ಮಳಿಗೆಗಳ ಮೇಲೆ ದಾಳಿ: 180 ಟನ್‌ ಫ್ಲೆಕ್ಸ್‌ ಸಾಮಗ್ರಿ ವಶ

7

ಮಳಿಗೆಗಳ ಮೇಲೆ ದಾಳಿ: 180 ಟನ್‌ ಫ್ಲೆಕ್ಸ್‌ ಸಾಮಗ್ರಿ ವಶ

Published:
Updated:
Deccan Herald

ಬೆಂಗಳೂರು: ಫ್ಲೆಕ್ಸ್‌ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಖಡಕ್‌ ಸೂಚನೆ ನಂತರ, ಬಿಬಿಎಂಪಿ ಅಧಿಕಾರಿಗಳ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ಕೇವಲ ಫ್ಲೆಕ್ಸ್‌ಗಳನ್ನು ತೆಗೆಯುವುದಷ್ಟೇ ಅಲ್ಲದೆ, ಅದನ್ನು ಸಿದ್ಧಪಡಿಸುವ ಮಳಿಗೆಗಳ ಮೇಲೂ ದಾಳಿ ನಡೆಸಿ, ದಂಡ ವಿಧಿಸುತ್ತಿದ್ದಾರೆ.

ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌ಗಳನ್ನು ತೆರವು ಮಾಡುವುದಾಗಿ ಬಿಬಿಎಂಪಿ ಆಡಳಿತ ಒಂದು ವರ್ಷದಿಂದ ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿತ್ತೇ ಹೊರತು, ಅಗತ್ಯವಾದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಈಗ ಎಲ್ಲಾ ಅಧಿಕಾರಿಗಳು ನಗರವನ್ನೆಲ್ಲ ಸುತ್ತುತ್ತಿದ್ದು, ಫ್ಲೆಕ್ಸ್‌ ಮುಕ್ತಗೊಳಿಸಲು ಶ್ರಮಿಸುತ್ತಿದ್ದಾರೆ.

ಫ್ಲೆಕ್ಸ್‌ ಮುದ್ರಿಸುವ ಘಟಕಗಳ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು 188 ಟನ್‌ಗಳಷ್ಟು ಫ್ಲೆಕ್ಸ್‌ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ₹92 ಸಾವಿರದಷ್ಟು ದಂಡ ವಸೂಲಿ ಮಾಡಿದ್ದಾರೆ. 

‘ಕೋರ್ಟ್‌’ಗೆ ಶಹಬ್ಬಾಸ್‌ಗಿರಿ
ನಿದ್ದೆ ಮಾಡುತ್ತಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಕೋರ್ಟ್‌ ಛಡಿ ಏಟು ನೀಡಿ ಎಬ್ಬಿಸಿದೆ. ಮತ್ತೆ ಅವರು ಮಲಗದಂತೆ ನೋಡಿಕೊಳ್ಳೊಣ ಎಂದು ಸುರೇಶ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

‘ಮಹದೇವಪುರ ವಲಯದ ಎಲ್ಲಾ ಫ್ಲೆಕ್ಸ್‌ ತಯಾರಿಕಾ ಘಟಕಗಳನ್ನು ಮುಚ್ಚಿಸಲಾಗಿದೆ. ಕಾನೂನಿನಲ್ಲಿ ನಿರ್ಬಂಧವಿದ್ದರೂ ಇಲ್ಲಿಯವರೆಗೆ ಈ ಘಟಕಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದವು’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ ಪ್ರಶ್ನಿಸಿದೆ.

‘ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದ ಫ್ಲೆಕ್ಸ್‌ಗಳನ್ನು ತೆರವು ಮಾಡುವಂತೆ ಸಾಕಷ್ಟು ಬಾರಿ ಪ್ರತಿಭಟಿಸಿದರೂ ತಲೆಕೆಡಿಸಿಕೊಳ್ಳದ ಬಿಬಿಎಂಪಿಗೆ ಈಗ ಚುರುಕು ಮುಟ್ಟಿದೆ ಎಂದು ‘ನಮ್ಮ ಬೆಂಗಳೂರು’ ಸಂಘಟನೆ ಟ್ವಿಟರ್‌ನಲ್ಲಿ ಟೀಕಿಸಿದೆ.

‘ಕುರೂಪಗೊಳಿಸುವುದು ಬೇಡ’

‘ಫ್ಲೆಕ್ಸ್‌ಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಆದೇಶ ಮತ್ತು ಬಿಬಿಎಂಪಿ ಕೈಗೊಳ್ಳುತ್ತಿರುವ ಕ್ರಮಗಳನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್‌ ಪಕ್ಷ ಈ ಪ್ರಕ್ರಿಯೆಗೆ ಸಂಪೂರ್ಣವಾಗಿ ಬೆಂಬಲ ನೀಡಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

‘ನಗರವನ್ನು ಕುರೂಪಗೊಳಿಸುವ ಕಾರ್ಯ ಇನ್ನುಮುಂದೆ ನಡೆಯದಂತೆ ಜಾಗೃತಿ ವಹಿಸಬೇಕು ಎಂದು ನಾನು ಎಲ್ಲ ಪಕ್ಷಗಳ ಮುಖಂಡರಿಗೆ ಮನವಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಬೆಂಗಳೂರನ್ನು ಮತ್ತೆ ಸುಂದರವಾಗಿಸೋಣ’ ಎಂದು ಅವರು ಕೋರಿದ್ದಾರೆ.

ಫ್ಲೆಕ್ಸ್ ತೆರವು ವೇಳೆ ಹಲ್ಲೆ; ನಾಲ್ವರ ಸೆರೆ

ಮಹದೇವಪುರ ವಲಯದ ಟಿನ್‌ಫ್ಯಾಕ್ಟರಿ ಬಳಿ ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವುಗೊಳಿಸುತ್ತಿದ್ದ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದವರ ಪೈಕಿ ನಾಲ್ವರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಎ.ನಾರಾಯಣಪುರದ ಕಮಲ್‌ನಾಥ್, ಸೂರ್ಯ, ಸ್ಯಾಮ್ಸನ್ ಹಾಗೂ ರಾಜೇಂದ್ರನ್ ಎಂಬುವರನ್ನು ಬಂಧಿಸಲಾಗಿದೆ. ಸಂತೋಷ್ ಹಾಗೂ ಸರವಣ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಆರೋಪಿಗಳೆಲ್ಲ ಕೂಲಿ ಕಾರ್ಮಿಕರಾಗಿದ್ದು, ಮಹದೇವಪುರ ವಲಯದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಇವರೇ ಕಟ್ಟುತ್ತಾರೆ. ಅಂತೆಯೇ ವಾರದ ಹಿಂದೆ ಟಿನ್‌ಫ್ಯಾಕ್ಟರಿ ಬಳಿ ಬೃಹತ್ ಫ್ಲೆಕ್ಸ್‌ಗಳನ್ನು ಹಾಕಿದ್ದರು.

ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ಪ್ರಾರಂಭಿಸಿದ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಬಿ.ವಿ.ಎನ್‌ ಭಟ್ಟಚಾರ್ ನೇತೃತ್ವದ ತಂಡ, ಆ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಮುಂದಾಗಿತ್ತು. ಈ ವೇಳೆ ಗಲಾಟೆ ಪ್ರಾರಂಭಿಸಿದ್ದ ಆರೋಪಿಗಳು, ಚಂದನ್ ಹಾಗೂ ಮನು ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಭಟ್ಟಚಾರ್ ಕೊಟ್ಟ ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.  

‘ಆರೋಪಿಗಳು ರಿಯಲ್ ಎಸ್ಟೇಟ್ ನಡೆಸುವ ಸತೀಶ್ ರೆಡ್ಡಿ, ಸುಬ್ಬಾರೆಡ್ಡಿ ಎಂಬುವರ ಪರಿಚಿತರು. ರಾಜಕಾರಣಿಗಳ ಆಪ್ತರು ಎಂಬುದು ಖಚಿತವಾಗಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಖಡಕ್ ಎಚ್ಚರಿಕೆ

ಫ್ಲೆಕ್ಸ್ ತೆರವು ವಿಚಾರದಲ್ಲಿ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ಶುಕ್ರವಾರ ಸಂಜೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ‘ಕಾರ್ಯಾಚರಣೆಗೆ ತೆರಳುವ ತಂಡಗಳಿಗೆ ಸೂಕ್ತ ರಕ್ಷಣೆ ಒದಗಿಸಿ. ಫ್ಲೆಕ್ಸ್ ತೆರವಿಗೆ ಯಾರೇ ಅಡ್ಡಿಪಡಿಸಿದರೂ ಎಫ್‌ಐಆರ್ ದಾಖಲಿಸಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ’ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.

‘ಮಹದೇವಪುರದಲ್ಲಿ ನಡೆದ ಘಟನೆ ಮರುಕಳಿಸಬಾರದು. ಕಾರ್ಯಾಚರಣೆಗೆ ಅಡ್ಡಿಯಾದರೆ, ಆ ವ್ಯಾಪ್ತಿಯ ಇನ್‌ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿಯೇ ನೇರ ಹೊಣೆಯಾಗಬೇಕಾಗುತ್ತದೆ’ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !