‘ಬೊಗಸೆ ಜೋಳ ನಮ್ಮ ರಸ್ತೆಗಾಗಿ’ ಅಭಿಯಾನ

ಸೋಮವಾರ, ಮೇ 27, 2019
24 °C

‘ಬೊಗಸೆ ಜೋಳ ನಮ್ಮ ರಸ್ತೆಗಾಗಿ’ ಅಭಿಯಾನ

Published:
Updated:
Prajavani

ದೇವರಹಿಪ್ಪರಗಿ: ಬಿ.ಬಿ.ಇಂಗಳಗಿ ಗ್ರಾಮದಿಂದ ದೇವರಹಿಪ್ಪರಗಿವರೆಗಿನ ರಸ್ತೆ ಸುಧಾರಣೆಗೆ ಆಗ್ರಹಿಸಿ ಬಿ.ಬಿ.ಇಂಗಳಗಿ ಸಹಿತ ಸುತ್ತಲಿನ ಗ್ರಾಮಸ್ಥರಿಂದ ‘ಬೊಗಸೆ ಜೋಳ ನಮ್ಮ ರಸ್ತೆಗಾಗಿ’ ಮತ್ತು ಸಹಿ ಸಂಗ್ರಹ ಎಂಬ ವಿನೂತನ ಅಭಿಯಾನ ನಡೆಯಿತು.

ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಬೊಗಸೆ ಜೋಳ ಹಾಗೂ ಸಹಿ ಪಡೆಯಲಾಯಿತು. ಕೊಂಡಗೂಳಿ, ಹಂಚಲಿ ಗ್ರಾಮಗಳ ಯುವಜನರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಂಡರು. ಬಸು ಪಾಟೀಲ ಹಾಗೂ ಚಂದ್ರಕಾಂತ ಸೊನ್ನದ ನೇತೃತ್ವ ವಹಿಸಿ ಮಾತನಾಡಿದರು.

ದೇವೂರ ಗ್ರಾಮದ ಬಳಿ ಬಸ್ ಉರುಳಿ ಬಿದ್ದ ಘಟನೆಗೆ ರಸ್ತೆ ಅವ್ಯವಸ್ಥೆಯೇ ಕಾರಣ. ಆದ್ದರಿಂದ ನಮ್ಮೂರಿನ ರಸ್ತೆ ಸುಧಾರಣೆ ಆಗಲೇಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದೆವು. ನಮ್ಮ ಪ್ರಯತ್ನಕ್ಕೆ ಜರ್ಮನಿ, ಇಂಗ್ಲೆಂಡ್‌ನಲ್ಲಿರುವವರು ಸೇರಿದಂತೆ ಮಾಧ್ಯಮ ಮಿತ್ರರು. ವಕೀಲರು ಬೆಂಬಲ ವ್ಯಕ್ತಪಡಿಸಿದರು. ಅವರ ಬೆಂಬಲ ಹಾಗೂ ದಾಸೋಹ ಪರಿಕಲ್ಪನೆಯ ಆಧಾರದ ಮೇಲೆ ರಸ್ತೆ ಸುಧಾರಣೆಗಾಗಿ ಭಿಕ್ಷೆ ಎತ್ತಿ ಆಡಳಿತ ವರ್ಗದ ಗಮನ ಸೆಳೆಯಲಾಗುತ್ತಿದೆ ಎಂದರು.

ಅಭಿಯಾನದಲ್ಲಿ 3 ಚೀಲ ಜೋಳ ಸಂಗ್ರಹವಾಗಿದೆ. ಸಂಗ್ರಹಿಸಿದ ಜೋಳ ಹಾಗೂ ಸಹಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.

ಅಭಿಯಾನದಲ್ಲಿ ಹಸನ್ ಬಡೇಘರ್, ಹಸನ್ ಮುತ್ತಗಿ, ಸಂಗು ದಂಡೋತಿ, ಉದಯ ಕೊಂಡಗೂಳಿ, ಮಂಜುನಾಥ ಕೊಂಡಗೂಳಿ, ಮಡು ಕರದಾಳಿ, ಅಣ್ಣಾರಾಯ ಹಂಚಲಿ, ಮಲಿಕ್ ವಾಲಿಕಾರ, ಸಂಗನಗೌಡ ಹಚ್ಯಾಳ, ರಾಜು ಆಲಗೂರ, ಸಲೀಮ್ ವಠಾರ, ಪಾಪು ಆವೇರಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !