737 ಮ್ಯಾಕ್ಸ್‌ ವಿಮಾನ ಹಾರಾಟಕ್ಕೆ ತಡೆ: ಕುಸಿದ ಬೋಯಿಂಗ್ ಷೇರು

ಬುಧವಾರ, ಮಾರ್ಚ್ 27, 2019
26 °C

737 ಮ್ಯಾಕ್ಸ್‌ ವಿಮಾನ ಹಾರಾಟಕ್ಕೆ ತಡೆ: ಕುಸಿದ ಬೋಯಿಂಗ್ ಷೇರು

Published:
Updated:

ಇಥಿಯೋಪಿಯಾದಲ್ಲಿ ಬೋಯಿಂಗ್‌ 737 ಮ್ಯಾಕ್ಸ್‌–8 ವಿಮಾನ ಪತನಗೊಂಡು ಪ್ರಯಾಣಿಸುತ್ತಿದ್ದ ಎಲ್ಲ 157 ಮಂದಿ ಸಾವಿಗೀಡಾದ ದುರ್ಘಟನೆ ಬೆನ್ನಲೇ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು 737 ಮ್ಯಾಕ್ಸ್‌ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿವೆ. ವಿಮಾನಗಳ ರದ್ದು ನಿರ್ಧಾರ ಹೊರ ಬರುತ್ತಿದ್ದಂತೆ ನ್ಯೂಯಾರ್ಕ್‌ ಷೇರು ಮಾರುಕಟ್ಟೆಯಲ್ಲಿ ಬೋಯಿಂಗ್‌ ಸಂಸ್ಥೆ ಷೇರು ಬೆಲೆ ಕುಸಿತ ಕಂಡಿದೆ. 

ಕಳೆದ ಶುಕ್ರವಾರ 422.42 ಡಾಲರ್‌ ಇದ್ದ ಬೋಯಿಂಗ್‌ ಪ್ರತಿ ಷೇರಿನ ಬೆಲೆ, ಸೋಮವಾರ ದಿಢೀರ್‌ ಕುಸಿತಕ್ಕೆ ಒಳಗಾಗಿ 371.40 ಡಾಲರ್‌ಗೆ ಇಳಿಕೆಯಾಯಿತು. ಬುಧವಾರ ಷೇರು ಬೆಲೆ 375 ಡಾಲರ್‌ ತಲುಪಿದೆ. ಬೋಯಿಂಗ್‌ ವಿಮಾನಗಳನ್ನು ಹಲವು ರಾಷ್ಟ್ರಗಳು ತಾತ್ಕಾಲಿಕ ಸ್ಥಗಿತಗೊಳಿಸುವ ನಿರ್ಧಾರದಿಂದ ಹೂಡಿಕೆದಾರರ ಮೇಲೆ ಪರಿಣಾಮ ಉಂಟಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿದೆ. 

ಭಾರತದಲ್ಲಿ ಸ್ಪೈಸ್‌ಜೆಟ್‌ ಸಂಸ್ಥೆ ಬೋಯಿಂಗ್‌ 737 ಮ್ಯಾಕ್ಸ್‌–8 ಮಾದರಿಯ 13 ವಿಮಾನಗಳನ್ನು ಹಾಗೂ ಜೆಟ್‌ ಏರ್‌ವೇಸ್‌ 5 ವಿಮಾನಗಳನ್ನು ಹೊಂದಿದ್ದು, ಈ ಎಲ್ಲ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೋಯಿಂಗ್‌ನ ಇದೇ ಮಾದರಿ ವಿಮಾನವು ಇಂಡೋನೇಷ್ಯಾದಲ್ಲಿ ಪತನಗೊಂಡ 189 ಮಂದಿ ಸಾವಿಗೀಡಾಗಿದ್ದರು. ಲಯನ್‌ ಏರ್‌ ಸಂಸ್ಥೆ ಆ ವಿಮಾನ ಕಾರ್ಯಾಚರಿಸುತ್ತಿತ್ತು. ಎರಡನೇ ಬಾರಿ ಅಂಥದ್ದೇ ದುರಂತ ಸಂಭವಿಸಿರುವುದರಿಂದ 737–ಮ್ಯಾಕ್ಸ್‌ ವಿಮಾನಗಳಲ್ಲಿನ ತಾಂತ್ರಿಕ ತೊಡಕಿನ ಬಗ್ಗೆ ವಿಮಾನ ಸೇವೆ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.

ಜಗತ್ತಿನ ಅತಿ ದೊಡ್ಡ ವಿಮಾನ ನಿರ್ಮಾಣ ಸಂಸ್ಥೆಯಾಗಿರುವ ಬೋಯಿಂಗ್‌ 25 ಬಿಲಿಯನ್‌ ಡಾಲರ್‌(₹1.74 ಲಕ್ಷ ಕೋಟಿ) ಮಾರುಕಟ್ಟೆ ಮೌಲ್ಯ ಹೊಂದಿದೆ. 2009ರ ಜೂನ್‌ನಿಂದ ಇದೇ ಮೊದಲ ಬಾರಿಗೆ ಎರಡೇ ದಿನಗಳಲ್ಲಿ ಬೋಯಿಂಗ್‌ ಷೇರು ಶೇ 8–10ರಷ್ಟು ಕುಸಿದಿದೆ. ಅತಿ ವೇಗವಾಗಿ ಮಾರಾಟವಾಗಿರುವ ಬೋಯಿಂಗ್‌ ವಿಮಾನಗಳಿಗೆ ಈಗಾಗಲೇ ಜಗತ್ತಿನಾದ್ಯಂತ ಸಾಕಷ್ಟು ಬೇಡಿಕೆ ಉಂಟಾಗಿತ್ತು. ಬೋಯಿಂಗ್‌ ತೆಕ್ಕೆಯಲ್ಲಿ 5000 ವಿಮಾನಗಳ ಪೂರೈಕೆಗೆ ಬೇಡಿಕೆ ಇದೆ. 

ಭಾರತ, ಚೀನಾ, ಮಲೇಷಿಯಾ, ಸಿಂಗಾಪುರ್,ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಯುರೋಪಿಯನ್‌ ಒಕ್ಕೂಟ ರಾಷ್ಟ್ರಗಳು 737 ಮ್ಯಾಕ್ಸ್‌ ವಿಮಾನಗಳ ಹಾರಾಟ ಸ್ಥಗಿತಗೊಳಿಸಿವೆ. ಆದರೆ, ಬೋಯಿಂಗ್‌, ತನ್ನ ಮ್ಯಾಕ್ಸ್‌ ಮಾದರಿ ವಿಮಾನಗಳಲ್ಲಿ ಸುರಕ್ಷತೆಯ ಕುರಿತು ಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. 

ಸುರಕ್ಷತಾ ತಜ್ಞರ ಪ್ರಕಾರ, ‍‍ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ರೆಕಾರ್ಡರ್‌ ಪರಿಶೀಲನೆ ನಡೆಸುವವರೆಗೂ ದುರಂತಕ್ಕೆ ಸ್ಪಷ್ಟ ಕಾರಣ ದೊರೆಯುವುದಿಲ್ಲ ಎಂದಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !