ಸೋಮವಾರ, ಮೇ 17, 2021
23 °C
ಟ್ರಸ್ಟಿ ಚಿನ್ನಪ್ಪಿ ಮೇಲೆ ದ್ವೇಷ ಸಾಧಿಸುತ್ತಿದ್ದ ದೊಡ್ಡಯ್ಯನನ್ನು ಕೃತ್ಯಕ್ಕೆ ಬಳಸಿಕೊಂಡಿದ್ದ ಅಂಬಿಕಾ

ಮಹತ್ವದ ಸುಳಿವು ನೀಡಿದ ಕೃಷಿ ಅಧಿಕಾರಿ ಭೇಟಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಸುಳ್ವಾಡಿ ದುರಂತ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಮಹತ್ವದ ಸುಳಿವು ನೀಡಿದ್ದು ಅಂಬಿಕಾ ಮನೆಗೆ ಕೃಷಿ ಅಧಿಕಾರಿಯೊಬ್ಬರು ನೀಡಿದ್ದ ಭೇಟಿ.

ದೇವರ ಪ್ರಸಾದಕ್ಕೆ ಬೆರೆಸಲಾಗಿದ್ದ ಕ್ರಿಮಿನಾಶಕವನ್ನು ಅಂಬಿಕಾ ಅವರು ತಮ್ಮ ಸಂಬಂಧಿಯಾಗಿದ್ದ, ಹನೂರು ತಾಲ್ಲೂಕಿನಲ್ಲಿ ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರ ಮೂಲಕ ತರಿಸಿದ್ದರು.

ಡಿ.14ರಂದು ನಡೆದ ಗುದ್ದಲಿ ಪೂಜೆ ‌ಕಾರ್ಯಕ್ರಮಕ್ಕೂ 8–10 ದಿನಗಳ ಮೊದಲು, ಮನೆಯಲ್ಲಿ ಗಿಡಗಳು ಹಾಳಾಗಿವೆ; ಕ್ರಿಮಿನಾಶಕ ತರುವಂತೆ ಅಂಬಿಕಾ ಅವರು ಆ ಅಧಿಕಾರಿಗೆ ಹೇಳುತ್ತಾರೆ. ಅದರಿಂದ ಅವರು, ಅರ್ಧ ಲೀಟರ್‌ನ ಎರಡು ಬಾಟಲಿಗಳನ್ನು ಅಂಬಿಕಾ ಮನೆಗೆ ತೆಗೆದುಕೊಂಡು ಹೋಗಿ ಕೊಡುತ್ತಾರೆ.

ದುರಂತ ನಡೆದ ದಿನದಂದೇ, ದೇವಾಲಯದ ಟ್ರಸ್ಟಿ ಚಿನ್ನಪ್ಪಿ ಅವರೊಂದಿಗೆ ವ್ಯವಸ್ಥಾಪಕ ಮಾದೇಶ ಅವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.  

ಮಾದೇಶನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ತನಿಖಾಧಿಕಾರಿಗಳು, ಇತ್ತೀಚೆಗೆ ಅವರ ಮನೆಗೆ ಯಾರೆಲ್ಲಾ ಭೇಟಿ ನೀಡಿದ್ದಾರೆ ಎಂಬ ವಿವರಗಳನ್ನು ಕಲೆ ಹಾಕಿದ್ದರು. ಈ ಸಂದರ್ಭದಲ್ಲಿ ಮಾದೇಶ ಮತ್ತು ಅಂಬಿಕಾ ದಂಪತಿ ಮನೆಗೆ ಕೃಷಿ ಅಧಿಕಾರಿ ಭೇಟಿ ನೀಡಿದ್ದ ಮಾಹಿತಿ ಸಿಕ್ಕಿತ್ತು.

‘ನಂತರ ಆ ಕೃಷಿ ಅಧಿಕಾರಿ ಅವರನ್ನು ಕರೆದು ವಿಚಾರಣೆ ನಡೆಸಿದಾಗ, ಕೀಟನಾಶಕವನ್ನು ಅಂಬಿಕಾ ಮನೆಗೆ ತಲುಪಿಸಿದ್ದಾಗಿ ತಿಳಿಸಿದರು’ ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ತಿಳಿಸಿದರು.

‘ದುರಂತದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಲೇ, ಆ ಅಧಿಕಾರಿ ಅಂಬಿಕಾಗೆ ಕರೆ ಮಾಡಿ, ಪ್ರಸಾದದಲ್ಲಿ ತಾನು ಕೊಟ್ಟ ಕ್ರಿಮಿನಾಶಕ ಬೆರೆಸಿದ್ದೀಯಾ ಎಂದು ಪ್ರಶ್ನಿಸಿದ್ದರು. ಆಗ ಆಕೆ ಹೌದು, ಸ್ವಾಮೀಜಿಯವರ ಆದೇಶದ ಮೇರೆಗೆ ಗಂಡನ ಸಹಾಯದಿಂದ ಕೀಟನಾಶಕವನ್ನು ಪ್ರಸಾದದಲ್ಲಿ ಬೆರೆಸಿದ್ದಾಗಿ ಹೇಳಿದ್ದರು’ ಎಂದು ಐಜಿಪಿ ಹೇಳಿದರು.

ಅಸ್ವಸ್ಥನಂತೆ ನಟಿಸಿದ್ದ ದೊಡ್ಡಯ್ಯ: ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿ ದೊಡ್ಡಯ್ಯನ ಪಾತ್ರದ ಬಗ್ಗೆ ಪೊಲೀಸರಿಗೆ ತಿಳಿದಿದ್ದು ಮಾದೇಶ ಮತ್ತು ಅಂಬಿಕಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ.

‘ದೊಡ್ಡಯ್ಯನನ್ನು ಹುಡುಕಿದಾಗ ಸಿಗಲಿಲ್ಲ. ತನಿಖೆ ನಡೆಸಿದಾಗ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಗೊತ್ತಾಯಿತು. ಆತ ಪ್ರಸಾದ ಸೇವಿಸಿರಲಿಲ್ಲ. ಹಾಗಿದ್ದರೂ, ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಆತ ಮಂಗಳವಾರವೇ ಅಲ್ಲಿಂದ ವಾಪಸ್‌ ಬಂದಿದ್ದರು. ನಂತರ ಅವರನ್ನು ಪತ್ತೆ ಹಚ್ಚಲಾಯಿತು’ ಎಂದು ಐಜಿಪಿ ತಿಳಿಸಿದರು.

ಟ್ರಸ್ಟಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದ ಸ್ವಾಮೀಜಿ: ಆರಂಭದಲ್ಲಿ ವಿಚಾರಣೆ ನಡೆಸುವಾಗ ಇಮ್ಮಡಿ ಮಹಾದೇವಸ್ವಾಮಿ ಅವರು ಟ್ರಸ್ಟಿಗಳ ಮೇಲೆಯೇ ಹರಿಹಾಯ್ದಿದ್ದರು. 

‘ಎಲ್ಲವನ್ನೂ ನನ್ನನ್ನು ಬಿಟ್ಟು ಮಾಡುತ್ತಾರೆ, ಮರ್ಯಾದೆಯೇ ಕೊಡುತ್ತಿಲ್ಲ. ಬೆಲೆ ಕೊಡುತ್ತಿಲ್ಲ. ನನ್ನನ್ನು ಬಿಟ್ಟು ಗೋಪುರ ಕಟ್ಟುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಶರತ್‌ಚಂದ್ರ ಹೇಳಿದರು.

ಮನೆಗೆ ಭೇಟಿ: ಸ್ವಾಮೀಜಿ ಇಮ್ಮಡಿ ಮಹಾದೇವಸ್ವಾಮಿ ಹಾಗೂ ಮಾದೇಶ ಅವರ ಪತ್ನಿ ಅಂಬಿಕಾ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಸಂಗತಿಯೂ ತನಿಖೆಯ ವೇಳೆ ಬಹಿರಂಗವಾಗಿದೆ.

ಅಂಬಿಕಾ ಹಾಗೂ ಮಾದೇಶ ಅವರು ಮದುವೆ ಆದ ನಂತರ ಸಾಲೂರು ಮಠಕ್ಕೆ ಹೋಗುತ್ತಿದ್ದರು. ಮೊದಲೇ ಪರಿಚಿತರಾಗಿದ್ದ ಮಹಾದೇವಸ್ವಾಮಿ ಹಾಗೂ ಅಂಬಿಕಾ ಅವರ ನಡುವೆ ಸಲುಗೆ ಇತ್ತು. ಇದು ದೈಹಿಕ ಸಂಬಂಧಕ್ಕೆ ತಿರುಗಿತ್ತು. ಅಂಬಿಕಾ ಅವರ ಮನೆಗೆ ಸ್ವಾಮೀಜಿ ಆಗಾಗ ಬರುತ್ತಲೇ ಇದ್ದರು ಎಂದು ಐಜಿಪಿ ತಿಳಿಸಿದರು. 

ಚಿನ್ನಪ್ಪಿ ಮೇಲೆ ಹಗೆ ಸಾಧಿಸುತ್ತಿದ್ದ ದೊಡ್ಡಯ್ಯ

‌ಟ್ರಸ್ಟಿ ಚಿನ್ನಪ್ಪಿ ಮೇಲೆ ದ್ವೇಷ ಸಾಧಿಸುತ್ತಿದ್ದ ದೊಡ್ಡಯ್ಯ ಅವರನ್ನು ಅಂಬಿಕಾ ಅವರು ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದರು. 

‘ದೊಡ್ಡಯ್ಯ ದೇವಾಲಯದ ಪಕ್ಕದಲ್ಲಿರುವ ನಾಗರಕಲ್ಲಿನ ಅರ್ಚಕನಾಗಿ ಕೆಲಸ ಮಾಡುತ್ತಿದ್ದರು. ಈತ ಜನರ ಭಕ್ತಿಯನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಇದನ್ನು ಆಕ್ಷೇಪಿಸಿದ್ದ ಚಿನ್ನಪ್ಪಿ ಬುದ್ಧಿವಾದ ಹೇಳಿ‌ದ್ದರು. ಇದರಿಂದ ದೊಡ್ಡಯ್ಯ ಕೋಪಗೊಂಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಗಾಂಜಾ ಪ್ರಕರಣದಲ್ಲಿ ಡೊಡ್ಡಯ್ಯ ಜೈಲಿಗೆ ಹೋಗಿ ಬಂದ ನಂತರ ಚಿನ್ನಪ್ಪಿ ಆ‌ತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದಾಗಿ ಚಿನ್ನಪ್ಪಿ ಮೇಲೆ ಅವರಿಗೆ ಮತ್ತಷ್ಟು ದ್ವೇಷ ಉಂಟಾಗಿತ್ತು. ಅಂಬಿಕಾ ಪ್ರಸಾದಕ್ಕೆ ವಿಷ ಬೆರೆಸಲು ದೊಡ್ಡಯ್ಯನನ್ನು ಬಳಸಿಕೊಂಡರು’ ಎಂದು ಶರತ್‌ಚಂದ್ರ ಅವರು ಮಾಹಿತಿ ನೀಡಿದರು. 

‘ಕೃಷಿ ಅಧಿಕಾರಿ ಕ್ರಿಮಿನಾಶಕವನ್ನು ಕೊಡಲು ಅಂಬಿಕಾ ಮನೆಗೆ ಹೋಗಿದ್ದಾಗ ದೊಡ್ಡಯ್ಯ ಅಲ್ಲಿದ್ದರು.  ‌ಕೆಲಸ ಕಳೆದುಕೊಂಡ ನಂತರ ದೊಡ್ಡಯ್ಯ ಗುದ್ದಲಿ ಪೂಜೆಯಂದೇ ಅಲ್ಲಿಗೆ ಹೋಗಿದ್ದರು’ ಎಂದು ವಿವರಿಸಿದರು.

ಹಿರಿಯ, ಕಿರಿಯ ಶ್ರೀಗಳ ನಡುವೆ ವೈಮನಸ್ಸು

ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ ಸ್ವಾಮೀಜಿ ಗುರುಸ್ವಾಮಿ ಹಾಗೂ ಕಿರಿಯ ಸ್ವಾಮಿ ಇಮ್ಮಡಿ ಮಹಾದೇವಸ್ವಾಮಿ ನಡುವೆ 25 ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ.

25 ವರ್ಷಗಳ ಹಿಂದೆ ಮಠದ ಹಿರಿಯ ಸ್ವಾಮೀಜಿ ನಿಧನ ಹೊಂದಿದ್ದ ಸಂದರ್ಭದಲ್ಲಿ ಮುಂದಿನ ಪೀಠಾಧ್ಯಕ್ಷರು ಯಾರು ಎಂಬ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಇಮ್ಮಡಿ ಮಹಾದೇವಸ್ವಾಮಿ ಅವರು ನಿಧನ ಹೊಂದಿದ್ದ ಶ್ರೀಗಳ ಸಂಬಂಧಿ ಆಗಿದ್ದರು. ಆದರೆ, ಹಿರಿಯರಾಗಿದ್ದ ಗುರುಸ್ವಾಮಿ ಅವರಿಗೆ ಪಟ್ಟ ಕಟ್ಟಲಾಗಿತ್ತು. ಇದರಿಂದ ಕಿರಿಯ ಶ್ರೀಗಳು ಅಸಮಾಧಾನ ಗೊಂಡಿದ್ದರು.

‘ಕನಕಪುರದ ಸ್ವಾಮೀಜಿಯೊಬ್ಬರು ಈ ವಿವಾದವನ್ನು ಇತ್ಯರ್ಥ ಪಡಿಸಿದ್ದರು. ಮಠ ಹಾಗೂ ಧಾರ್ಮಿಕ ಚಟುವಟಿಕೆಗಳ ಹೊಣೆಯನ್ನು ಹಿರಿಯ ಸ್ವಾಮೀಜಿಗೆ ಒಪ್ಪಿಸಲಾಗಿತ್ತು. ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ಕಿರಿಯ ಶ್ರೀಗಳಿಗೆ ಹೊರಿಸಲಾಗಿತ್ತು’ ಎಂದು ಶರತ್‌ಚಂದ್ರ ಹೇಳಿದರು.

ಹೊಡೆದಾಟ: ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಏಕವಚನದಲ್ಲಿ ಬೈದಾಡಿಕೊಳ್ಳುತ್ತಿದ್ದರು. ಇಮ್ಮಡಿ ಮಹಾದೇವಸ್ವಾಮಿ ಅವರು ಗುರುಸ್ವಾಮಿ ಅವರಿಗೆ ಹೊಡೆದಿರುವ ನಿದರ್ಶನಗಳೂ ಉಂಟು ಎಂದು ಮಠವನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

‘ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಹಿರಿಯ ಸ್ವಾಮೀಜಿ ಬಂದಿದ್ದರು. ಪ್ರಕರಣದಲ್ಲಿ ಅವರು ಜೈಲಿಗೆ ಹೋದರೆ ಇಡೀ ಮಠ ತನ್ನ ಕೈ ವಶವಾಗುತ್ತದೆ ಎಂಬ ದುರಾಲೋಚನೆ ಕೂಡ ಇಮ್ಮಡಿ ಮಹಾದೇವಸ್ವಾಮಿ ಅವರಿಗೆ ಇದ್ದಿರಬಹುದು’ ಎಂದು ಐಜಿಪಿ ಶಂಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು