ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯವರ್ಧನೆಗೆಸಹಜ ಮಾರ್ಗ!

Last Updated 27 ಮೇ 2022, 19:30 IST
ಅಕ್ಷರ ಗಾತ್ರ

ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಮಹದಾಸೆ. ಅದರಲ್ಲೂ ಮಹಿಳೆಯರಲ್ಲಿ ತುಸು ಹೆಚ್ಚು. ವಿಶೇಷವಾಗಿ ಸಿನಿಮಾ, ಕ್ರಿಕೆಟ್‌, ಫ್ಯಾಷನ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿ ಹಾಗೂ ಕೆಲವು ಶ್ರೀಮಂತ ವರ್ಗದ ಮಹಿಳೆಯರಿಗೆ ದೇಹ ಸೌಂದರ್ಯ ರಕ್ಷಣೆ ಬಗ್ಗೆ ಅತೀವ ಕಾಳಜಿ. ಇಂಥವರು ಯೋಗ, ವ್ಯಾಯಾಮ, ಉತ್ತಮ ಆಹಾರ ಪದ್ಧತಿ, ಉತ್ತಮ ಜೀವನಶೈಲಿಯಂತಹ ಸೂಕ್ತ ಮಾರ್ಗದಲ್ಲಿ ಅಂಗಸೌಷ್ಟವ ರಕ್ಷಿಸಿಕೊಳ್ಳುವುದನ್ನು ಬಿಟ್ಟು, ದಿಢೀರೆಂದು ಅಂದ ವರ್ಧಿಸಿಕೊಳ್ಳಲು ಕೃತಕವಾಗಿ ದೇಹಾಕಾರ ಬದಲಿಸಿಕೊಳ್ಳುವ ಹುಚ್ಚು ಹವ್ಯಾಸಕ್ಕೆ ಬೀಳುತ್ತಿದ್ದಾರೆ. ಸ್ವಾಭಾವಿಕವಾಗಿ ರೂಪುಗೊಂಡಿರುವ ದೇಹವನ್ನು ಸರ್ಜರಿಗಳ ಮೂಲಕವೋ, ಔಷಧ ಸೇವಿಸುವ, ಅತಿಯಾಗಿ ಡಯೆಟ್‌ ಮಾಡುವ ಮೂಲಕವೋ ಅಂದ ಹೆಚ್ಚಿಸಿಕೊಳ್ಳುವುದು ಅಪಾಯಕಾರಿಯೂ ಹೌದು.

ಏನೇನು ಪರಿಣಾಮಗಳು?

ಜೀವನಶೈಲಿ,ಆಹಾರಕ್ರಮದಲ್ಲಾಗುವ ವ್ಯತ್ಯಾಸ, ದೈಹಿಕ ಶ್ರಮದ ಕೊರತೆ, ಕಾಲ ಕಾಲಕ್ಕೆ ದೇಹದೊಳಗೆ ಆಗುವ ಹಾರ್ಮೋನುಗಳ ಏರುಪೇರು... ಇಂಥ ಹಲವು ಕಾರಣಗಳಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸವಾಗುವುದು ಸಹಜ.

ಸ್ಥೂಲಕಾಯ, ಮೈ ಬಣ್ಣ, ಎತ್ತರ ಎನ್ನುವುದು ಕೆಲವರಲ್ಲಿ ಆನುವಂಶೀಯವಾಗಿರುತ್ತದೆ. ಸ್ವಾಭಾವಿಕಗುಣಗಳನ್ನು ಮಾರ್ಪಡಿಸುವುದು ಕಷ್ಟ. ನೈಸರ್ಗಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದಷ್ಟೇ. ಆದರೆ, ಕೆಲವರು ಇವೆಲ್ಲವನ್ನೂ ಮೀರಿ ದೇಹದ ಸೌಂದರ್ಯವೃದ್ಧಿಗೆ ಸಿಕ್ಕ ಸಿಕ್ಕ ಸಲಹೆಗಳು, ಅವೈಜ್ಞಾನಿಕ ಆಹಾರ ಪದ್ಧತಿಯನ್ನು ಅನುಸರಿಸಿ, ಅಡ್ಡ ಪರಿಣಾಮಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಪರಿಹಾರವೇನು?

ದೇಹದ ಸೌಂದರ್ಯಕ್ಕಾಗಿ, ಆರೋಗ್ಯ ಸಮಸ್ಯೆ ಸರಿಪಡಿಸಿಕೊಳ್ಳಲು ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆಯಲ್ಲಿ ಸಾಕಷ್ಟು ಪರಿಹಾರಗಳಿವೆ. ಆಯುರ್ವೇದ ಪದ್ಧತಿಯಲ್ಲಿ ಶೋಧನ, ಶಮನ ಚಿಕಿತ್ಸೆ ಎಂದು ಎರಡು ವಿಧವಾಗಿದ್ದು, ಪ್ರತಿ ವ್ಯಕ್ತಿಯ ಶಕ್ತಿ ಆಧರಿಸಿ, ದೇಹ ಪಕೃತಿ, ರೋಗಕ್ಕೆ ಅನುಸಾರವಾಗಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಚಿಕಿತ್ಸೆ ನೀಡಲಾಗುತ್ತದೆ. ಶೋಧನ ಚಿಕಿತ್ಸೆಯಲ್ಲಿ ಪಂಚಕರ್ಮ ವಿಧಾನಗಳು ಮತ್ತು ಶಮನ ಚಿಕಿತ್ಸೆಯಲ್ಲಿ ರೋಗಿಯ ಲಕ್ಷಣಗಳಿಗೆ ಅನುಸಾರವಾಗಿ, ಧಾತುಗತ, ದೋಷಗತ ಚಿಕಿತ್ಸೆ ಮಾಡಲಾಗುತ್ತದೆ.

ನೀವೇ ಮಾಡಬಹುದಾದದ್ದು

ದಿನನಿತ್ಯ ಅರ್ಧ ಗಂಟೆ ನಡೆದಾಡಿ. ಕಡ್ಡಾಯವಾಗಿ ನಿತ್ಯಯೋಗಾಸನ ಅಥವಾ ವ್ಯಾಯಾಮ ಮಾಡಿ. ಯೋಗಾಸನದಲ್ಲಿ ಸೂರ್ಯ ನಮಸ್ಕಾರ, ಭುಜಂಗಾಸನ, ಧನುರಾಸನದಂತಹ ಆಸನಗಳು ಬೊಜ್ಜು ಕರಗಿಸಲು ನೆರವಾಗುತ್ತವೆ. ದೇಹದ ತೂಕ ಇಳಿಸುವ ಜೊತೆಗೆ, ಸೌಂದರ್ಯವನ್ನು ಹೆಚ್ಚಿಸುತ್ತವೆ. ‍‍

ಪ್ರಾಣಾಯಾಮ, ಧ್ಯಾನ ಮನಸ್ಸನ್ನು ಆರೋಗ್ಯವಾಗಿಡುತ್ತವೆ. ಮಾನಸಿಕ ಒತ್ತಡ ನಿವಾರಣೆಗೂ ಸಹಕಾರಿ. ಈ ಚಟುವಟಿಕೆಗಳ ಅಭ್ಯಾಸವಿಲ್ಲದಿದ್ದರೆ, ತಜ್ಞರು/ ಪರಿಣತರಿಂದ ತರಬೇತಿ ಪಡೆದು ನಂತರ ಅನುಷ್ಠಾನಕ್ಕೆ ತನ್ನಿ. ಯಾವುದೇ ಕಾರಣಕ್ಕೂ ತಪ್ಪು ತಪ್ಪಾಗಿ ಯೋಗ, ಪ್ರಾಣಾಯಾಮ ಮಾಡಬೇಡಿ.

ಸತ್ವಯುತ ಆಹಾರ ಸೇವನೆ

ನಾರಿನಂಶವಿರುವ ತಾಜಾ ಹಣ್ಣುಗಳನ್ನು ತಿನ್ನಬೇಕು. ಊಟದಲ್ಲಿ ವೈವಿಧ್ಯಮಯ ತಾಜಾ, ಸ್ಥಳೀಯ ತರಕಾರಿಗಳನ್ನು ಬಳಸಿ. ಬೇಳೆ, ಕಾಳುಗಳಲ್ಲಿ ಪ್ರೊಟಿನ್ ಅಂಶ ಹೆಚ್ಚಾಗಿರುತ್ತದೆ. ತರಕಾರಿಗಳ ಜೊತೆಗೆ, ಬೇಳೆ–ಕಾಳುಗಳನ್ನು ಸೇವಿಸಿ.

ಟೊಮೆಟೊ, ಸೌತೆಕಾಯಿ, ಸೋರೆಕಾಯಿ, ಕ್ಯಾಬೇಜ್‌ನಂತಹ ತರಕಾರಿಗಳಲ್ಲಿ ಅಧಿಕ ಪ್ರಮಾಣದ ನೀರಿನಂಶವಿದೆ. ಇಂಥವುಗಳನ್ನು ಸೇವಿಸುವುದರಿಂದ ದೇಹ ಮತ್ತು ಚರ್ಮದ ಆರೋಗ್ಯ ಸುಧಾರಿಸುತ್ತದೆ. ನಿಂಬೆ, ಕಿತ್ತಳೆ, ಮೋಸಂಬಿಯಂತಹ ಸಿಟ್ರಸ್‌ ಅಂಶವಿರುವ ಹಣ್ಣುಗಳನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಬಾದಾಮಿ, ಆಕ್ರೋಟ್‌, ಗೋಡಂಬಿ, ಪಿಸ್ತಾ, ಅಗಸೆ ಬೀಜಗಳಂತಹಒಣ ಬೀಜಗಳಲ್ಲಿ ಪ್ರೊಟೀನ್, ಖನಿಜಾಂಶ, ನಾರಿನ ಅಂಶ, ಆರೋಗ್ಯಕರ ಕೊಬ್ಬು ಹೊಂದಿರುವುದರಿಂದ ಚರ್ಮದ ಆರೋಗ್ಯ ರಕ್ಷಣೆ ಮಾಡುತ್ತವೆ.

ಆಹಾರವನ್ನು ಸೇವಿಸುವಷ್ಟೇ ಪ್ರಮಾಣದಲ್ಲಿ ನೀರು ಸೇವಿಸುವುದು ಬಹಳ ಮುಖ್ಯ. ನಿತ್ಯ 8 ರಿಂದ 10 ಲೋಟ ನೀರು ಕುಡಿಯಬೇಕು. ಇದರಿಂದ ದೇಹದಲ್ಲಿರುವ ನಂಜಿನ ಅಂಶಗಳು ಹೊರಗೆ ಹೋಗಲು ಸಹಾಯವಾಗುತ್ತದೆ. ಇದು ದೇಹದ ಆರೋಗ್ಯ ಮತ್ತು ಸೌಂದರ್ಯವನ್ನು ರಕ್ಷಿಸುತ್ತದೆ.

ನೆನಪಿರಲಿ: ಸಂಸ್ಕರಿತ ಆಹಾರ, ಜಂಕ್‌ ಫುಡ್, ಬಿಳಿ ಬ್ರೆಡ್, ಪಾಸ್ತಾ, ಸ್ಯಾಂಡ್‌ವಿಚ್‌ ಸೇವನೆಯಿಂದ ದೂರವಿರಿ. ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ. ಸಾಧ್ಯವಾದರೆ ನೈಸರ್ಗಿಕ ಸಕ್ಕರೆ ಬಳಸಿ.

ನಿದ್ದೆಯೂ ಮುಖ್ಯ

ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳಷ್ಟೇ ನಿದ್ದೆಯೂ ಬಹಳ ಮುಖ್ಯ. ಪ್ರತಿ ನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ರಿಸುವುದರಿಂದ ಉತ್ತಮ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ಕಾಪಾಡಿಕೊಳ್ಳಬಹುದು.

ಇಂಥ ಸಣ್ಣ ಬದಲಾವಣೆಗಳು ದೊಡ್ಡ ಪರಿಣಾಮ ಬೀರುತ್ತವೆ. ಸರಿಯಾದ ಆಹಾರಕ್ರಮ, ವ್ಯಾಯಾಮ, ಯೋಗದಿಂದ ನೈಸರ್ಗಿಕವಾಗಿ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಈ ಕ್ರಮಗಳ ಅನುಸರಣೆಯಲ್ಲಿ ಏನಾದರೂ ಗೊಂದಲವಿದ್ದರೆ ತಜ್ಞರ ಸಲಹೆ ಪಡೆದುಕೊಳ್ಳಿ.

ಒಂದಷ್ಟು ಮನೆ ಮದ್ದು..

ಯೋಗ, ವ್ಯಾಯಾಮದಂತಹ ದೈಹಿಕ ಕಸರತ್ತು, ಪೌಷ್ಟಿಕಯುಕ್ತ ಆಹಾರ, ಜೀವನಶೈಲಿಯ ಜೊತೆಗೆ, ಮನೆಯಲ್ಲೇ ಲಭ್ಯವಿರುವ ಆಹಾರದಿಂದಲೂ ಬೊಜ್ಜು, ಕೊಬ್ಬು ಕರಗಿಸಬಹುದು. ಚರ್ಮದ ಆರೋಗ್ಯವನ್ನೂ ರಕ್ಷಿಸಬಹುದು. ಅಂಥ ಮನೆ ಮದ್ದುಗಳು ಇಲ್ಲಿವೆ.

ಲೋಳೆಸರ(ಅಲೋವೆರಾ) ಜ್ಯೂಸ್‌

ಪ್ರತಿನಿತ್ಯ 2 ಚಮಚ ತಾಜಾ ಅಲೋವೆರಾ ಜ್ಯೂಸ್‌ಗೆ ಅರ್ಧ ಕಪ್ ಬೆಚ್ಚಗಿನ ನೀರು ಸೇರಿಸಿ. ಖಾಲಿ ಹೊಟ್ಟೆಯಲ್ಲಿ ನಿರಂತರ ಮೂರು ತಿಂಗಳವರೆಗೆ ಸೇವಿಸಿ. ಇದರಿಂದ ಬೊಜ್ಜು ಕರಗುತ್ತದೆ. ಜೊತೆಗೆ ಚರ್ಮದ ಕಾಂತಿ ಹೆಚ್ಚುತ್ತದೆ. ಕೂದಲು ಆರೋಗ್ಯವಾಗಿರುತ್ತದೆ.

ಗ್ರೀನ್ ಟೀ ‌

ಕುದ್ದಿರುವ ನೀರಿಗೆ ಗ್ರೀನ್ ಟೀ ಬ್ಯಾಗ್‌ ಮುಳುಗಿಸಿ. ಡಿಕಾಕ್ಷನ್‌ಗೆ ಕಾಲು ಚಮಚ ತಾಜಾ ನಿಂಬೆರಸ ಬೆರೆಸಿ. ಬಿಸಿ ಬಿಸಿಯಾಗಿ ಕುಡಿಯಿರಿ. ಇದು ಕೊಬ್ಬು ಕರಗಿಸಲು ನೆರವಾಗುತ್ತದೆ.

ಬಾದಾಮಿ ಸೇವನೆ

ಪ್ರತಿನಿತ್ಯ 5 ರಿಂದ 6 ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ತೂಕ ಇಳಿಸಲು ನೆರವಾಗುತ್ತವೆ. ಚರ್ಮದ ಕಾಂತಿಯೂ ವೃದ್ಧಿಯಾಗುತ್ತದೆ.

(ಲೇಖಕರು ಆಯುರ್ವೇದ ವೈದ್ಯೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT