ಗುರುಗಳ ಮಾತು ಉಳಿಸಿದ್ದಕ್ಕೆ ಪ್ರಶಸ್ತಿ: ಜಿ.ವೆಂಕಟಸುಬ್ಬಯ್ಯ

7
ಭಾಷಾ ಸಮ್ಮಾನ್‌ ಪ್ರಶಸ್ತಿ ಸ್ವೀಕರಿಸಿದ ನಿಘಂಟು ತಜ್ಞ

ಗುರುಗಳ ಮಾತು ಉಳಿಸಿದ್ದಕ್ಕೆ ಪ್ರಶಸ್ತಿ: ಜಿ.ವೆಂಕಟಸುಬ್ಬಯ್ಯ

Published:
Updated:

ಬೆಂಗಳೂರು: ಗುರುಗಳ ಮಾತು ಉಳಿಸಿದ ಕಾರಣಕ್ಕೆ ಪ್ರಶಸ್ತಿ ಬಂದಿದೆ ಎಂದು ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಹೇಳಿದರು. 

ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಲಾದ ‘ಭಾಷಾ ಸಮ್ಮಾನ್‌’ ಪ್ರಶಸ್ತಿ ಸ್ವೀಕರಿಸಿ ಮಂಗಳವಾರ ಅವರು ಮಾತನಾಡಿದರು. 

‘ಕನ್ನಡವನ್ನು ನಿಮ್ಮ ಕೈಗಿಟ್ಟಿದ್ದೇನೆ. ಕಾಪಾಡಿಕೊಂಡು ಹೋಗಿ ಎಂದು ಗುರುಗಳಾಗಿದ್ದ ಬಿ.ಎಂ.ಶ್ರೀಕಂಠಯ್ಯ ಹೇಳಿದ್ದರು. ಅದರಂತೆಯೇ ಮುಂದೆ ಕನ್ನಡ ಭಾಷೆಯ ಮೇಲೆ ಅಧ್ಯಯನ ಸಾಗಿತು. ನಿಘಂಟು ಸಿದ್ಧಪಡಿಸುವಾಗ ಗುರುಗಳ ಜತೆ ಕೆಲಸ ಮಾಡಿದೆ. ಪ್ರತಿಯೊಂದು ಶಬ್ದಕ್ಕೂ ಪಾರಿಭಾಷಿಕ ಶಬ್ದ, ಜನರ ಆಡುಭಾಷೆಯ ನುಡಿ ಹುಡುಕಬೇಕಿತ್ತು. ಇದು ಬಹಳ ದೀರ್ಘಕಾಲ ತೆಗೆದುಕೊಂಡಿತು. ಆಗ ಗುರುಗಳು ಇದು ನನ್ನ ಕಾಲದಲ್ಲಿ ಮುಗಿಯುವುದಿಲ್ಲ. ನೀವು ಮುಂದುವರಿಸಿ ಎಂದರು. ಹಾಗೆ ಮುಂದುವರಿಸಿದೆ. ಆ ಪುಣ್ಯದ ಫಲವೇ ಈ ಗೌರವ’ ಎಂದು ಭಾವುಕರಾದರು. 

ಪ್ರಜಾವಾಣಿಯ ಅಂಕಣ

‘1991ರಿಂದ ‘ಪ್ರಜಾವಾಣಿ’ಯಲ್ಲಿ ಇಗೋ ಕನ್ನಡ ಅಂಕಣವನ್ನು 18 ವರ್ಷಗಳ ಕಾಲ ಬರೆದೆ. ಅದೊಂದು ದೊಡ್ಡ ಕೃತಿಯಾಯಿತು ಎಂದು ಸ್ಮರಿಸಿದ ಅವರು, ಭಾಷೆಯ ಹಿರಿಮೆ, ಶುದ್ಧತೆ ಉಳಿಸುವಲ್ಲಿ ವೃತ್ತಪತ್ರಿಕೆಗಳ ಜವಾಬ್ದಾರಿ ದೊಡ್ಡದು’ ಎಂದರು. 

‘ಕನ್ನಡ ಭಾಷೆಯ ಪ್ರಯೋಗದಲ್ಲಿ ಸಾಕಷ್ಟು ಸ್ಥಿತ್ಯಂತರಗಳು ಆಗುತ್ತಿವೆ. ಯುವ ಬರಹಗಾರರ ಬರಹದಲ್ಲಿ ಅದನ್ನು ಗಮನಿಸುತ್ತಿದ್ದೇನೆ. ಕನ್ನಡವನ್ನೇ ಮತ್ತಷ್ಟು ಪಕ್ವವಾಗಿ ಬಳಸಬೇಕು. ಆದರೆ, ಈ ಭಾಷೆಯ ನಡುವೆ ಇಂಗ್ಲಿಷ್‌ ಶಬ್ದಗಳನ್ನು ತುರುಕುವುದಕ್ಕೆ ನನ್ನ ವಿರೋಧವಿದೆ’ ಎಂದರು. 

ಸರಿಗನ್ನಡ ಚಳವಳಿ

ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಸರಿಯಾಗಿ ಭಾಷೆಯನ್ನು ಕಲಿಸುವ ಕೆಲಸ ಆಗಬೇಕು. ಅದಕ್ಕಾಗಿ ಸರಿಗನ್ನಡ ಚಳವಳಿ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ಬಾರಿಯ ಭಾಷಾ ಸಮ್ಮಾನ್‌ ಪುರಸ್ಕೃತ ಸಾಹಿತಿ ಹಂಪ ನಾಗರಾಜಯ್ಯ ಅವರು ವೆಂಕಟಸುಬ್ಬಯ್ಯ ಕುರಿತು ಮಾತನಾಡಿದರು. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಸದಸ್ಯ ಸಿದ್ದಲಿಂಗಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !