ನಕಲಿ ದಾಖಲೆ ಸೃಷ್ಟಿಸಿ ‘ಪೌರತ್ವ’ ಪಡೆದ ಬಾಂಗ್ಲಾ ಪ್ರಜೆ !

ಬುಧವಾರ, ಜೂಲೈ 17, 2019
29 °C
ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ * ಬ್ಯಾಂಕ್‌ ಖಾತೆ ವಿವರದಿಂದ ಗುರುತಿನ ಚೀಟಿ ಪಡೆದ

ನಕಲಿ ದಾಖಲೆ ಸೃಷ್ಟಿಸಿ ‘ಪೌರತ್ವ’ ಪಡೆದ ಬಾಂಗ್ಲಾ ಪ್ರಜೆ !

Published:
Updated:

ಬೆಂಗಳೂರು:‌ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ‘ಭಾರತದ ಪೌರತ್ವ’ ಪಡೆದಿರುವ ಬಾಂಗ್ಲಾ ಪ್ರಜೆ ಅನಿಕ್ ಮಹಮ್ಮದ್ ಇಕ್ತಿಯಾರ್ ಉದ್ದಿನ್ (35) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘2003ರಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿಯ ವೀಸಾ ಅವಧಿ, 2010ರಲ್ಲೇ ಮುಕ್ತಾಯಗೊಂಡಿತ್ತು. ಅದಾದ ಬಳಿಕವೂ ಆತ ಅಕ್ರಮವಾಗಿ ದೇಶದಲ್ಲಿ ನೆಲೆಸಿದ್ದ. ಜೊತೆಗೆ, ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ತಾನೊಬ್ಬ ಭಾರತದ ಪ್ರಜೆ ಎಂದುಕೊಂಡು ಓಡಾಡುತ್ತಿದ್ದ. ಸದ್ಯ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಎಲ್‌ಎಲ್‌ಬಿ’ ವ್ಯಾಸಂಗಕ್ಕೆ ಬಂದಿದ್ದ: ‘ಬಾಂಗ್ಲಾ ದೇಶದ ಕಿಶೋರ್ ಗಂಜ್‌ ಬಳಿಯ ನಗುವ ನಿವಾಸಿಯಾದ ಇಕ್ತಿಯಾರ್ ಉದ್ದಿನ್, ‘ಎಲ್‌ಎಲ್‌ಬಿ’ ವ್ಯಾಸಂಗ ಮಾಡಲೆಂದು ಬೆಂಗಳೂರಿಗೆ ಬಂದಿದ್ದ. ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದ’ ಎಂದು ಅಧಿಕಾರಿ ವಿವರಿಸಿದರು.

‘ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿದ್ದ ಆರೋಪಿ, ಬೆಂಗಳೂರಿನ ಯುನಿವರ್ಸಿಟಿ ಲಾ ಕಾಲೇಜಿನಲ್ಲಿ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿ ಸಹ ಪಡೆದಿದ್ದ. ಅದೇ ಪದವಿ ಬಳಸಿಕೊಂಡು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಆತ, ಭಾರತೀನಗರದ ಅಸ್ಬರ್ನ್‌ ರಸ್ತೆಯ ಕೊಂದಂಡರಾಮ ಬಡಾವಣೆಯಲ್ಲಿ ವಾಸವಿದ್ದ’ ಎಂದರು.

ಗುರುತಿನ ಚೀಟಿ ಸಹ ಪಡೆದ: ‘2010ರಲ್ಲೇ ಆರೋಪಿಯ ವೀಸಾ ಅವಧಿ ಮುಕ್ತಾಯಗೊಂಡಿತ್ತು. ಅದನ್ನು ನವೀಕರಣ ಮಾಡಿಕೊಳ್ಳದೇ ಆತ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಸ್ಥಳೀಯ ಬ್ಯಾಂಕೊಂದರಲ್ಲಿ ಖಾತೆ ತೆರೆದಿದ್ದ ಆರೋಪಿ, ಅದನ್ನೇ ಪ್ರಾಥಮಿಕ ದಾಖಲೆಯನ್ನಾಗಿ ಮಾಡಿಕೊಂಡು ತಾನೊಬ್ಬ ಭಾರತೀಯ ಪ್ರಜೆ ಎಂಬುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಅವುಗಳಿಂದಲೇ ಪಾನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್‌ ಸಹ ಗಿಟ್ಟಿಸಿಕೊಂಡಿದ್ದ’ ಎಂದು ಹೇಳಿದರು.

‘ವೀಸಾ ಅವಧಿ ಮುಗಿದರೂ ಆರೋಪಿ ಭಾರತದಿಂದ ವಾಪಸ್‌ ಹೋಗದೇ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆಸಿದಾಗ ವಿಳಾಸ ಪತ್ತೆಯಾಯಿತು. ಆತನ ಮನೆ ಮೇಲೆಯೇ ದಾಳಿ ಬಂಧಿಸಲಾಯಿತು. ಗುರುತಿನ ಚೀಟಿಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

‘ಒಂಬತ್ತು ವರ್ಷಗಳಿಂದ ಆರೋಪಿ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ. ಆತನ ಉದ್ದೇಶವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !