ಹೂಳೆತ್ತುವುದಕ್ಕೂ ಇನ್ನು ಹೈಟೆಕ್‌ ಸ್ಪರ್ಶ 

7
ರಾಜಕಾಲುವೆ ನಿರ್ವಹಣೆ: ಅಲ್ಪಾವಧಿ ಟೆಂಡರ್‌ ಕರೆದ ಬಿಬಿಎಂಪಿ

ಹೂಳೆತ್ತುವುದಕ್ಕೂ ಇನ್ನು ಹೈಟೆಕ್‌ ಸ್ಪರ್ಶ 

Published:
Updated:
Deccan Herald

ಬೆಂಗಳೂರು: ರಾಜಕಾಲುವೆಗಳ ಹೂಳೆತ್ತುವ ಪ್ರಕ್ರಿಯೆಗೆ ಹೈಟೆಕ್‌ ಸ್ಪರ್ಶ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಹೂಳೆತ್ತುವ ಪ್ರಕ್ರಿಯೆ ಬಹುತೇಕ ಸ್ವಯಂಚಾಲಿತಗೊಳ್ಳಲಿದೆ. 

ನಗರದ ಪ್ರಮುಖ ರಾಜಕಾಲುವೆಗಳ ವಾರ್ಷಿಕ ನಿರ್ವಹಣೆಯನ್ನು ಇನ್ನುಮುಂದೆ ಪಾಲಿಕೆ ಗುತ್ತಿಗೆ ನೀಡಲಿದ್ದು, ಇದಕ್ಕಾಗಿ ಅ. 27ರಂದು ಅಲ್ಪಾವಧಿ ಟೆಂಡರ್‌ ಕರೆದಿದೆ. ಇದರಲ್ಲಿ ಹೂಳೆತ್ತುವ ಪ್ರಕ್ರಿಯೆ ಸುಧಾರಣೆ ಸಲುವಾಗಿ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.

‘ಗುತ್ತಿಗೆ ಪಡೆದ ಸಂಸ್ಥೆ ಹೂಳೆತ್ತುವುದಕ್ಕೆ ರೊಬೋಟಿಕ್‌ ಯಂತ್ರಗಳನ್ನ ಬಳಸಬೇಕು. ಎತ್ತಿದ ಹೂಳನ್ನು ಸಾಗಿಸುವುದಕ್ಕೂ ಹೈಡ್ರಾಲಿಕ್‌ ಬಾಗಿಲಿನ ವ್ಯವಸ್ಥೆ ಹೊಂದಿರುವ ಟಿಪ್ಪರ್‌ಗಳನ್ನೇ ಬಳಸಬೇಕು. ಈ ಟಿಪ್ಪರ್‌ಗಳು ಒಂದು ಹನಿ ನೀರೂ ಹೊರಗೆ ಸೋರದಂತೆ ತಡೆಯುವ ವ್ಯವಸ್ಥೆ (ಗ್ಯಾಸ್ಕೆಟ್‌) ಹೊಂದಿರಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದೇವೆ’ ಎಂದು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಲುವೆಯಿಂದ ಕ್ವಾರಿಗೆ: ‘ಈ ಹಿಂದೆ ಕಾಲುವೆಯ ಹೂಳನ್ನು ಪಕ್ಕದಲ್ಲಿ ರಾಶಿ ಹಾಕಲಾಗುತ್ತಿತ್ತು. ಅದರ ನೀರಿನಂಶ ಬಸಿದು ಹೋದ ಬಳಿಕ ಅದನ್ನು ಬೇರೆ ಕಡೆಗೆ ಸಾಗಿಸಲಾಗುತ್ತಿತ್ತು. ಇನ್ನುಮುಂದೆ ಕಾಲುವೆಯಿಂದ ಎತ್ತಿದ ಹೂಳನ್ನು ನೇರವಾಗಿ ಟಿಪ್ಪರ್‌ ಲಾರಿ ಮೂಲಕ ಕ್ವಾರಿಗೆ ಸಾಗಿಸಲಾಗುತ್ತದೆ. ಕಣ್ಣೂರು ಹಾಗೂ ಮೈಲಸಂದ್ರದ ಕ್ವಾರಿಗಳನ್ನು ಹೂಳು ತುಂಬಲು ಬಳಸುತ್ತೇವೆ’ ಎಂದರು.

ಸಕಾಲದಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸದ ಕಾರಣ ಹಾಗೂ ಹೂಳೆತ್ತದ ಕಾರಣ ಅನೇಕ ಕಡೆ ರಾಜಕಾಲುವೆ ಕಟ್ಟಿಕೊಳ್ಳುತ್ತಿತ್ತು. ಮಳೆ ಬಂದಾಗಲಂತೂ ಕಾಲುವೆ ಉಕ್ಕಿ ಹರಿದು ಅಕ್ಕಪಕ್ಕದ ಮನೆಗಳಿಗೆ ನೀರು ತುಂಬುತ್ತಿತ್ತು. ಮಳೆಗಾಲ ಬಂದು ಸಮಸ್ಯೆ ಸೃಷ್ಟಿಯಾದಾಗ ಪಾಲಿಕೆ ಎಚ್ಚೆತ್ತುಕೊಳ್ಳುತ್ತಿತ್ತು. ಬಿಲ್‌ಗಳು ಸಕಾಲದಲ್ಲಿ ಪಾವತಿ ಆಗುವುದಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರು ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ಕಾಲುವೆ ಹೂಳೆತ್ತಲು ಹಿಂದೇಟು ಹಾಕುತ್ತಿದ್ದರು.

ನಗರದ ಅಷ್ಟೂ ಕಾಲುವೆಗಳನ್ನು ಒಮ್ಮೆಲೆ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿರಲಿಲ್ಲ. ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಇದುವರೆಗೆ ತುಂಡು ಗುತ್ತಿಗೆ ಮೂಲಕ ನಿರ್ವಹಿಸಲಾಗುತ್ತಿತ್ತು. ಇದೇ ಮೊದಲ ಬಾರಿ ಸಮಗ್ರ ಕಾಲುವೆ ನಿರ್ವಹಣೆಯ ಹೊಣೆಯನ್ನು ಒಂದೇ ಸಂಸ್ಥೆಗೆ ವಹಿಸಲಾಗುತ್ತಿದೆ.

‘ಕಾಲುವೆ ನಿರ್ವಹಣೆಯನ್ನು ಗುತ್ತಿಗೆ ಪಡೆಯುವ ಸಂಸ್ಥೆಯೇ ಈ ಎಲ್ಲ ಕಾರ್ಯಗಳನ್ನು ನಡೆಸಲಿದೆ. ಹಾಗಾಗಿ ರಾಜಕಾಲುವೆ ಕಟ್ಟಿಕೊಳ್ಳುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಪ್ರಹ್ಲಾದ್‌ ವಿಶ್ವಾಸ ವ್ಯಕ್ತಪಡಿಸಿದರು.

‘14ನೇ ಹಣಕಾಸು ಆಯೋಗದ ಅನುದಾನವನ್ನು ಇದಕ್ಕೆ ಬಳಸಿಕೊಳ್ಳಲಿದ್ದೇವೆ. ರಾಜಕಾಲುವೆ ನಿರ್ವಹಣೆಗೆ ಅಗತ್ಯವಿರುವ ಸಲಕರಣೆ, ಸಾಮಗ್ರಿ ಹಾಗೂ ಅಗತ್ಯ ಮಾನವ ಸಂಪನ್ಮೂಲವನ್ನು ಪೂರೈಸುವ ಜವಾಬ್ದಾರಿಯು ಗುತ್ತಿಗೆ ವಹಿಸಿಕೊಂಡ ಸಂಸ್ಥೆಯದೇ ಆಗಿರುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಮೂರು ವರ್ಷಗಳ ಕಾಲ ರಾಜಕಾಲುವೆಗಳ ನಿರ್ವಹಣೆ ಮಾಡಬೇಕಿದೆ. ಅವರ ಕಾರ್ಯನಿರ್ವಹಣೆ ತೃಪ್ತಿದಾಯಕವಾಗಿದ್ದರೆ ಮತ್ತೆ ಎರಡು ವರ್ಷಗಳವರೆಗೆ ಗುತ್ತಿಗೆ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತದೆ.  

ಇದೇ 12ರಂದು ಟೆಂಡರ್‌ ಕುರಿತ ಪೂರ್ವಭಾವಿ ಸಭೆ ನಡೆಯಲಿದೆ. 24ರ ಒಳಗೆ ಅರ್ಹ ಸಂಸ್ಥೆಗಳು ಟೆಂಡರ್‌ ದಾಖಲೆಗಳನ್ನು ಸಲ್ಲಿಸಬಹುದು. ಇದೇ 27ರಂದು ಟೆಂಡರ್‌ ತೆರೆಯಲಾಗುತ್ತದೆ ಎಂದು ಅವರು ತಿಳಿಸಿದರು.

 ರೊಬೋಟಿಕ್‌ ಯಂತ್ರ– ಏನಿದರ ವಿಶೇಷ
‘ರೊಬೋಟಿಕ್‌ ಯಂತ್ರಗಳು ರಾಜಕಾಲುವೆಯ ಅಗಲಕ್ಕೆ ಅನುಗುಣವಾಗಿ ಗಾತ್ರವನ್ನು ಬದಲು ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಎಂತಹ ಏರು ತಗ್ಗುಗಳನ್ನೂ ಹತ್ತಿಳಿಯಬಲ್ಲವು. ಇವುಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಒಂದು ಯಂತ್ರಕ್ಕೆ ₹2 ಕೋಟಿಯಿಂದ ₹ 3 ಕೋಟಿ ಬೆಲೆ ಇದೆ’ ಎಂದು ಪ್ರಹ್ಲಾದ್‌ ತಿಳಿಸಿದರು.

6.5 ಲಕ್ಷ ಘನ ಮೀಟರ್‌ ಹೂಳು: ನಗರದಲ್ಲಿ 440 ಮೀ ಉದ್ದದ ರಾಜಕಾಲುವೆಯಲ್ಲಿ ಪ್ರತಿ ವರ್ಷ 6.5 ಲಕ್ಷ ಘನ ಮೀಟರ್‌ ಹೂಳು ಉತ್ಪತ್ತಿ ಆಗುತ್ತದೆ ಎಂದು ಬಿಬಿಎಂಪಿ ಅಂದಾಜು ಮಾಡಿದೆ.

‘ನಗರದಲ್ಲಿ ಪ್ರತಿವರ್ಷ ಸರಾಸರಿ 80 ದಿನ ಮಳೆಯಾಗುತ್ತದೆ. ಒಂದು ದಿನ ಮಳೆಯಾದರೆ ರಾಜಕಾಲುವೆಯಲ್ಲಿ ಅಂದಾಜು 1 ಸೆಂಟಿ ಮೀಟರ್‌ನಷ್ಟು ಹೂಳು ಸೃಷ್ಟಿಯಾಗುತ್ತದೆ. ಅಂದರೆ 80 ದಿನಗಳಲ್ಲಿ 80 ಸೆಂಟಿ ಮೀಟರ್‌ಗಳಷ್ಟು ಹೂಳು ತುಂಬುತ್ತದೆ. ಮಳೆ ಪ್ರಮಾಣ ವ್ಯತ್ಯಯವಾಗುವುದರಿಂದ ಇದರ ಅರ್ಧದಷ್ಟು ಹೂಳನ್ನು ಮಾತ್ರ ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ಈ ಪ್ರಕಾರ ವರ್ಷಕ್ಕೆ ನಾವು ನಿರ್ವಹಣೆಯನ್ನು ಗುತ್ತಿಗೆ ನೀಡಿರುವ ರಾಜಕಾಲುವೆಗಳಲ್ಲಿ ಅಂದಾರು 6 ಲಕ್ಷ ಘನ ಮೀಟರ್‌ನಿಂದ 6.5 ಘನ ಮೀಟರ್‌ ಹೂಳು ಉತ್ಪತ್ತಿಯಾಗುತ್ತದೆ’ ಎಂದು ಪ್ರಹ್ಲಾದ್‌ ವಿವರಿಸಿದರು.

ಗುತ್ತಿಗೆದಾರರ ಜವಾಬ್ದಾರಿಗಳೇನು?
ರಾಜಕಾಲುವೆಗಳ ಹೂಳೆತ್ತಿ, ಅದನ್ನು ಬೇರೆ ಕಡೆ ಸಾಗಿಸಿ ವಿಲೇ ಮಾಡುವುದು
* ನೀರಿನಲ್ಲಿ ತೇಲುವ ಕಸಗಳನ್ನು ಬೇರ್ಪಡಿಸುವುದು, ಅದನ್ನು ವಿಲೇ ಮಾಡುವುದು
* ಗಿಡಗಂಟಿ ಬೆಳೆಯದಂತೆ ನೋಡಿಕೊಳ್ಳುವುದು
* ತಡೆಗೋಡೆ ನಿರ್ಮಾಣ‌
* ತಡೆಗೋಡೆಯ ಕಲ್ಲುಗಳ ಸಂದುಗಳನ್ನು ಬಲಪಡಿಸುವುದು
* ಕಸ ಹಾಕದಂತೆ ತಡೆಯುವುದು

 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !