ಸೋಮವಾರ, ಮೇ 23, 2022
30 °C

ಬಂಡಿ ಜತೆ 40 ಸಂವತ್ಸರ!

ನಿರೂಪಣೆ: ಚೈತ್ರಾ ದೊಡ್ಡಹುಸೇನಪುರ Updated:

ಅಕ್ಷರ ಗಾತ್ರ : | |

Deccan Herald

ನನ್ನ ಹೆಸರು ಸುಬ್ರಹ್ಮಣ್ಯ.  ನಾನು ಹುಟ್ಟಿ ಬೆಳೆದಿದ್ದಲ್ಲಾ ಬೆಂಗಳೂರಿನ ಸುಗಂದ್ರಪಾಳ್ಯದಲ್ಲೇ. 50 ವರ್ಷಗಳ ಹಿಂದೆ ತಮಿಳುನಾಡಿನಿಂದ ಅಪ್ಪ ಬೆಂಗಳೂರಿಗೆ ವಲಸೆ ಬಂದರು. ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ನಮ್ಮನ್ನು ಸಾಕಿದರು. ಈಗ ನನಗೆ 62 ವರ್ಷ. ನಾನು ಬಂಡಿಯಲ್ಲಿ ಬಳೆ, ಸರ, ಹೇರ್‌ಪಿನ್‌ಗಳನ್ನು ಮಾರುತ್ತಿದ್ದೇನೆ. 40 ವರ್ಷಗಳಿಂದ ಇದೇ ನನ್ನ ಕಸುಬು.  

ನಾನು ಹತ್ತನೇ ಕ್ಲಾಸ್‌ವರೆಗೂ ಓದಿದ್ದೀನಿ. ಫೇಲ್‌ ಆದೆ. ಮನೆಯಲ್ಲಿ ಬಡತನ. ಹಾಗಾಗಿ ಓದಿನ ಬಗ್ಗೆ ಚಿಂತೆ ಮಾಡದೇ  ಕೆಲಸ ಮಾಡಲು ಶುರುಮಾಡಿದೆ. ಒಂದೂವರೆ ವರ್ಷ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡಿದೆ. ಆದರೆ ಆ ಕೆಲಸ ಯಾಕೋ ಕೈ ಹಿಡಿಯಲಿಲ್ಲ. ತಮಿಳುನಾಡಿನ ತಿರುವಣ್ಣಾಮಲೈ ಹೋಗಿ ಅಲ್ಲಿ 10 ವರ್ಷ ದುಡಿದೆ. ನಂತ್ರ ಬೆಂಗಳೂರಿಗೆ ವಾಪಸ್ಸಾಗಿ ಇಲ್ಲೇ ಬಂಡಿ ವ್ಯಾಪಾರ ಆರಂಭಿಸಿದೆ. 

ಮೊದಮೊದಲು ಕಾಲಕ್ಕೆ ತಕ್ಕಂತೆ ಐಸ್‌ಕ್ಯಾಂಡಿ, ಚೌಚೌ ಹೀಗೆ ಒಂದೊಂದು ಮಾರುತ್ತಾ ಇದ್ದೆ. ಕೊನೆಗೆ ಯಾವುದಾದರೂ ಒಂದೇ  ವ್ಯಾಪಾರ ಮಾಡಬೇಕೆಂದು ಯೋಚಿಸಿ ಬಳೆ, ಸರಗಳನ್ನು ಮಾರಾಟ ಮಾಡಲು ಆರಂಭಿಸಿದೆ. ನನ್ನಲ್ಲಿ ₹5ರಿಂದ ಹಿಡಿದು
₹ 25 ವರೆಗಿನ ವಸ್ತುಗಳು ಸಿಗುತ್ತವೆ. ಬಾಚಣಿಗೆ, ರಿಬ್ಬನ್, ಪಿನ್‌, ಹೇರ್‌ ಪಿನ್‌, ಕರಿಮಣಿ, ಮಕ್ಕಳ ಅಟಿಕೆಗಳು, ಕನ್ನಡಿ, ಬ್ರಶ್‌, ‌ಓಲೆ, ಉಂಗುರ ಹೀಗೆ ಹಲವು ರೀತಿಯ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತೇನೆ. 

ಬೆಳಗ್ಗೆ 11ರಿಂದ ರಾತ್ರಿ 8 ಗಂಟೆವರೆಗೆ ಕೆಲಸ. ಯಾವುದೇ ಕೆಲಸವಾದರೂ ನಿಷ್ಠೆಯಿಂದ ದುಡಿದರೆ ಪ್ರತಿಫಲ ಸಿಗುತ್ತದೆ. ಬೆಳಗ್ಗೆ ಮನೆಯಲ್ಲಿ ಕೆಲಸ ಮುಗಿಸಿಕೊಂಡು 9 ಗಂಟೆಗೆ ಸೈಕಲ್‌ ಏರಿ ಮಾರುಕಟ್ಟೆಗೆ ಹೊರಡುತ್ತೇನೆ. ಅಲ್ಲಿ ನನ್ನ ಬಳಿ ಇರುವ ಹಣಕ್ಕೆ ಯಾವ ವಸ್ತುಗಳು ಬೇಕೋ ಅವುಗಳನ್ನು ತೆಗೆದುಕೊಂಡು 10.30ಕ್ಕೆ ಮನೆಗೆ ಹಿಂತಿರುಗುತ್ತೇನೆ. ಊಟ ಮಾಡಿ ಮತ್ತೆ ಬಂಡಿಯನ್ನು ಎಳೆದುಕೊಂಡು ಬೀದಿ ಬೀದಿ ಸುತ್ತುತ್ತೇನೆ. 

ನಗರದ ಒಂದೊಂದು ಕಡೆ ಒಂದೊಂದು ದಿನ ಹೋಗುತ್ತೇನೆ. ಈಗ ವಯಸ್ಸಾಯಿತಲ್ವಾ? ಕಾಲು ನೋವು. ಜೀವನ ನಡೆಯಬೇಕಲ್ವ ಅದಕ್ಕೆ ಬಂಡಿ ತಳ್ಳಲೇಬೇಕು. ಇದರಲ್ಲೇ ದುಡಿದು ಮೂರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದೀನಿ. ಈಗ ನನ್ನ ಮಗ ಓದು ಮುಗಿಸಿ ಕೆಲಸ ಮಾಡುತ್ತಿದ್ದಾನೆ. 

ನನಗೆ ಒಂದೊಂದು ದಿನ ಒಂದೊಂದು ರೀತಿ ವ್ಯಾಪಾರ. ಇದರಲ್ಲಿ ಇಷ್ಟೇ ಲಾಭ ಬರುತ್ತೆ ಅಂತ ಏನೂ ಇಲ್ಲ. ₹1,000 ವ್ಯಾಪಾರ ಮಾಡಿದರೆ ₹ 300 ರಿಂದ 400ವರೆಗೆ ಲಾಭ ಸಿಗುತ್ತೆ. ಹಬ್ಬ ಹರಿದಿನಗಳಲ್ಲಿ ₹ 1000ದಿಂದ ₹1,500ರವರೆಗೆ ವ್ಯಾಪಾರವಾಗುತ್ತೆ. ಈ ಗಾಡಿಗೇನೂ ಖರ್ಚಿಲ್ಲ. ಚಕ್ರಕ್ಕೆ ಪಂಚರ್‌ ಹಾಕಿಸುವುದು, ಟೈರ್‌, ಟ್ಯೂಬ್ ಬದಲಿಸುವುದು ಇಷ್ಟೇ ಖರ್ಚು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.