ಬೆಳಧಡಿ ಬ್ರಹ್ಮಾನಂದರ ಪುಣ್ಯತಿಥಿ ಶತಮಾನೋತ್ಸವ

7

ಬೆಳಧಡಿ ಬ್ರಹ್ಮಾನಂದರ ಪುಣ್ಯತಿಥಿ ಶತಮಾನೋತ್ಸವ

Published:
Updated:

ಭರತಖಂಡದಲ್ಲಿ ಶ್ರೀರಾಮನಾಮನ ಪ್ರಾಮುಖ್ಯತೆಯನ್ನು ಪಸರಿಸಿ ರಾಮಮಂದಿರಗಳ ನಿರ್ಮಾಣವನ್ನೇ ಜೀವನದ ಮುಖ್ಯ ಉದ್ದೇಶವನ್ನಾಗಿಸಿಕೊಂಡಿದ್ದವರು ಬ್ರಹ್ಮಚೈತನ್ಯ ಮಹಾರಾಜರು. ಅವರ ಶಿಷ್ಯರಾದ ಸದ್ಗುರು ಬೆಳಧಡಿ ಬ್ರಹ್ಮಾನಂದ ಮಹಾರಾಜರು ಗುರುವಿನ ಹಾದಿಯನ್ನೇ ತುಳಿದು, ಕರ್ನಾಟಕದಾದ್ಯಂತ ರಾಮನಾಮದ ಮಹತ್ವ, ಗುರುವಿನ ಸಂದೇಶವನ್ನು ಪ್ರಸಾರ ಮಾಡಿದವರು.

ಬೆಳಧಡಿ ಬ್ರಹ್ಮಾನಂದರ 100ನೇ ಪುಣ್ಯತಿಥಿ ಶತಮಾನೋತ್ಸವವನ್ನು ಬನಶಂಕರಿ 1ನೇ ಹಂತದಲ್ಲಿರುವ ಶ್ರೀಬ್ರಹ್ಮಚೈತನ್ಯ ಮಂದಿರ ಟ್ರಸ್ಟ್‌ ಅಕ್ಟೋಬರ್‌ 1ರಿಂದ 8ರವರೆಗೆ ಆಚರಿಸುತ್ತಿದೆ.

ಬಾದಾಮಿ ತಾಲ್ಲೂಕಿನ ಜಾಲಿಹಾಳದಲ್ಲಿ 1859ರ ಫೆ. 27ರಂದು ಬ್ರಹ್ಮಾನಂದರು ಜನಿಸಿದರು. ಬಾಳಂಭಟ್ಟರು ಹಾಗೂ ಜೀವೋಭಾಯಿ ಅವರ ತಂದೆ, ತಾಯಿ. ತಂದೆಯ ಸಲಹೆಯಂತೆ ಶ್ರೀಕ್ಷೇತ್ರ ಬನಶಂಕರಿಗೆ ಬಂದು ದೇವಿಯಿಂದ ಆಶೀರ್ವಾದ ಪಡೆದು ದೋಂಡಭಟ್ಟದಾದ ಮೋಡಕರೆಂಬ ವಿದ್ವಾಂಸರಿಂದ ಸಂಸ್ಕೃತ, ವೇದಾಧ್ಯಯನ, ಶಾಸ್ತ್ರ ಪುರಾಣಗಳಲ್ಲಿ ಪಾಂಡಿತ್ಯ ಪಡೆದರು. ಮುಂದೆ ತಾಯಿಯ ಸಲಹೆಯಂತೆ ಗುರುವನ್ನು ಹುಡುಕುತ್ತಾ ಹೊರಟ ಅವರು ಶ್ರೀ ಬ್ರಹ್ಮ ಚೈತನ್ಯರನ್ನು ಗುರುಗಳನ್ನಾಗಿ ಸ್ವೀಕರಿಸಿದರು.

ಗುರುವಿನ ಸಲಹೆಯಂತೆ ಕರ್ನಾಟಕದಲ್ಲಿ ರಾಮನಾಮ ಪ್ರಚಾರ ಕಾರ್ಯ ಕೈಗೆತ್ತಿಕೊಂಡರು. ಬೆಳಧಡಿ ಗ್ರಾಮದಲ್ಲಿ ನೆಲೆಸಿ, 13 ಕೋಟಿ ರಾಮನಾಮ ಜಪವನ್ನು ನಡೆಸಿದರು. ಮಧ್ಯಮ ವರ್ಗದ ಜನರಿಗೆ ರಾಮನಾಮ ಜಪದ ಮಹತ್ವವನ್ನು ತಿಳಿಸಿದರು. ತಮ್ಮ ಪೂರ್ಣಾಯುಷ್ಯವನ್ನು ಗುರುವಿನ ಸೇವೆ, ಅವರ ತತ್ವ ಪ್ರಚಾರದಲ್ಲಿ ತೊಡಗಿದ್ದಲ್ಲದೇ ಅನೇಕ ರಾಮ ದೇವಸ್ಥಾನಗಳನ್ನು ನಿರ್ಮಿಸಿದರು. ವೆಂಕಟಾಪುರದಲ್ಲಿ ವೆಂಕಟೇಶನ ಭವ್ಯಮಂದಿರ ಕಟ್ಟಿಸಿದರು.

1918ರಲ್ಲಿ ಶ್ರೀಬ್ರಹ್ಮಾನಂದರಿಗೆ ಅರವತ್ತು ವರ್ಷ ತುಂಬಿದವು. ಅವರು ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು. ತಮ್ಮ ಜೀವನದಲ್ಲಿ ಉಪಾಸನಾಮಾರ್ಗದ ಪ್ರಚಾರ ಮಾಡಿದರು. ಕರ್ನಾಟಕ ಅವರ ಕಾರ್ಯಕ್ಷೇತ್ರವಾಗಿತ್ತು.

ಅ. 8ಕ್ಕೆ ಶ್ರೀಬ್ರಹ್ಮಾನಂದ ಮಹಾರಾಜರು ದೇಹ ತ್ಯಜಿಸಿ 100 ವರ್ಷಗಳಾಗುತ್ತವೆ. ಹಾಗಾಗಿ ಅವರ ಪುಣ್ಯತಿಥಿಯ ಶತಮಾನೋತ್ಸವವನ್ನು ಟ್ರಸ್ಟ್‌ ಆಚರಿಸುತ್ತಿದೆ. ಈ ಅವಧಿಯಲ್ಲಿ ನಿತ್ಯ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹೋಮಗಳು, ರಾಮನಾಮ ಸ್ಮರಣೆ, ಭಜನೆ, ಆರತಿ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ ಎನ್ನುತ್ತಾರೆ ಟ್ರಸ್ಟಿ ಲಕ್ಷ್ಮೀಕಾಂತ್‌.

***

ಬೆಳಧಡಿ ಬ್ರಹ್ಮಾನಂದ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮಗಳು: ಬೆಳಿಗ್ಗೆ 7.30ಕ್ಕೆ ಕೋಟಿ ಪೂಜೆ, 8.30ಕ್ಕೆ ಶ್ರೀಗಳ ಪಾದುಕಾಗಳಿಗೆ ಶತರುದ್ರಾಭಿಷೇಕ, ಬೆಳಿಗ್ಗೆ 9.30ಕ್ಕೆ ಸಾಮೂಹಿಕ ಜಪಾನುಷ್ಠಾನ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಸಂಜೆ 5.30ಕ್ಕೆ ಭ್ರಮರ ಗೋಪಿನಾಥ್‌ ಅವರಿಂದ ಭಜನೆ, ಸಂಜೆ ಯಾಗಶಾಲಾ ಪ್ರವೇಶ ಮತ್ತು ಕಳಸ ಸ್ಥಾಪನೆ. 9.30ಕ್ಕೆ ಆರತಿ. ಸ್ಥಳ– ಶ್ರೀ ಬ್ರಹ್ಮಚೈತನ್ಯ ಮಂದಿರ ಟ್ರಸ್ಟ್‌, 5ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, ಬನಶಂಕರಿ 1ನೇ ಹಂತ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !