ಜವಾಬ್ದಾರಿ ಹಸ್ತಾಂತರದ್ದೇ ಮಾತುಕತೆ

7
ಬೆಳ್ಳಂದೂರು ಕೆರೆ:ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಬಿಡಿಎ ಪ್ರಯತ್ನ

ಜವಾಬ್ದಾರಿ ಹಸ್ತಾಂತರದ್ದೇ ಮಾತುಕತೆ

Published:
Updated:
ಹೂಳು ತುಂಬಿರುವ ಬೆಳ್ಳಂದೂರು ಕೆರೆಯ –ಪ್ರಜಾವಾಣಿ ಚಿತ್ರ

ಬೆಂಗಳೂರು: ಬೆಂಕಿ ಉಗುಳುವ ಬೆಳ್ಳಂದೂರು ಕೆರೆ ಅನಾಥವಾಗುವ ಸ್ಥಿತಿ ಉದ್ಬವಿಸಿದ್ದು, ಸದ್ಯ ನಿರ್ವಹಣೆ ಮಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊಣೆಗಾರಿಕೆಯಿಂದ ನುಣುಚಿ ಕೊಳ್ಳುವ ಪ್ರಯತ್ನ ಮಾಡುತ್ತಿದೆ.

ನಗರದಲ್ಲಿನ ಅತಿ ದೊಡ್ಡ ಕೆರೆ ಎನಿಸಿರುವ ಬೆಳ್ಳಂದೂರು ಕೆರೆಯು 951 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಸದ್ಯ ಬಿಡಿಎ ಈ ಕೆರೆಯ ನಿರ್ವಹಣೆ ಮಾಡುತ್ತಿದ್ದು, ಇದನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸುವ ಚಿಂತನೆ ಮಾಡಿದೆ. ‘ಕೆರೆಯ ಅಂಚಿನಲ್ಲಿಯೇ ರಕ್ಷಣಾ ಇಲಾಖೆ ಜಾಗವಿದ್ದು, ಅವರೇ ಕೆರೆಯನ್ನು ನೋಡಿಕೊಳ್ಳಲಿ’ ಎಂದು ಈಗಾಗಲೇ ಮೂರು ಬಾರಿ ಚರ್ಚಿಸಿದೆ. ಈ ಸಂಬಂಧ ಇದೇ ಜನವರಿಯಲ್ಲಿ ಮೇಜರ್‌ ಜನರಲ್‌ ಅವರಿಗೂ ಪತ್ರ ಬರೆದಿದೆ. 

‘ಬೆಂಗಳೂರು ನೀರು ಸರಬರಾಜು ಮಂಡಳಿ ಇಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ವಿಳಂಬ ಮಾಡುತ್ತಿರುವುದರಿಂದ ನೊರೆ ಸಮಸ್ಯೆಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಜೋರು ಮಳೆಯಾದಾಗ ಸಮಸ್ಯೆ ಉದ್ಭವಿಸುತ್ತದೆ’ ಎಂದು ಬಿಡಿಎ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಕೆರೆಯ ನಿರ್ವಹಣೆಯನ್ನು ವಹಿಸಿಕೊಳ್ಳಬೇಕು ಎನ್ನುವುದು ನಮಗೆ ಕಡ್ಡಾಯವಲ್ಲ. ಆದರೆ, ಶುದ್ಧ ಹಾಗೂ ಹಸಿರು ಪರಿಸರ ರೂಪಿಸುವುದು ನಮ್ಮ ಜವಾಬ್ದಾರಿ. ಕೆರೆಯ ಸಮಸ್ಯೆಯನ್ನು ವೈಜ್ಞಾನಿಕವಾಗಿ ಪರಿಹರಿಸುವ ಬಗ್ಗೆ ರಾಜ್ಯ ಸರ್ಕಾರ ದೊಂದಿಗೆ ಮಾತುಕತೆ ನಡೆಸಿದ್ದೇವೆ’ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದರು. ಇತ್ತ ಅರಣ್ಯ ಇಲಾಖೆ, ಬೆಳ್ಳಂದೂರು ಕೆರೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಿದ್ದು, ಅವರೂ ಒಪ್ಪಿಗೆ ಸೂಚಿಸಿದ್ದಾರೆ. 

ಮೂರು ದಶಕಗಳಿಂದ ಇದೆ ಬೆಳ್ಳಂದೂರು ಸಮಸ್ಯೆ: ಬೆಳ್ಳಂದೂರು ಕೆರೆಯ ದುಸ್ಥಿತಿ ಬಗ್ಗೆ 1999ರಲ್ಲಿಯೇ ರಾಮಮೂರ್ತಿ ಎಂಬುವವರು ಹೋರಾಟ ಪ್ರಾರಂಭಿಸಿದ್ದರು. ಹೀಗೆ ಮೂರು ದಶಕಗಳಿಂದ ಜನ ಹೋರಾಡುತ್ತಲ್ಲೇ ಇದ್ದಾರೆ. 2005ರಿಂದಲೂ ಕೆರೆಯಲ್ಲಿ ನೊರೆಯ ಸಮಸ್ಯೆ ಕಾಣಿಸಿದೆ. 2015ರಲ್ಲಿ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೆಚ್ಚು ಸುದ್ದಿಯಾಗಿತ್ತು.

ಕೆರೆಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಬಗ್ಗೆ ಹಸಿರು ನ್ಯಾಯಪೀಠ ತರಾಟೆಗೆ ತೆಗೆದುಕೊಂಡ ಬಳಿಕ ಬಿಡಿಎ, ಬಿಬಿಎಂಪಿ, ಕೆಎಸ್‌ಪಿಸಿಬಿ ಹಾಗೂ ಕೆಎಲ್‌ಸಿಡಿಎ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ಆ ಬಳಿಕವಷ್ಟೇ, ಕೆರೆಯ ಕಳೆಯನ್ನು ಹೊರಗೆ ತೆಗೆಯಲಾಗಿದೆ. ಕೆರೆಯ ಸುತ್ತಲೂ ಬೇಲಿ ಹಾಕಲಾಗಿದ್ದು, ನೊರೆ ಉಂಟಾಗದಂತೆ ಎರೇಟರ್‌ಗಳನ್ನು ಅಳವಡಿಸಲಾಗಿದೆ.

‘ಬೆಳ್ಳಂದೂರು ಕೆರೆಯಲ್ಲಿ ಒಂದು ಹನಿಯೂ ಸ್ವಚ್ಛವಾಗಿಲ್ಲ. ಚರಂಡಿ, ಕೈಗಾರಿಕೆಗಳಿಂದ ಹೊರಸೂಸಿದ ರಾಸಾಯನಿಕಗಳೇ ಅದರಲ್ಲಿದೆ. ಆಡಳಿತ ವ್ಯವಸ್ಥೆಯೊಳಗಿನ ಭಿನ್ನಾಭಿಪ್ರಾಯಗಳಿಂದ ಕೆರೆಯು ಕೊಳಚೆ ತೊಟ್ಟಿಯಾಗಿದೆ’ ಎಂದು ನ್ಯಾಯಪೀಠದ ಆಯೋಗ ಇತ್ತೀಚೆಗೆ ವರದಿ ಸಲ್ಲಿಸಿತ್ತು.

***

ರಕ್ಷಣಾ ಇಲಾಖೆಯಲ್ಲಿ ತಜ್ಞರು, ಕಾರ್ಯಪಡೆಯಿರುವುದರಿಂದ ಕೆರೆಯ ನಿರ್ವಹಣೆಯನ್ನು ಸಮರ್ಥ ವಾಗಿ ನಿಭಾಯಿಸಬಲ್ಲರು. ಅವರು ಕೆರೆ ಜವಾಬ್ದಾರಿ ವಹಿಸಿಕೊಳ್ಳಬೇಕು</p>
-ಟಿ.ವಿ.ರಾಮಚಂದ್ರ, ವಿಜ್ಞಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !