ಗುರುವಾರ , ಮಾರ್ಚ್ 4, 2021
29 °C

ಸಿಹಿ ಖಾರ ಭವಾನಿ ಕರಿ

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

Deccan Herald

ವಿಶೇಷ ಎನಿಸುವಂತಹ ಟಿಕ್ಕಾಗಳು, ಬಗೆಬಗೆಯ ದೋಸೆಗಳು, ಭಾರತೀಯ ರುಚಿಯ ಚೈನೀಸ್‌ ಖಾದ್ಯಗಳ ರುಚಿಯನ್ನು ಗ್ರಾಹಕರಿಗೆ ಪರಿಚಯಿಸುವ ಕಾಯಕದಲ್ಲಿ ನಿರತವಾಗಿದೆ ಭವಾನಿ ರೆಸ್ಟೊರೆಂಟ್.

ತಂದೂರ್‌ ಪ್ಲ್ಯಾಟರ್‌

ಗೋಡಂಬಿ ಮತ್ತು ಮಸಾಲೆಯನ್ನು ಪನೀರ್ ಚೂರುಗಳಿಗೆ ಬೆರೆಸಿ ಅವನ್ನು ಲೋಹದ ಕಡ್ಡಿಗೆ ಸಿಕ್ಕಿಸಿ ತಂದೂರಿ ರೋಟಿ ಸುಡುವ ಹಾಗೆ ಒಲೆಯಲ್ಲಿ ಸುಟ್ಟು ಪುದೀನ ಚಟ್ನಿಯೊಂದಿಗೆ ನೀಡುವ ಪನೀರ್ ಸ್ಟಫ್‌ ಟಿಕ್ಕ ಸವಿಯುವ ಮಜವೇ ಬೇರೆ. ಇದರಂತೆಯೇ ಹೂಕೋಸು, ಬೇಬಿ ಕಾರ್ನ್‌, ಮಶ್ರೂಮ್‌ ಮತ್ತು ಆಲೂಗಡ್ಡೆಯ ಚೂರುಗಳಿಗೂ ಗೋಡಂಬಿ ಮತ್ತು ಮಸಾಲೆಯನ್ನು ಹದವಾಗಿ ಬೆರೆಸಿ ಒಲೆಯಲ್ಲಿ ಸುಟ್ಟು ಟಿಕ್ಕಾಗಳನ್ನು ತಯಾರಿಸುತ್ತಾರೆ. ಈ ಎಲ್ಲ ಟಿಕ್ಕಾಗಳು ತಂದೂರ್ ಪ್ಲಾಟರ್‌ ಹೆಸರಿನಲ್ಲಿ ಸವಿಯಲು ಸಿಗುತ್ತವೆ. ಸ್ಮಾಲ್‌ ಪ್ಲಾಟರ್‌ ಮತ್ತು ಬಿಗ್‌ ಪ್ಲಾಟರ್‌ ವಿಧಗಳಲ್ಲಿ ದೊರೆಯುತ್ತವೆ. ಇವನ್ನು ತಂದೂರಿ ರೋಟಿಗಳೊಂದಿಗೆ ಸವಿಯಬಹುದು.

ಭವಾನಿ ಸ್ಪೆಷಲ್ ಕರಿ

ಕ್ಯಾರೆಟ್‌, ಬೀನ್ಸ್‌, ಬಟಾಣಿ, ಹೂಕೋಸುಗಳನ್ನು ಚೂರು ಮಾಡಿ, ಗೋಡಂಬಿ, ದ್ರಾಕ್ಷಿಯಂತಹ ಒಣಹಣ್ಣುಗಳನ್ನು ಬೆರೆಸಿ ತಯಾರಿಸುವ ಕರಿ ಮತ್ತು ಪನೀರ್‌ ಚೂರುಗಳಿಗೆ ಮಸಾಲೆ ಬೆರೆಸಿ ತಯಾರಿಸುವ ಕರಿಗಳನ್ನು ಒಂದೇ ತಟ್ಟೆಯಲ್ಲಿಟ್ಟು ಬಡಿಸುವ ಭವಾನಿ ಸ್ಪೆಷಲ್ ಕರಿ ಈ ರೆಸ್ಟೊರೆಂಟ್‌ನ ವಿಶೇಷ ಖಾದ್ಯ. ಸಿಹಿ ಮತ್ತು ಖಾರ ಎರಡೂ ಬಗೆಯ ರುಚಿಗಳನ್ನು ಒಂದೇ ತಟ್ಟೆಯಲ್ಲಿ ರೋಟಿಯೊಂದಿಗೆ ಸವಿಯಬಹುದು. ಅಲಂಕಾರಕ್ಕಾಗಿ ಸುತ್ತ ಆ್ಯಪಲ್ ಚೂರುಗಳನ್ನು ಇಟ್ಟು ಅಲ್ಲಲ್ಲಿ, ಚೆರ‍್ರಿ ಹಣ್ಣುಗಳನ್ನು ಹರಡುವುದರಿಂದ ನೋಡುವುದಕ್ಕೆ ಆಕರ್ಷಕವಾಗಿ ಕಾಣಿಸುತ್ತದೆ. 

ಕಾಫಿ, ಟೀನಂತಹ ಬಿಸಿ ಪಾನೀಯಗಳಿಂದ ಹಿಡಿದು, ತಾಣ ಹಣ್ಣಿನ ರಸಗಳವರೆಗೆ ಎಲ್ಲ ಬಗೆಯ ಪಾನೀಯಗಳು ಇಲ್ಲಿ ಸಿಗುತ್ತವೆ.  ಬೆಳಗಿನ ತಿಂಡಿಗೆ ಇಡ್ಲಿ, ದೋಸೆ, ಬಗೆ ಬಗೆಯ ಚಿತ್ರಾನ್ನಗಳ ಜತೆಗೆ ಅಕ್ಕಿರೊಟ್ಟಿ, ರಾಗಿರೊಟ್ಟಿ ಕೂಡ ಸಿಗುತ್ತದೆ. ಮಧ್ಯಾಹ್ನದ ಊಟಕ್ಕೆ ದಕ್ಷಿಣ ಭಾರತ ಮತ್ತು ಉತ್ತರ ಭಾರತ ಶೈಲಿಯ ವಿಧ ವಿಧದ ಖಾದ್ಯಗಳನ್ನು ಸವಿಯಬಹುದು. ಸಂಜೆ ತಿಂಡಿಗೆ ಚಾಟ್ಸ್‌ಗಳು, ಮಂಚೂರಿಗಳು, ಪಾವ್‌ಭಾಜಿ ಇತ್ಯಾದಿ ಖಾದ್ಯಗಳು ದೊರೆಯುತ್ತವೆ.

‘ಖಾದ್ಯಗಳನ್ನು ರುಚಿಯಾಗಿ ತಯಾರಿಸುವುದಕ್ಕೆ ಎಷ್ಟು ಗಮನ ಕೊಡುತ್ತೇವೆಯೊ, ಗ್ರಾಹಕರ ಆರೋಗ್ಯದ ಕಡೆಗೂ ಅಷ್ಟೇ ಕಾಳಜಿ ವಹಿಸುತ್ತೇವೆ’ ಎನ್ನುತ್ತಾರೆ ರೆಸ್ಟೊರೆಂಟ್ ಮಾಲೀಕರಾದ ರಾಜಶೇಖರ್‌.

‘ನಮ್ಮ ರೆಸ್ಟೊರೆಂಟ್‌ನಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸಬಾರದು ಎಂದು ನಿರ್ಧರಿಸಿದ್ದೇನೆ. ಬೇಡಿಕೆಗೆ ತಕ್ಕಂತೆ ಆಯಾ ದಿನದ ಅಡುಗೆ ಅಂದೇ ತಯಾರಿಸುತ್ತೇವೆ. ಆ ದಿನಕ್ಕೆ ಬೇಕಾಗುವ ತರಕಾರಿಯನ್ನೂ ಅಂದೇ ಖರೀದಿಸುತ್ತೇವೆ. ಆಹಾರ ಸಾಮಗ್ರಿ ದಾಸ್ತಾನು ಮಾಡಲು ಮತ್ತು ಅಡುಗೆ ತಯಾರಿಸಲು ಎರಡು ಪ್ರತ್ಯೇಕ ಕೋಣೆಗಳನ್ನು ಮೀಸಲಿಟ್ಟಿದ್ದೇವೆ. ನಮ್ಮಲ್ಲಿ ತಯಾರಿಸುವ ಎಲ್ಲ ಬಗೆಯ ದೋಸೆಗಳಿಗೆ ‘ರೈಸ್‌ ಬ್ರೈನ್ ಆಯಿಲ್‌’ ಬಳಸುತ್ತೇವೆ. ಈ ಎಣ್ಣೆ ಸ್ವಲ್ಪ ದುಬಾರಿಯಾದರೂ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಬಳಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ವನಸ್ಪತಿ ಬಳಸುವುದಿಲ್ಲ’ ಎಂದು ಅವರು ಹೇಳುತ್ತಾರೆ.

‘ಮೊದಲಿನಿಂದಲೂ ವಿಶೇಷ ತಿನಿಸುಗಳು, ರುಚಿಯಾದ ಖಾದ್ಯಗಳ ಕಡೆಗೆ ಆಕರ್ಷಣೆ ಇತ್ತು. ಜನರಿಗೆ ವಿಶೇಷ ರುಚಿಗಳನ್ನು ಪರಿಚಯಿಸುವ ಉದ್ದೇಶದಿಂದ ಏಳು ತಿಂಗಳ ಹಿಂದೆ ಭವಾನಿ ರೆಸ್ಟೊರೆಂಟ್ ಆರಂಭಿಸಿದೆ. ಸದಾನಂದ ಮಯ್ಯ, ಬೆಂಗಳೂರಿಗೆ ದರ್ಶನಿ ಪರಿಕಲ್ಪನೆಯನ್ನು ಪರಿಚಯಿಸಿದ ಪ್ರಭಾಕರ್ ಅವರಂತಹ ಆಹಾರ ಉದ್ಯಮದ ದಿಗ್ಗಜರೇ ನನಗೆ ಸ್ಫೂರ್ತಿ’ ಎನ್ನುತ್ತಾರೆ.

*********

ಭವಾನಿ ರೆಸ್ಟೊರೆಂಟ್‌

ಸಮಯ: ಬೆಳಗ್ಗೆ 6ರಿಂದ ರಾತ್ರಿ 10:30

ಸ್ಥಳ: ದೊಡ್ಡ ಗಣಪತಿ ದೇವಸ್ಥಾನದ ಎದುರು, ಬಸವನಗುಡಿ

ಸಂಪರ್ಕ:7338388883

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.