ಗುರುವಾರ , ನವೆಂಬರ್ 21, 2019
23 °C
ಬಂಡೀಪುರ: ಕಾಡಿನಿಂದ ನಾಡಿಗೆ ಬರುತ್ತಿದ್ದ ಸ್ಥಳ ಗುರುತಿಸಿದ ಅಧಿಕಾರಿಗಳು

ಆನೆ ದಾಟುವ ಸ್ಥಳದಲ್ಲಿ ತಡೆಗೋಡೆ

Published:
Updated:
Prajavani

ಗುಂಡ್ಲುಪೇಟೆ: ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶ ಮಾಡುವುದನ್ನು ತಪ್ಪಿಸುವುದಕ್ಕಾಗಿ ಅರಣ್ಯ ಇಲಾಖೆಯು, ಆನೆಗಳು ಕಾಡಿನಿಂದ ನಾಡಿಗೆ ದಾಟುತ್ತಿದ್ದ ಏಳು ಸ್ಥಳಗಳನ್ನು ಗುರುತಿಸಿ ತಡೆಗೋಡೆ ನಿರ್ಮಿಸಿದೆ.

ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನಹಳ್ಳಿ ಎಸ್‍ಟಿಪಿಎಫ್ ಕ್ವಾಟ್ರಸ್ ಬಳಿ ಆನೆ ಕಂದಕಗಳಲ್ಲಿ ಜಾಗ ಮಾಡಿಕೊಂಡು ಆನೆಗಳು ದಾಟಿ ಬರುತ್ತಿದ್ದವು. ಈ ದಾರಿಯಲ್ಲಿ ಬರುವ ಆನೆಗಳು ಕಲ್ಲಿಗೌಡನಹಳ್ಳಿ, ಹಂಗಳ, ದೇವರಹಳ್ಳಿ, ಶಿವಪುರ, ಚೌಡಹಳ್ಳಿ ಭಾಗದ ರೈತರ ಜಮೀನುಗಳಿಗೆ ಆಗಿಂದಾಗ್ಗೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿದ್ದವು.

ಆನೆಗಳು ರೈತರ ಜಮೀನುಗಳಿಗೆ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈತರು ಅರಣ್ಯ ಇಲಾಖೆ ಮೇಲೆ ತೀವ್ರ ಒತ್ತಡ ತಂದಿದ್ದರು. ಆನೆಗಳು ನಾಡಿಗೆ ಬರುತ್ತಿದ್ದುದರಿಂದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೂ ತೊಂದರೆಯಾಗುತ್ತಿತ್ತು.

‘ಸೋಲಾರ್ ಬೇಲಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಆನೆಗಳು ಸರಾಗವಾಗಿ ದಾಟುತ್ತಿದ್ದವು. ಕಂದಕಗಳಲ್ಲಿ ಮಣ್ಣು ತುಂಬಿಕೊಂಡಿತ್ತು. ಹಾಗಾಗಿ ಆನೆಗಳು ಕಂದಕವನ್ನು ಸಲಿಸಾಗಿ ಇಳಿದು ಹತ್ತುತ್ತಿದ್ದವು. ಇದೀಗ ಆನೆಗಳು ದಾಟಿ ಬರುವ ಜಾಗವನ್ನು ಗುರ್ತಿಸಿ ತಡೆಗೊಡೆ ನಿರ್ಮಿಸಲಾಗುತ್ತಿದೆ.
ತಡೆ ಗೋಡೆ ನಿರ್ಮಿಸಿದಾಗಿನಿಂದ ಆನೆಗಳು ಜಮೀನುಗಳಿಗೆ ಬಂದಿಲ್ಲ. ಹೀಗೆ ಮುಂದುವರೆದರೆ ತೊಂದರೆಯಿಲ್ಲ. ಆನೆಗಳು ಬೇರೆ ಜಾಗವನ್ನು ಹುಡುಕಿ ಜಮೀನುಗಳಿಗೆ ಬರುವುದನ್ನು ತಪ್ಪಿಸಲೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ರೈತ ಮಹದೇವಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಭಾಗದಲ್ಲಿ ಹೆಚ್ಚು ಆನೆಗಳು ದಾಟುತ್ತಿದ್ದವು ಮತ್ತು ಜಮೀನುಗಳು ಹತ್ತಿರವಿದ್ದುದ್ದರಿಂದ ಫಸಲನ್ನು ನಾಶ ಮಾಡುತ್ತಿದ್ದವು. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಿದಾಗನಿಂದ ಆನೆಗಳು ಬರುವುದು ಕಡಿಮೆಯಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ಅವರು ಹೇಳಿದರು.

ಸದ್ಯಕ್ಕೆ ಹಾವಳಿ ಕಡಿಮೆಯಾಗಿರಬಹುದು. ಆದರೆ, ತೀಕ್ಷ್ಣಮತಿಗಳಾದ ಆನೆಗಳು ‌ಕೃಷಿ ಜಮೀನಿಗೆ ನುಗ್ಗಲು ಬೇರೆ ದಾರಿ ಕಂಡು ಹುಡುಕುತ್ತವೆ. ಹಾಗಾಗಿ, ಅಧಿಕಾರಿಗಳು ತಾತ್ಕಾಲಿಕ ಪರಿಹಾರದ ಬಗ್ಗೆ ಯೋಚಿಸದೆ, ಶಾಶ್ವತವಾಗಿ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸಬೇಕು ಎಂದು ರೈತರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)