ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ತ್ ಲುಕ್ ನೀಡುವ ಸ್ಲೀವ್ಸ್‌

Last Updated 20 ಜನವರಿ 2023, 19:30 IST
ಅಕ್ಷರ ಗಾತ್ರ

ಫ್ಯಾಷನ್ ಪ್ರಿಯರಿಗೆ ಧರಿಸುವ ಯಾವ ಉಡಗೆಯಾದರು ಸರಿ, ಅದು ಹೊಸ ಶೈಲಿಯದ್ದಾಗಿರಬೇಕು. ಅದರಲ್ಲೂ ಸೀರೆ ವಿಷಯದಲ್ಲಿ, ಅದು ಎಲ್ಲರಿಗೂ ಒಪ್ಪುವಂಥದ್ದಾಗಿರಬೇಕು. ಆ ಸೀರೆಗೆ ಖುಷಿಕೊಡುವ ಮ್ಯಾಚಿಂಗ್‌ ರವಿಕೆ ಇದ್ದರೆ ಸಿಕ್ಕಾಪಟ್ಟೆ ಖುಷಿ !

ಈಗಾಗಲೇ ಪರಿಚಿತವಾಗಿರುವ ಗ್ರ್ಯಾಂಡ್ ಎಂಬ್ರಾಯ್ಡರಿ ವರ್ಕ್‌, ಪ್ಯಾಚ್ ವರ್ಕ್, ಲೇಸ್ ವರ್ಕ್ ಬ್ಲೌಸ್‌ಗಳಿಗೆ ತೋಳುಗಳು ಸಾಮಾನ್ಯವಾಗಿ ಎಲಬೊಸ್ಲೀವ್ಸ್, ಶಾರ್ಟ್ ಸ್ಲೀವ್ಸ್ , ತ್ರಿಫೋರ್ತ್‌ ಸ್ಲೀವ್ಸ್ ರೂಢಿಯಲ್ಲಿವೆ. ಈಗ ಫ್ಯಾಷನ್‌/ಟ್ರೆಂಡ್‌ ಬದಲಾಗಿದೆ.

ಫ್ರಾಕ್, ಶಾರ್ಟ್ಸ್‌ ಟಾಪ್‌ಗಳಲ್ಲಿ ಕಾಣಿಸುತ್ತಿದ್ದ ತೋಳಿನ ಮಾದರಿಗಳು ಸೀರೆ ಬ್ಲೌಸ್‌ಗಳಲ್ಲಿ ಕಾಣಿಸುತ್ತಿದೆ. ಪಫ್, ಬಲೂನ್ ತೋಳು, ಬೆಲ್ ತೋಳು, ಲೇಯರ್ಡ್ ಸ್ಲೀವ್ಸ್, ಬಿಶಪ್ ಕಪ್ ಸ್ಲೀವ್ಸ್ ಬಟರ್ ಫ್ಲೈ ಸ್ಲೀವ್ಸ್, ಕೌಲ್ ಸ್ಲೀವ್ಸ್, ಸರ್ಕ್ಯುಲರ್ ಸ್ಲೀವ್ಸ್ , ಹಾಲ್ಟರ್ ಸ್ಲೀವ್ಸ್ , ಪೆಟಲ್ ಸ್ಲೀವ್ಸ್, ಅಂಬ್ರೆಲಾ ತೋಳು, ಹೀಗೆ ಸಾಕಷ್ಟು ಮಾದರಿಯ ತೋಳುಗಳ ಆಯ್ಕೆ ನಾರಿಯರಿಗೆ ಇದೆ. ಈ ಸರದಿಯಲ್ಲಿ ಸಾಗುವವರಿಗೆ ವಯಸ್ಸಿನ ನಿರ್ಬಂಧವಿಲ್ಲ. ‘ನಾರಿ ನಿನ್ನ ಮಾರಿ ಮ್ಯಾಗ ನಗಿ ನವಿಲು ಆಡುತಿತ್ತ ಓಡುತ್ತಿತ್ತ’ ಅನ್ನೊ ಬೇಂದ್ರೆ ಸಾಲುಗಳು ಉಟ್ಟುತೊಟ್ಟು ಖುಷಿಪಡುವ ಅವಳ ಮೊಗ ನೋಡಿದಾಗ ನೆನಪಾಗುತ್ತದೆ.

ಎಲ್ಲಾ ರೀತಿಯ ಬಟ್ಟೆಗಳು ಎಲ್ಲಾ ತೋಳಿನ ಮಾದರಿಗೆ ಸೆಟ್ ಆಗುವುದಿಲ್ಲ. ಹಾಗಾಗಿ ಬಟ್ಟೆ ಆಯ್ಕೆ ಮಾಡುವಾಗ ಮೊದಲೇ ತಿಳಿದು ಕೊಂಡಿದ್ದರೆ ಉತ್ತಮ.

l ಬಲೂನ್ (ಪುಗ್ಗಾ) ತೋಳು: ರೇಷ್ಮೆ ಬಟ್ಟೆಗೆ ತುಂಬಾ ಚೆನ್ನಾಗಿ ಹೊಂದುತ್ತದೆ. ಇದರಲ್ಲಿ ನಾಲ್ಕಾರು ವಿಧಾನವಿದೆ. ಭುಜದ ಲೈನಿಂದ ನೆರಿಗೆ ಹಚ್ಚಿ ತುದಿ ಭಾಗದಲ್ಲಿ ಅಗಲ ಪಟ್ಟಿ ಅಥವಾ ಜರಿ ಬಾರ್ಡರ್ ಹಚ್ಚಲಾಗುತ್ತದೆ. ಇನ್ನೊಂದು ವಿಧದಲ್ಲಿ ಕಡಗೋಲು ರೀತಿ ಸಣ್ಣ ನೆರಿಗೆ ಹಿಡಿದು ತೋಳಿನ ತುದಿ ಭಾಗದಲ್ಲೂ ಅದೇ ಚಿಕ್ಕ ನರಿಗೆ ಮುಂದುವರಿದಿರುತ್ತದೆ.

l ಅಂಬ್ರೆಲಾ ತೋಳು: ಯುವತಿಯರು ತುಂಬಾ ಇಷ್ಟಪಡುವಂತಹ ರವಿಕೆಯ ತೋಳಿನ ವಿನ್ಯಾಸ ಇದು. ಜಾರ್ಜೆಟ್, ಶಿಫಾನ್, ಸಿಂಥೆಟಿಕ್ ಬಟ್ಟೆಗಳು ಈ ತೋಳುಗಳಿಗೆ ಸೂಕ್ತ. ಡಬಲ್ ಲೇಯರ್ಡ್‌, ಎರಡು ಬಣ್ಣದ ಬಟ್ಟೆ ಬಳಸಿದ ಅಂಬ್ರೆಲಾ ತೋಳು ವಿಶೇಷವಾಗಿರುತ್ತದೆ. ಸಪೂರ(ತೆಳು) ಕೈಗಳಿಗೆ ಅಂದವಾಗಿರುತ್ತದೆ.

l ಪೆಟಲ್ ಸ್ಲೀವ್ಸ್: ಇದು ಕೂಡ ಈಗ ಟ್ರೆಂಡಿಯಾಗಿದೆ. ವಿವಿಧ ಬಗೆ ಇರುವ ಈ ತೋಳು ಒಂದರ ಮೇಲೆ ಇನ್ನೊಂದು ಬಟ್ಟೆಯಿಂದ ಮಾಡಿರುತ್ತಾರೆ. ಕೆಲವೊಮ್ಮೆ ಉದ್ದ–ಗಿಡ್ಡ ಕಾಣುವಂತೆ ಮಾಡಿರುವದರಿಂದ ತೋಳಿನ ತುದಿ ತೋರಣದ ತರಹ ಕಾಣಿಸುತ್ತದೆ.

ಕ್ಯಾಪ್ ಸ್ಲೀವ್ಸ್, ಶಾರ್ಟ್ ಸ್ಲೀವ್, ಹಾಲ್ಟರ್ ಸ್ಲೀವ್ಸ್ ಇವೆಲ್ಲಾ ಆರ್ಮಹೋಲ್‌ವರೆಗೆ ಮಾತ್ರ ಇರುವುದರಿಂದ ಸ್ಲೀವ್ ಲೆಸ್ ಹಾಕುವವರಿಗೆ ಹೊಸ ವಿಧಾನವಾಗಿದೆ. ಖುಷಿ ಕೊಡುತ್ತದೆ.

l ಪಫ್‌ ತೋಳು : ನೆಟೆಡ್‌ ಬಟ್ಟೆಯಲ್ಲಿ ಸುಂದರವಾಗಿ ಕಾಣುತ್ತದೆ. ಉದ್ದ ಗಿಡ್ಡ ಯಾವ ತರಹದಲ್ಲಿ ಹಾಕಿದರು ಅಂದವಾಗಿರುತ್ತದೆ.

l ಬೆಲ್‌ ತೋಳು: ಬುಜದ(ಶೋಲ್ಡರ್) ಲೈನಿಗೆ ಸರಿಯಾಗಿ ಗಿಡ್ಡ ತೋಳು ಹಚ್ಚಿಸಬಹುದು ಅಥವಾ ಕೈ ಉದ್ದದ ಮುಕ್ಕಾಲು ಭಾಗದ ತೋಳಿಗೆ ಬೆಲ್ ಮಾಡಿಸಿದರೂ ಇನ್ನಷ್ಟು ಫ್ಯಾಷನಬಲ್ ಆಗಿರುತ್ತದೆ.

l ಕಿಮೊ ಸ್ಲೀವ್: ಇದು ಆರಾಮದಾಯಕವಾಗಿರುತ್ತದೆ. ಭುಜದಿಂದ ಸಾದಾ ತೋಳಿನಂತಿದ್ದು ಕೆಳಭಾಗದಲ್ಲಿ ಅಗಲವಿರುವದರಿಂದ ಎಲ್ಲಾ ತರಹದ ಬಟ್ಟೆ ಇದಕ್ಕೆ ಹೊಂದುತ್ತದೆ.

l ಬಿಷಪ್ ತೋಳು: ಮುಂಗೈವರೆಗೆ ಇರುವ ಈ ತೋಳಿನ ತುದಿಯಲ್ಲಿ ಸಣ್ಣ ಎರಡು ನೆರಿಗೆ ಇರುತ್ತವೆ. ಚಿಕ್ಕ ಪಟ್ಟಿ ಹಚ್ಚಿರುತ್ತಾರೆ. ಹಾಗಾಗಿ ತೋಳಿನ ಕೆಳಭಾಗ ಅಗಲ ದೊಡ್ಡದಾಗಿ ಕಾಣುತ್ತದೆ. ಜಾರ್ಜೆಟ್,ಶಿಫಾನ್ ತರದ ಬಟ್ಟೆ ಇದಕ್ಕೆ ಸೂಕ್ತ.

l ಬಾಕ್ಸಿ ಕ್ಯಾಪ್ ಸ್ಲೀವ್ಸ್, ಸರ್ಕ್ಯುಲರ್ ತೋಳಿನ ಬ್ಲೌಸಗಳು ಈಗ ತನ್ನದೇ ಶೈಲಿಯಲ್ಲಿ ಮಿಂಚುತ್ತಿದೆ. ಶೈನಿಂಗ್ ಇರುವ ಬಟ್ಟೆ ಸ್ಯಾಟಿನ್, ಕೋರಾ ಸಿಲ್ಕ್‌ ಚೆನ್ನಾಗಿ ಕಾಣುತ್ತದೆ. ಡಾಟ್ ಪ್ರಿಂಟ್, ಫ್ಲವರ್ ಪ್ರಿಂಟ್ ಇರುವ ಬಟ್ಟೆಗಳು ಸೂಕ್ತ.

l ಬೊವ್ ಸ್ಲೀವ್ಸ್: ಇದು ತೋಳಿನ ಆಕಾರ ಯಾವುದೇ ಇರಲಿ ಉದ್ದ, ಪಫ್, ಕೋಲ್ಡ್‌ ಸ್ಲೀವ್, ಸ್ಲಿಟ್ ಸ್ಲೀವ್ಸ್‌‌ಗಳಿಗೆ ಕೆಳಭಾಗಕ್ಕೆ ವಿಭಿನ್ನ ರೀತಿಯ ಬೊವ್ ಮಾಡಿದರೆ ಆ ತೋಳಿನ ಅಂದಕ್ಕೆ ಸಾಟಿ ಇನ್ನೊಂದಿಲ್ಲ.

ಹಕೊಬಾ ಬಟ್ಟೆಯಿಂದ ತೋಳು ಮಾಡಿದ ಬ್ಲೌಸ್ ಕಾಟನ್ ಸೀರೆಯೊಂದಿಗೆ ಧರಿಸಿದಾಗ ಕ್ಲಾಸಿ ಲುಕ್ ಕೊಡುತ್ತದೆ. ಹಳೆ ಬ್ಲೌಸ್‌ಗಳಿಗೂ ತೋಳುಗಳನ್ನು ಮಿಕ್ಸ್ ಮ್ಯಾಚ್ ಮಾಡಿ ಹೊಸ ರೂಪ ಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT