗೇ ಕುಳಿತುಕೊಳ್ಳಲು ಇಷ್ಟವಾಗುವುದಿಲ್ಲ. ಏನನ್ನಾದರೂ ದುಡಿಯಲೇ ಬೇಕು. ಹಾಗಾಗಿ ಹಲಸೂರಿನ ಮೆಟ್ರೊ ನಿಲ್ದಾಣದ ಕೆಳಗೆ ಎರಡು ವರ್ಷದಿಂದ ಹಲಸಿನ ಹಣ್ಣಿನ ವ್ಯಾಪಾರ ಶುರು ಮಾಡುತ್ತಿದ್ದೇನೆ. ಹಲಸಿನ ಸೀಸನ್‌ನಲ್ಲಿ ಮಾತ್ರ ಕೆಲಸ ಮಾಡುತ್ತೇನೆ.

₹ 10ಕ್ಕೆ ನಾಲ್ಕು ತೊಳೆ ಹಣ್ಣು ಕೊಡುತ್ತೇನೆ. ದಿನಕ್ಕೆ ₹ 500 ರಿಂದ ₹1,000 ಆದಾಯಗಳಿಸುತ್ತೇನೆ. ಈಗ ನನ್ನದು ತುಂಬಿದ ಸಂಸಾರ. ಕಷ್ಟದಲ್ಲಿದ್ದ ನಾನು ಈಗ ಮಕ್ಕಳಿಂದ ಸುಖ ಕಾಣುತ್ತಿದ್ದೇನೆ. ನನ್ನ ಮಕ್ಕಳೂ ಮನೆಯಲ್ಲಿಯೇ ವಿಶ್ರಾಂತಿ ಪಡೆಯಿರಿ ಎನ್ನುತ್ತಾರೆ. ದಿನಕ್ಕೆ ₹100 ಅನ್ನಾದರೂ ಮಡದಿಯ ಕೈಯಲ್ಲಿಟ್ಟಾಗ ಸಂತೋಷ. ಜೀವನಾ ಏಣಿಯ ಆಟದಂಗೆ. ಏರಿಕೆ– ಇಳಿಕೆ ಇದ್ದೇ ಇರುತ್ತದೆ. ಸಮನಾಗಿ ನಡೆದರೆ ಮಾತ್ರ ಜೀವನ ಸುಂದರ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.