ಮಂಗಳವಾರ, ಜೂಲೈ 7, 2020
24 °C
ಸತತ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದ ಬಿಎಫ್‌ಸಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಛಲದ ಆಟಕ್ಕೆ ಒಲಿದ ಜಯ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೊದಲಾರ್ಧದಲ್ಲಿ ದಟ್ಟೈಸಿದ ನಿರಾಸೆಯ ಕಾರ್ಮೋಡ, ದ್ವಿತೀಯಾರ್ಧದಲ್ಲಿ ಕರಗಿ ಸಂಭ್ರಮದ ಹೊಳೆಯಾಯಿತು. ಬೆಂಗಳೂರು ಫುಟ್‌ ಬಾಲ್ ಕ್ಲಬ್‌ (ಬಿಎಫ್‌ಸಿ) ಆಟಗಾರರ ಛಲದ ಆಟಕ್ಕೆ ಮೈಮರೆತ ಪ್ರೇಕ್ಷಕರ ಖುಷಿ, ಗ್ಯಾಲರಿಯಲ್ಲಿ ಮೆಕ್ಸಿಕನ್‌ ಅಲೆ ಯಾಗಿ ಚಿಮ್ಮಿತು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಮೊದಲ ಸೆಮಿ ಫೈನಲ್‌ನ ಎರಡನೇ ಲೆಗ್‌ ಪಂದ್ಯದಲ್ಲಿ 3–0 ಅಂತರದ ಜಯದೊಂದಿಗೆ ಬಿಎಫ್‌ಸಿ ಫೈನಲ್ ಪ್ರವೇಶಿಸಿತು.

ಗುವಾಹಟಿಯಲ್ಲಿ ಕಳೆದ ಗುರುವಾರ ನಡೆದಿದ್ದ ಮೊದಲ ಲೆಗ್‌ನಲ್ಲಿ 1–2 ಗೋಲುಗಳಿಂದ ಸೋತಿದ್ದ ಬಿಎಫ್‌ಸಿ ಪ್ರಶಸ್ತಿ ಸುತ್ತು ಪ್ರವೇಶಿಸಬೇಕಾದರೆ ತವರಿನ ಪಂದ್ಯದಲ್ಲಿ ಕನಿಷ್ಠ 1–0 ಅಂತರದಿಂದ ಗೆಲ್ಲಬೇಕಾಗಿತ್ತು. ಇದನ್ನು ತಪ್ಪಿಲು ನಾಲ್ವರು ಡಿಫೆಂಡರ್‌ ಗಳೊಂದಿಗೆ ಎನ್ಇಯು ಕಣಕ್ಕೆ ಇಳಿದಿತ್ತು.

ಐವರು ಮಿಡ್‌ಫೀಲ್ಡರ್‌ಗಳು, ಮೂವರು ಡಿಫೆಂಡರ್‌ಗಳು ಮತ್ತು ಇಬ್ಬರು ಫಾರ್ವರ್ಡ್ ಆಟ ಗಾರರೊಂದಿಗೆ ಸವಾಲಿಗೆ ಸಜ್ಜಾಗಿದ್ದ ಬಿಎಫ್‌ಸಿ ಆಕ್ರಮಣಕಾರಿ ಆಟದ ಮೂಲಕ ಕ್ಷಣಕ್ಷಣವೂ ರೋಮಾಂಚನ ಮೂಡಿಸಿತು.

ಮೊದಲಾರ್ಧದಲ್ಲಿ ಅವಕಾಶಗ ಳನ್ನು ಕೈಚೆಲ್ಲಿದ ಆತಿಥೇಯರು ದ್ವಿತೀ ಯಾರ್ಧದಲ್ಲಿ ಎದುರಾಳಿಗಳ ರಕ್ಷಣಾ ಗೋಡೆ ಕೆಡವಿ ಗೆಲುವಿನ ಸೌಧ ಕಟ್ಟಿದರು. ಈ ಮೂಲಕ ಸತತ ಎರಡನೇ ಬಾರಿ ಫೈನಲ್‌ಗೆ ಲಗ್ಗೆ ಇರಿಸಿದರು.

ಮುನ್ನಡೆ ಗಳಿಸಿಕೊಟ್ಟ ಮಿಕು: ದ್ವಿತೀ ಯಾರ್ಧದಲ್ಲಿ ಪಂದ್ಯ ರೋಚಕ ಕ್ಷಣ ಗಳಿಗೆ ಸಾಕ್ಷಿಯಾಯಿತು. 72ನೇ ನಿಮಿಷದಲ್ಲಿ ಬಿಎಫ್‌ಸಿ ಮೊದಲ ಯಶಸ್ಸು ಗಳಿಸಿತು. ನಾಲ್ವರು ಆಟಗಾರರು ಹೆಣೆದ ತಂತ್ರಕ್ಕೆ ಗೋಲು ಒಲಿಯಿತು. ಬಲಭಾಗದಿಂದ ಹರ್ಮನ್‌ಜೋತ್ ಸಿಂಗ್‌ ಖಾಬ್ರಾ ನೀಡಿದ ಕ್ರಾಸ್‌, ಫ್ರಾನ್ಸಿಸ್ಕೊ ಹರ್ನಾಂಡಸ್‌ ಅವರ ಬಳಿಗೆ ಸಾಗಿತು. ಅವರು ಚೆಂಡನ್ನು ನಿಯಂತ್ರಿಸಿ ಉದಾಂತ ಸಿಂಗ್ ಅವರತ್ತ ತಳ್ಳಿದರು. ಚಾಣಾಕ್ಷತನ ಮೆರೆದ ಉದಾಂತ, ಚೆಂಡನ್ನು ಮಿಕು ಬಳಿಗೆ ಅಟ್ಟಿದರು.
ಪ್ರಥಮಾರ್ಧದಲ್ಲಿ ಮೂರು ಸುಲಭ ಅವಕಾಶಗಳನ್ನು ಕೈಚೆಲ್ಲಿದ್ದ ಮಿಕು ಮೋಹಕ ಗೋಲಿನೊಂದಿಗೆ ಸಂಭ್ರಮಿಸಿದರು.

ಉದಾಂತ, ಡೆಲ್ಗಾಡೊ ಮಿಂಚಿನ ಆಟ: 87ನೇ ನಿಮಿಷ, ಪಂದ್ಯದ ಅತ್ಯಂತ ಕುತೂಹಲಕಾರಿ ಕ್ಷಣಕ್ಕೆ ಸಾಕ್ಷಿಯಾಯಿತು. ತಮ್ಮ ಅಂಗಣದಿಂದ ಚೆಂಡಿನೊಂದಿಗೆ ಓಡುತ್ತ ಎದುರಾಳಿ ಅಂಗಣಕ್ಕೆ ನುಗ್ಗಿದ ಉದಾಂತ ಸಿಂಗ್ ಚೆಂಡನ್ನು ಬಲವಾಗಿ ಒದ್ದರು. ಆದರೆ ಚೆಂಡು ಗೋಲ್‌ಕೀಪರ್‌ನ ಕೈಯಿಂದ ವಾಪಸ್ ಬಂತು. ಅಷ್ಚರಲ್ಲಿ ಧಾವಿಸಿ ಬಂದ ದಿಮಾಸ್ ಡೆಲ್ಗಾಡೊ ಗಾಳಿಯಲ್ಲಿ ತೇಲಿ ಚೆಂಡನ್ನು ಗುರಿ ಮುಟ್ಟಿಸಿದರು. 90ನೇ ನಿಮಿಷದಲ್ಲಿ ಸುಲಭ ಗೋಲು ಗಳಿಸಿದ ಚೆಟ್ರಿ ತಂಡದ ಮುನ್ನಡೆಯನ್ನು 3–0ಗೆ ಏರಿಸಿದರು.

ಇಂದಿನ ಪಂದ್ಯ
ಎಫ್‌ಸಿ ಗೋವಾ – ಮುಂಬೈ ಸಿಟಿ ಎಫ್‌ಸಿ
ಸ್ಥಳ: ಜವಾಹರಲಾಲ್ ನೆಹರು ಕ್ರೀಡಾಂಗಣ, ಗೋವಾ
ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು