‘ತಳಹಂತಕ್ಕೂ ವಿಚಾರ ಕೊಂಡೊಯ್ಯಲು ಸಂಘಟನೆ’

ಗುರುವಾರ , ಜೂಲೈ 18, 2019
28 °C
ಬಿಜೆಪಿ ಸದಸ್ಯತಾ ಅಭಿಯಾನ–2019ಕ್ಕೆ ಮೈಸೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಚಾಲನೆ

‘ತಳಹಂತಕ್ಕೂ ವಿಚಾರ ಕೊಂಡೊಯ್ಯಲು ಸಂಘಟನೆ’

Published:
Updated:
Prajavani

ಮೈಸೂರು: ‘ದೇಶದ ಮೂಲೆ ಮೂಲೆಗೂ; ತಳ ಹಂತದ ವ್ಯಕ್ತಿಗೂ ಬಿಜೆಪಿಯ ವಿಚಾರಧಾರೆಗಳನ್ನು ತಲುಪಿಸಲಿಕ್ಕಾಗಿ ಸದಸ್ಯತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

‘ಬಿಜೆಪಿ ಈಗಾಗಲೇ 12.5 ಕೋಟಿ ಸದಸ್ಯರನ್ನು ಹೊಂದಿದೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿಕ್ಕಾಗಿ ಶನಿವಾರ ದೇಶದ 300ಕ್ಕೂ ಹೆಚ್ಚು ಕಡೆ ಅಭಿಯಾನಕ್ಕೆ ಏಕಕಾಲಕ್ಕೆ ಚಾಲನೆ ನೀಡಿದ್ದೇವೆ’ ಎಂದು ಶನಿವಾರ ಮುಸ್ಸಂಜೆ ನಗರದ ಅರಮನೆ ಮುಂಭಾಗ ನಡೆದ ಸದಸ್ಯತಾ ಅಭಿಯಾನದಲ್ಲಿ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ, ಗೃಹ ಸಚಿವ, ಪಕ್ಷದ ಅಧ್ಯಕ್ಷ ಅಮಿತ್ ಶಾ ತೆಲಂಗಾಣದಲ್ಲಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಒಂದು ತಿಂಗಳು ಈ ಅಭಿಯಾನ ನಡೆಯಲಿದೆ. ಮಿಸ್ಡ್‌ ಕಾಲ್‌ ಕೊಡುವ ಮೂಲಕ ಜನರು ಬಿಜೆಪಿಯ ಸದಸ್ಯರಾಗಬಹುದು’ ಎಂದರು.

ಕಮ್ಯುನಿಸ್ಟರ ಕೊನೆಯ ಹಂತ:

‘ವಿಚಾರದ ಆಧಾರದಲ್ಲಿ ಬಿಜೆಪಿ ಉಳಿದ ಪಕ್ಷಗಳಿಗಿಂತ ವಿಭಿನ್ನ. ದೇಶ ಪ್ರಥಮ ಎಂಬ ಕಲ್ಪನೆಯೊಂದಿಗೆ ನಮ್ಮ ಹಿರಿಯರು ಪಕ್ಷ ಕಟ್ಟಿದ್ದಾರೆ. ಕೇಡರ್‌ ಬೇಸ್‌ ಪಕ್ಷ ನಮ್ಮದು. ಕಮ್ಯುನಿಸ್ಟರು ಈ ಹಿಂದೆ ಇದನ್ನು ಪಾಲಿಸಿದ್ದರು. ಕೇಡರ್ ಬೇಸ್‌ನಿಂದ ಹೊರ ಬಂದ ಪರಿಣಾಮ ಇದೀಗ ಕೊನೆಯ ಹಂತದಲ್ಲಿದ್ದಾರೆ’ ಎಂದು ಸದಾನಂದಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಓಲೈಕೆಯ ರಾಜನೀತಿ ಹೊಂದದ ಪಕ್ಷ ನಮ್ಮದು. ಜಾತಿ ಮೀರಿ ರಾಜಕಾರಣ ಮಾಡುತ್ತಿದ್ದೇವೆ. ಆಡಳಿತದಲ್ಲಿ ಪಾರದರ್ಶಕತೆ ಅಳವಡಿಸಿಕೊಂಡಿದ್ದೇವೆ. ಆರ್ಥಿಕ ಶಿಸ್ತು ಪಾಲನೆಯಿಂದ ಪ್ರಜಾತಂತ್ರ ವ್ಯವಸ್ಥೆಗೆ ಗೌರವ ತಂದುಕೊಡುತ್ತಿದ್ದೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಮುಖ್ಯ. ಆದರೂ ಅಧಿಕಾರಕ್ಕಿಂತ ವಿಚಾರ ಮುಖ್ಯ ಎಂದು ನಂಬಿರುವವರು ನಾವು’ ಎಂದು ಹೇಳಿದರು.

‘ಮೈಸೂರು ಭಾಗ ಬಿಜೆಪಿಯ ಸಂಘಟನೆಗೆ ವಿಶೇಷವಾದುದು. ಲೋಕಸಭಾ ಚುನಾವಣೆಯಲ್ಲಿ ಮೈಸೂರು ಸೇರಿದಂತೆ, ಮಂಡ್ಯ, ಚಾಮರಾಜನಗರದಲ್ಲಿ ಈ ಬಾರಿ ಕಮಲ ಅರಳಿದ್ದು, ನೆಲೆಯನ್ನು ಸುಭದ್ರಗೊಳಿಸಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ನಗರ ಘಟಕದ ಅಧ್ಯಕ್ಷ ಮಂಜುನಾಥ್, ರಾಜ್ಯ ಕಾರ್ಯದರ್ಶಿ ರಾಜೇಂದ್ರ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !