ಒಎಫ್‌ಸಿ: ಸಮಗ್ರ ಪರಿಶೀಲನೆಗೆ ಸರ್ವಪಕ್ಷ ಸಮಿತಿ

7
ಕೇಬಲ್‌ ಮಾಫಿಯಾ ಜೊತೆ ಅಧಿಕಾರಿಗಳು ಶಾಮೀಲು– ಆರೋಪ

ಒಎಫ್‌ಸಿ: ಸಮಗ್ರ ಪರಿಶೀಲನೆಗೆ ಸರ್ವಪಕ್ಷ ಸಮಿತಿ

Published:
Updated:
Deccan Herald

ಬೆಂಗಳೂರು: ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಅಳವಡಿಕೆಗೆ ಪರವಾನಗಿ ನೀಡುವ ವಿಚಾರದಲ್ಲಿ ಸಮಗ್ರ ಬದಲಾವಣೆ ತರುವ ಬಗ್ಗೆ ಅಧ್ಯಯನ ನಡೆಸಲು ಸರ್ವಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಮೇಯರ್‌ ಆರ್.ಸಂಪತ್‌ರಾಜ್‌ ತಿಳಿಸಿದರು.

ಒಎಫ್‌ಸಿ ಶುಲ್ಕ ಸಂಗ್ರಹ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ ಎಂದು ಬುಧವಾರ ನಡೆದ ಪಾಲಿಕೆ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದೆ ಮೇಯರ್‌, ‘ ಅಕ್ರಮಗಳ ಬಗ್ಗೆಯೂ ಸಮಿತಿ ಪರಿಶೀಲಿಸಲಿ’ ಎಂದರು.

ಕಾಂಗ್ರೆಸ್‌ ಸದಸ್ಯ ಎಂ.ಕೆ.ಗುಣಶೇಖರ, ‘ಕೇಬಲ್‌ ಮಾಫಿಯಾ ಜೊತೆ ಅಧಿಕಾರಿಗಳು ಶಾಮೀಲಾಗಿರುವುದರಿಂದ ಪಾಲಿಕೆಗೆ ಪರವಾನಗಿ ಶುಲ್ಕ ಹಾಗೂ ದಂಡನಾ ಶುಲ್ಕ ವಸೂಲಿ ಸರಿಯಾಗಿ ಆಗುತ್ತಿಲ್ಲ. ಇದರಿಂದ ಪಾಲಿಕೆ ವರಮಾನ ಖೋತಾ ಆಗುತ್ತಿದೆ’ ಎಂದು ಆರೋಪಿಸಿದರು.

‘ನಗರದಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಕೇಬಲ್ ಅಳವಡಿಸಿವೆ. ಆದರೆ, ಕೇವಲ 09 ಕಂಪನಿಗಳು ಕಾರ್ಯಾಚರಿಸುತ್ತಿವೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. 2013ರಿಂದ 2016ರ ನಡುವೆ ಮೂರು ವರ್ಷಗಳಲ್ಲಿ ರಸ್ತೆ ಕತ್ತರಿಸಲು ನೀಡಿದ್ದ ಪರವಾನಗಿ ಶುಲ್ಕದಿಂದ ₹ 276 ಕೋಟಿ ಸಂಗ್ರವಾಗಿದೆ ಎಂದು ತಿಳಿಸಿದ್ದಾರೆ. ಇದುವರೆಗಿನ ಪೂರ್ಣ ಮಾಹಿತಿ ಒದಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಬಿ.ಎಸ್‌.ಸತ್ಯನಾರಾಯಣ, ‘ಕಂಪನಿಗಳಿಂದ ಶುಲ್ಕ ಸಂಗ್ರಹಿಸಲು ಪಾಲಿಕೆ ಸದಸ್ಯರ ತಂಡ ರಚಿಸಿದಾಗ ಒಂದೇ ವರ್ಷದಲ್ಲಿ ₹ 268 ಕೋಟಿ ಶುಲ್ಕ ಸಂಗ್ರಹವಾಗಿತ್ತು. ಮೂರು ವರ್ಷಗಳಲ್ಲಿ ₹ 276 ಕೋಟಿ ಮಾತ್ರ ಸಂಗ್ರಹವಾಗಿದೆ ಎಂದರೆ ಏನರ್ಥ’ ಎಂದು ಪ್ರಶ್ನಿಸಿದರು.

‘ಮೂರು ವರ್ಷಗಳಲ್ಲಿ ಅನೇಕ ಬಾರಿ ಸೇವಾ ಕಂಪನಿಗಳಿಗೆ ಅನಧಿಕೃತ ಕೇಬಲ್‌ ತೆಗೆಯುವಂತೆ ಸೂಚನೆ ನೀಡಿದ್ದರೂ ತೆರವುಗೊಳಿಸಿಲ್ಲ. ಪಾಲಿಕೆ ವತಿಯಿಂದಲೇ ತೆರವುಗೊಳಿಸಿದಾಗ, ಗ್ರಾಹಕರಿಗೆ ತೊಂದರೆ ಆಗುತ್ತದೆ ಎಂದು ಗುಲ್ಲೆಬ್ಬಿಸಿದ್ದಾರೆ’ ಎಂದು ಗುಣಶೇಖರ ದೂರಿದರು.

‘ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ಕೇಬಲ್‌ ತೆರವು ಕಾರ್ಯಾಚರಣೆ ನಡೆಸಿದ್ದೆ. ಆಗ ಎಂಜಿನಿಯರ್‌ ಒಬ್ಬರು ಕೇಬಲ್‌ ಮಾಫಿಯಾದವರೊಬ್ಬರಲ್ಲಿ, ‘ಇವರು ಒಂದೆರಡು ತಿಂಗಳಷ್ಟೇ ಅಧ್ಯಕ್ಷರಾಗಿರುತ್ತಾರೆ. ಈಗ ತೆಗೆಸಿದ ಕೇಬಲ್‌ ಮತ್ತೆ ಅಳವಡಿಸಬಹುದು’ ಎಂದು ಪಿಸುಮಾತಿನಲ್ಲಿ ಹೇಳಿದ್ದನ್ನು ಕೇಳಿಸಿಕೊಂಡಿದ್ದೆ. ಪಾಲಿಕೆ ವರಮಾನ ಹೆಚ್ಚಳದ ಬಗ್ಗೆ ಅಧಿಕಾರಿಗಳ ಕಾಳಜಿಯನ್ನು ಇದು ತೋರಿಸುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಪ್ರತಿ ಕಿ.ಮೀ ಕೇಬಲ್‌ ಅಳವಡಿಕೆಗೆ ₹ 5 ಲಕ್ಷ ಶುಲ್ಕ ವಸೂಲಿ ಮಾಡಲು ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ನಮ್ಮಲ್ಲಿ ಈಗಲೂ ಕೇವಲ ₹ 50 ಸಾವಿರ ವಸೂಲಿ ಮಾಡಲಾಗುತ್ತಿದೆ. ಪಾಲಿಕೆ ಆದಾಯ ಹೆಚ್ಚಿಸುವ ಪರ್ಯಾಯ ಮಾರ್ಗಗಳತ್ತಲೂ ಆಲೋಚನೆ ಮಾಡಬೇಕು’ ಎಂದು ಸಲಹೆ ನೀಡಿದರು.

***

ಅಂಕಿ ಅಂಶ

14: ನಗರದಲ್ಲಿ ಒಎಫ್‌ಸಿ ಅಳವಡಿಸಿರುವ ದೂರವಾಣಿ ಸೇವಾ ಕಂಪನಿಗಳು

17: ಒಎಫ್‌ಸಿ ಅಳವಡಿಸಿರುವ ದೂರವಾಣಿಯೇತರ ಸೇವಾ ಕಂಪನಿಗಳು

₹94.39 ಕೋಟಿ: 2013–14ರಲ್ಲಿ ಒಎಫ್‌ಸಿ ಪರವಾನಗಿಯಿಂದ ಸಂಗ್ರಹವಾದ ಮೊತ್ತ

₹ 104.67 ಕೋಟಿ: 2014–15ರಲ್ಲಿ ಸಂಗ್ರಹವಾದ ಮೊತ್ತ

₹76.95 ಕೋಟಿ: 2015–16ರಲ್ಲಿ ಸಂಗ್ರಹವಾದ ಮೊತ್ತ

*****

 

‘ಪಾಲಿಕೆ ಎದುರು ಧರಣಿ ನಡೆಸುವೆ’

‘ಒಎಫ್‌ಸಿ ಕಂಪನಿಗಳಿಂದ ಸಮರ್ಪಕವಾಗಿ ಶುಲ್ಕ ವಸೂಲಿ ಮಾಡದಿರುವುದು ಆರ್ಥಿಕ ಅಪರಾಧ.
ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಕೇಬಲ್ ತೆರವುಗೊಳಿಸದಿದ್ದರೆ ಹಾಗೂ ಈ ಅಕ್ರಮ ನಡೆಸಿದ ಕಂಪನಿಗಳಿಂದ ದಂಡ ವಸೂಲಿ ಮಾಡದಿದ್ದರೆ ಪಾಲಿಕೆ ಕಚೇರಿ ಎದುರು ಧರಣಿ ನಡೆಸುತ್ತೇನೆ’ ಎಂದು ಗುಣಶೇಖರ ತಿಳಿಸಿದರು.

‘ಧರಣಿಯಲ್ಲಿ ನಾವೂ ಪಾಲ್ಗೊಳ್ಳುತ್ತೇವೆ’ ಎಂದು ಬಿಜೆಪಿ ಸದಸ್ಯರು ದನಿ ಗೂಡಿಸಿದರು.

***

‘ದೂರಸಂಪರ್ಕ ಗೋಪುರ– ಶುಲ್ಕ ಹೆಚ್ಚಿಸಿ’

‘ಹಿಮಾಚಲ ಪ್ರದೇಶದಲ್ಲಿ ಪ್ರತಿ ದೂರವಾಣಿ ಗೋಪುರ ಅಳವಡಿಕೆಗೆ ₹ 20 ಸಾವಿರ ಶುಲ್ಕ, ಹಾಗೂ ₹ 10ಸಾವಿರ ವಾರ್ಷಿಕ ಬಾಡಿಗೆ ಪಡೆಯಲಾಗುತ್ತದೆ. ದೆಹಲಿ ಪಾಲಿಕೆ (ಎಂಸಿಡಿ) ₹ 5 ಲಕ್ಷ ಅಳವಡಿಕೆ ಶುಲ್ಕ ಹಾಗೂ ₹ 1 ಲಕ್ಷ ವಾರ್ಷಿಕ ಬಾಡಿಗೆ ವಿಧಿಸುತ್ತಿದೆ. ನಮ್ಮಲ್ಲಿ ಕೇವಲ ₹ 50ಸಾವಿರ ಅಳವಡಿಕೆ ಶುಲ್ಕವನ್ನು ಮಾತ್ರ ಪಡೆಯಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು’ ಎಂದು ಪದ್ಮನಾಭ ರೆಡ್ಡಿ ಸಲಹೆ ನೀಡಿದರು.

 

ಒಎಫ್‌ಸಿ ಕಂಪನಿಗಳಿಂದ ಸಮರ್ಪಕವಾಗಿ ಶುಲ್ಕ ವಸೂಲಿ ಮಾಡದಿರುವುದು ಆರ್ಥಿಕ ಅಪರಾಧ
ಎಂ.ಕೆ.ಗುಣಶೇಖರ, ಪಾಲಿಕೆ ಸದಸ್ಯ

ಹೊಸತಾಗಿ ಡಾಂಬರೀಕರಣಗೊಂಡ ರಸ್ತೆಯನ್ನು 2 ವರ್ಷ ಅಗೆಯಬಾರದು ಎಂಬ ನಿಯಮವಿದೆ. ಆದರೂ ಒಎಫ್‌ಸಿ ವಿಭಾಗದ ಅಧಿಕಾರಿಗಳು ರಸ್ತೆ ಅಗೆಯಲು ಕಣ್ಣುಮುಚ್ಚಿ ಅನುಮತಿ ನೀಡುತ್ತಿದ್ದಾರೆ– ಉಮೇಶ್‌ ಶೆಟ್ಟಿ, ಬಿಜೆಪಿ ಸದಸ್ಯ

 

ಅನಧಿಕೃತವಾಗಿ ಕೇಬಲ್‌ ಅಳವಡಿಸಿದವರನ್ನು ಬಂಧಿಸಿ, ಶಿಕ್ಷೆ ವಿಧಿಸಿ. ಇಲ್ಲದಿದ್ದರೆ ಈ ಹಾವಳಿ ನಿಲ್ಲದು
ಮಂಜುಳಾ ನಾರಾಯಣಸ್ವಾಮಿ, ಜೆಡಿಎಸ್‌ ಸದಸ್ಯೆ

ಕೇಬಲ್ ವಿಚಾರದಲ್ಲೂ ಹೈಕೋರ್ಟ್‌ನಿಂದ ಛಿಮಾರಿ ಹಾಕಿಸಿಕೊಳ್ಳುವ ಮುನ್ನ ಎಲ್ಲ ಅನಧಿಕೃತ ಕೇಬಲ್‌ಗಳನ್ನು ತೆಗೆಸಿ– ಸಂಪತ್‌ರಾಜ್‌, ಮೇಯರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !