ಶೂದ್ರರಲ್ಲೇ ಬಲವಾಗಿದೆ ಮನುವಾದ: ಬಸವಲಿಂಗಯ್ಯ

ಗುರುವಾರ , ಮಾರ್ಚ್ 21, 2019
26 °C
ವಿಚಾರ ಸಂಕಿರಣದಲ್ಲಿ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಅಭಿಮತ

ಶೂದ್ರರಲ್ಲೇ ಬಲವಾಗಿದೆ ಮನುವಾದ: ಬಸವಲಿಂಗಯ್ಯ

Published:
Updated:
Prajavani

ಬೆಂಗಳೂರು: ‘ಮನುವಾದ ಶೂದ್ರರಲ್ಲೇ ಬಲವಾಗಿದೆ, ಬ್ರಾಹ್ಮಣರಲ್ಲಲ್ಲ. ಆದರೆ, ಯಾರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅವರು ಚೆನ್ನಾಗಿ ಬಲ್ಲರು’ ಎಂದು ರಾಷ್ಟ್ರೀಯ ನಾಟಕ ಶಾಲೆಯ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದರು.

ದಲಿತ ಹಕ್ಕುಗಳ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮನುವಾದ ಮುಕ್ತ ಭಾರತ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಹುಟ್ಟಿನಿಂದ ಸಾವಿನ ತನಕ ಎಲ್ಲದಕ್ಕೂ ಬ್ರಾಹ್ಮಣರನ್ನೇ ಅವಲಂಬಿಸುವುದನ್ನು ಬಿಟ್ಟು ಆಚೆ ಬರಬೇಕು. ಆಚರಣೆಗಳಿಂದಲೇ ಮನುವಾದಿಗಳು ಜೀವಂತವಾಗಿದ್ದಾರೆ. ‘ಹಿಂದೂ’ ಧರ್ಮವೇ ಅಲ್ಲ. ಅದಕ್ಕೆ ಅಪ್ಪ–ಅಮ್ಮಂದಿರೂ ಇಲ್ಲ. ಇದು ಯಾರಿಂದ ಹುಟ್ಟಿದ್ದು ಎನ್ನುವುದೂ ಗೊತ್ತಿಲ್ಲ’ ಎಂದು ಹೇಳಿದರು.

‘ಹುಟ್ಟಿನ ಮೂಲಕವೇ ಜಾತಿ ಶ್ರೇಷ್ಠ ಎನ್ನುವುದಾದರೆ, ರಾಮಾಯಣ ಬರೆದ ವಾಲ್ಮೀಕಿ ಯಾಕೆ ಶ್ರೇಷ್ಠನಾಗಲಿಲ್ಲ? ದೇವರು, ಧರ್ಮಗಳಿಗೆ ಜೋತು ಬೀಳಬಾರದು. ಜಾತಿಯ ಜಾಡ್ಯ, ಅಮೇಧ್ಯವನ್ನು ತೊಳೆಯಬೇಕಿದೆ’ ಎಂದು ಪ್ರತಿಪಾದಿಸಿದರು.

‘ಚೌಕಿದಾರನ (ಪ್ರಧಾನಿ ಮೋದಿ) ಮುಂದೆಯೇ ಕೊಲೆ, ಅತ್ಯಾಚಾರ, ಅಕ್ರಮಗಳು ನಡೆಯುತ್ತಿದ್ದರೂ ಯಾರು ಏನೂ ಮಾಡಲಾಗುತ್ತಿಲ್ಲ. ಪ್ರಗತಿಪರರು ಇಂಥವರ ನಡೆಯನ್ನು ಪ್ರಶ್ನಿಸಿದರೆ ದೇಶದ್ರೋಹಿ, ಧರ್ಮದ್ರೋಹಿ ಎಂದು ಬಿಂಬಿಸುತ್ತಾರೆ’ ಎಂದು ದೂರಿದರು. 

ಸಾಹಿತಿ ಬಂಜಗೆರೆ ಜಯಪ್ರಕಾಶ್‌, ‘ಮನುವಾದ ಮುಕ್ತ ಭಾರತವೆಂದರೆ ದೇಶವನ್ನು ಸಂವಿಧಾನ ಬದ್ಧಗೊಳಿಸುವುದು. ಸಂವಿಧಾನ ಮನುವಾದದ ವಿಮರ್ಶಾ ಕೃತಿಯೂ ಹೌದು, ಅದಕ್ಕೆ ತದ್ವಿರುದ್ಧವಾದ ಹಾದಿಯೂ ಹೌದು. ಸಂವಿಧಾನ ವಿರೋಧಿಗಳೇ ಮನುವಾದಿಗಳು’ ಎಂದು ಟೀಕಿಸಿದರು.

‘ಜಾತಿಯಿಂದಾಗಿ ಹುಟ್ಟುವ ಕೀಳರಿಮೆ, ಅವಮಾನ ತೊಡೆಯಬೇಕಿದೆ. ಬಹುಸಂಖ್ಯೆಯಲ್ಲಿರುವ ಸಾಮಾನ್ಯ ಜನ, ಜಾತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಕುಗ್ಗುತ್ತಾರೆ, ಹಿಂಜರಿಯುತ್ತಾರೆ. ದೇಶದ ಬುಡಕಟ್ಟು ಜನಾಂಗಗಳಲ್ಲಿ ಜಾತಿಗಳಿದ್ದವು. ಆದರೆ, ಭೇದಗಳಿರಲಿಲ್ಲ’ ಎಂದರು.

‘ಅತಾರ್ಕಿಕ ಮೇಲು-ಕೀಳಿನ ವಾದಕ್ಕೆ ಭೌತಿಕ ಆಧಾರಗಳಿಲ್ಲ. ಸಾಮಾಜಿಕ ಚಲನೆಯನ್ನು ಅಸಾಧ್ಯಗೊಳಿಸಿದ್ದೇ ಮನುವಾದ. ಜಾತಿ ಮೈಗಂಟಿದ ಚರ್ಮ, ಹೆರೆದಷ್ಟು ಬೆಳೆಯುತ್ತಲೇ ಇರುತ್ತದೆ. ಜಾತಿಗಂಟಿದ ಕೀಳುತನವನ್ನು ತೊಳೆಯಬೇಕಿದೆ. ಅದಕ್ಕಾಗಿ ಸಂವಿಧಾನ ಬೇಕಿದೆ’ ಎಂದು ಅಭಿಪ್ರಾಯಪಟ್ಟರು.

***

ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಜಾತಿ ಧ್ರುವೀಕರಣ ಮಾಡುತ್ತಿವೆ. ನ್ಯಾಯಾಂಗ ಸೇರಿದಂತೆ ದೇಶದ ನಾಲ್ಕೂ ಆಧಾರ ಸ್ತಂಭಗಳು ಭ್ರಷ್ಟಗೊಂಡಿವೆ
-ಸಿ.ಬಸವಲಿಂಗಯ್ಯ, ರಂಗ ನಿರ್ದೇಶಕ, ರಾಷ್ಟ್ರೀಯ ನಾಟಕ ಶಾಲೆ

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 0

  Frustrated
 • 12

  Angry

Comments:

0 comments

Write the first review for this !