ಸೋಮವಾರ, ಸೆಪ್ಟೆಂಬರ್ 27, 2021
25 °C
ಉಪ ಕಾರ್ಯದರ್ಶಿ–4 ವಿರುದ್ಧ ಶಿಸ್ತುಕ್ರಮಕ್ಕೆ ಬಿಡಿಎ ಆಯುಕ್ತ ಶಿಫಾರಸು

ಚದರ ಅಡಿಗೆ ₹59ರಂತೆ 35 ನಿವೇಶನಗಳ ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಚದರ ಅಡಿಗೆ ₹59 ಕಟ್ಟಿಸಿಕೊಂಡು 35 ಬದಲಿ ನಿವೇಶನಗಳನ್ನು ನೋಂದಣಿ ಮಾಡಿಕೊಡಲಾಗಿದೆ. ಈ ‍ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿದ ಕಾರಣ ಪ್ರಾಧಿಕಾರದ ಉಪ ಕಾರ್ಯದರ್ಶಿ–4 ಸತೀಶ್‌ ಬಾಬು ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವಾಗಲೇ ಈ ನಿವೇಶನಗಳನ್ನು ನೋಂದಣಿ ಮಾಡಿಕೊಡಲಾಗಿದೆ. ಕ್ರಯಪತ್ರ ಮಾಡಿಕೊಡುವ ಮುನ್ನ ಆಯುಕ್ತರ ಗಮನಕ್ಕೆ ತಂದಿಲ್ಲ. ಈ ಎಲ್ಲ ನೋಂದಣಿಗಳನ್ನು ರದ್ದುಪಡಿಸುವಂತೆ ಆಯುಕ್ತರು ನಿರ್ದೇಶನ ನೀಡಿದ್ದಾರೆ. ನಿವೇಶನಗಳ ನೋಂದಣಿ ಮಾಡಿಕೊಟ್ಟಿರುವ ಕೆ.ನಾರಾಯಣಪುರದಲ್ಲಿ ಪ್ರತಿ ಚದರ ಅಡಿಗೆ ₹5 ಸಾವಿರ ಮಾರುಕಟ್ಟೆ ಮೌಲ್ಯ ಇದೆ.

ಬಿಡಿಎ ಅಧ್ಯಕ್ಷ ಎಸ್‌.ಟಿ.ಸೋಮಶೇಖರ್ ಹಾಗೂ ರಾಕೇಶ್‌ ಸಿಂಗ್‌ ನಡುವೆ ‘ಅಧಿಕಾರದ ಸಂಘರ್ಷ’ ಜೋರಾಗಿ ಸಾಗುತ್ತಿರುವಾಗಲೇ ಈ ಪ್ರಕರಣ ನಡೆದಿದೆ. ಇಬ್ಬರ ನಡುವೆ ಕೆಸರೆರಚಾಟಕ್ಕೆ ಮತ್ತೊಂದು ವೇದಿಕೆ ಕಲ್ಪಿಸಿದೆ ಎಂಬ ಚರ್ಚೆ ಪ್ರಾಧಿಕಾರದಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಪ್ರಾಧಿಕಾರದ ವಿಚಕ್ಷಣಾ ದಳದ ಪೊಲೀಸ್‌ ವರಿಷ್ಠಾಧಿಕಾರಿ ವಿಚಾರಣೆ ನಡೆಸುತ್ತಿದ್ದು, ತನಿಖಾ ವರದಿಯನ್ನು ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರದ ಅವಗಾಹನೆಗೆ ಸಲ್ಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಕೆ.ನಾರಾಯಣಪುರದಲ್ಲಿ ಪ್ರಾಧಿಕಾರ ದಶಕಗಳ ಹಿಂದೆ 4 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಸಿತ್ತು. ಇಲ್ಲಿ 60x40 ಚದರ ಅಡಿಯ ನಿವೇಶನಗಳನ್ನು ಮಾಡಲು ಸಿದ್ಧತೆ ನಡೆಸಿತ್ತು. ಬದಲಿ ನಿವೇಶನದ ರೂಪದಲ್ಲಿ ಇವುಗಳನ್ನು ತಮಗೆ ನೀಡುವಂತೆ ಟ್ರಿನಿಟಿ ವಿಲೇಜ್‌ ಪ್ಲಾಟ್‌ ಓನರ್ಸ್‌ ಅಸೋಸಿಯೇಷನ್‌ನವರು ಮನವಿ ಮಾಡಿದ್ದರು. ಈ ನಡುವೆ, ಈ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಾಗಿತ್ತು. ಬೊಂಡು ರಾಮಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಮಾನದಂಡಗಳನ್ನು ಈ ಪ್ರಕರಣದಲ್ಲಿ ಪರಿಗಣಿಸುವಂತೆ ಪ್ರಾಧಿಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ, ಈ ‍ಪ್ರಕರಣದಲ್ಲಿ ಸರ್ಕಾರದ ಪೂರ್ವಾನುಮತಿಯ ಅವಶ್ಯಕತೆ ಇದ್ದು, ಈ ಪ್ರಕ್ರಿಯೆ ನಡೆಸದೆ ಸತೀಶ್ ಬಾಬು ಅವರು ಕಡತ ಮುಂದುವರಿಸಿದ್ದರು.

ಅಲ್ಲದೆ, ಅರ್ಕಾವತಿ ಬಡಾವಣೆಯ ಕಂದಾಯ ನಿವೇಶನಗಳ ಪ್ರಕರಣದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡುವ ಬಗ್ಗೆ ಪ್ರಾಧಿಕಾರ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಹೀಗಾಗಿ, ಟ್ರಿನಿಟಿ ಅಸೋಸಿಯೇಷನ್‌ ಪ್ರಕರಣದಲ್ಲಿ ಸಹ ಬದಲಿ ನಿವೇಶನಗಳ ಹಂಚಿಕೆ ಮಾಡಲು ಅವಕಾಶ ಇಲ್ಲ.

ಅರ್ಕಾವತಿ ಬಡಾವಣೆಯ ಕಂದಾಯ ನಿವೇಶನದಾರರಿಗೆ ಪ್ರಾಧಿಕಾರದ (ನಿವೇಶನ ಹಂಚಿಕೆ) ನಿಯಮಾವಳಿ 1984ರ ಪ್ರಕಾರ 9x 12 ಮೀಟರ್‌ ಅಳತೆಯ ನಿವೇಶನಗಳನ್ನು ಅರ್ಕಾವತಿ ಬಡಾವಣೆ ಅಥವಾ ಆಸುಪಾಸಿನ ಬಡಾವಣೆಗಳಲ್ಲಿ ಚಾಲ್ತಿಯಲ್ಲಿರುವ ದರವನ್ನು ವಿಧಿಸಿ ಸರ್ಕಾರದ ಒಪ್ಪಿಗೆ ಪಡೆದು ಹಂಚಿಕೆ ಮಾಡಬೇಕು ಎಂದು ಹೈಕೋರ್ಟ್‌ 2002 ಹಾಗೂ 2005ರಲ್ಲಿ ಆದೇಶಿಸಿತ್ತು. ಈ ಆದೇಶದ ಪ್ರಕಾರ, ಟ್ರಿನಿಟಿ ಅಸೋಸಿಯೇಷನ್‌ ಹೊಂದಿರುವ ನಿವೇಶನಗಳನ್ನು ಸಕ್ರಮಗೊಳಿಸಲು ಅಥವಾ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶ ಇಲ್ಲ. ಅಸೋಸಿಯೇಷನ್‌ನ ಕೋರಿಕೆಯನ್ನು ತಿರಸ್ಕರಿಸಬೇಕಿತ್ತು. ಆದರೆ, ಬದಲಿ ನಿವೇಶನಗಳನ್ನು ನೀಡಲಾಗಿದೆ ಎಂದು ಆಯುಕ್ತರ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಸೋಸಿಯೇಷನ್‌ನ 66 ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಬೇಕಾದ ದರ ಕುರಿತು ನಗರಾಭಿವೃದ್ಧಿ ಇಲಾಖೆಯ ಪೂರ್ವಾನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲು ಪ್ರಾಧಿಕಾರದ ಸಭೆಯಲ್ಲಿ 2018ರ ಮಾರ್ಚ್‌ 27ರಂದು ತೀರ್ಮಾನಿಸಲಾಗಿತ್ತು. ಹೀಗಿದ್ದರೂ ಕೂಡಾ, 35 ನಿವೇಶನಗಳ ಪ್ರಕರಣದಲ್ಲಿ ಉಪ ಕಾರ್ಯದರ್ಶಿ ಅವರು ನಿವೇಶನ ಹೊಂದಲು ಅರ್ಹತೆ ಮತ್ತು ಕ್ರಯಪತ್ರದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿಲ್ಲ. ಪ್ರಾಧಿಕಾರದ ಕಾರ್ಯದರ್ಶಿಗೆ ಕಡತ ಮಂಡಿಸದೆ ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಂಡು 2019ರ ಮಾರ್ಚ್‌ 18 ಹಾಗೂ 29ರಂದು ನೋಂದಣಿ ಮಾಡಿಕೊಟ್ಟಿದ್ದಾರೆ. ಇದು ಕರ್ತವ್ಯಲೋಪ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಅಸೋಸಿಯೇಷನ್‌ನ ಹೆಚ್ಚಿನ ಸದಸ್ಯರು ವಿದೇಶದಲ್ಲಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಹೆಸರಿನಲ್ಲಿ ಬ್ರೋಕರ್‌ಗಳಿಗೆ ಜಾಗ ನೋಂದಣಿ ಮಾಡಿಕೊಡಲಾಗಿದೆ. ಇದರ ಹಿಂದೆ ರಾಜಕೀಯ ಒತ್ತಡವೂ ಇದೆ’ ಎಂದು ಬಿಡಿಎ ಮೂಲಗಳು ತಿಳಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು