ಕೋಲಾರ: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ನಗರದಲ್ಲಿ ಶನಿವಾರ ಕರೆಯಲಾಗಿದ್ದ ಕಾಂಗ್ರೆಸ್ ಸಭೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲೇ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು.
‘ಮುನಿಯಪ್ಪ ಕೋಲಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರನ್ನು ನಿರ್ಲಕ್ಷಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಹೊರಟಿದ್ದಾರೆ’ ಎಂದು ಆರೋಪಿಸಿದ ಕಾರ್ಯಕರ್ತರ ಒಂದು ಬಣ ಸಂಸದರಿಗೆ ಘೇರಾವ್ ಹಾಕಿತು.
‘ಕ್ಷೇತ್ರದ ಶಾಸಕ ವರ್ತೂರು ಪ್ರಕಾಶ್ ಜತೆ ಮುನಿಯಪ್ಪ ಒಳ ಒಪ್ಪಂದ ಮಾಡಿಕೊಂಡು ಪ್ರತಿ ಚುನಾವಣೆಯಲ್ಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರ ಕುತಂತ್ರದಿಂದಲೇ ಪಕ್ಷದ ಅಭ್ಯರ್ಥಿಗಳು ಹಿಂದಿನ ಚುನಾವಣೆಗಳಲ್ಲಿ ಸೋಲುವಂತಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಚಿವ ರಮೇಶ್‌ಕುಮಾರ್, ಪಕ್ಷದ ಮುಖಂಡರಾದ ನಸೀರ್ ಅಹಮ್ಮದ್, ನಿಸಾರ್ ಅಹಮ್ಮದ್ ಹಾಗೂ ವಿ.ಆರ್.ಸುದರ್ಶನ್ ಸಮ್ಮುಖದಲ್ಲೇ ಸಭೆ ನಡೆಸಬೇಕು’ ಎಂದು ಪಟ್ಟುಹಿಡಿದ ಕಾರ್ಯಕರ್ತರು ಮುನಿಯಪ್ಪ ವಿರುದ್ಧ ಘೋಷಣೆ ಕೂಗಿ ವೇದಿಕೆ ಏರಲು ಅವಕಾಶ ಕೊಡಲಿಲ್ಲ.
ಈ ವೇಳೆ ಮುನಿಯಪ್ಪ ಬೆಂಬಲಿಗರು ಎದುರಾಳಿ ಬಣದ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದರು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡೂ ಬಣದವರು ಕೈ ಮಿಲಾಯಿಸಿದರು. ಇದರಿಂದ ತಳ್ಳಾಟ ಉಂಟಾಗಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರನ್ನು ಚದುರಿಸಿದರು. ಬಳಿಕ ಮುನಿಯಪ್ಪ ಬೆಂಬಲಿಗರ ನೆರವಿನಿಂದ ವೇದಿಕೆ ಏರಿ ಸಭೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.