ಶನಿವಾರ, ಫೆಬ್ರವರಿ 27, 2021
19 °C

ಗ್ರಾಮೀಣ ಜನರಿಗೆ ತೆರೆದಿಟ್ಟ ‘ಖಜಾನೆ’?

ಎ.ಆರ್‌.ವಾಸವಿ Updated:

ಅಕ್ಷರ ಗಾತ್ರ : | |

Prajavani

ಓಹ್! ಕೊನೆಗೂ ಬಸವಳಿದು, ಕುಸಿದು ಹೋಗಿರುವ ನಮ್ಮ ಗ್ರಾಮೀಣರಿಗೆ ಕೊಡುಗೆಗಳ ‘ಖಜಾನೆ’ಯನ್ನೇ ತೆರೆದಿಡಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಬರುವ ಪ್ರಮುಖ ಕಾರ್ಯಕ್ರಮಗಳನ್ನು ಒಟ್ಟುಗೂಡಿಸಿ 100 ದಿನಗಳ ಉದ್ಯೋಗ ಖಾತರಿ ನೀಡಲಾಗಿದೆ. ಯಾರೂ ಹಸಿವಿನಿಂದ ಬಳಲದಂತೆ ಪಡಿತರ ಪೂರೈಕೆ, ಓಡಾಡಲು ಉತ್ತಮ ರಸ್ತೆಗಳು ಮತ್ತು ನಿರಂತರ ವಿದ್ಯುತ್‌ ಪೂರೈಕೆ... ಹೀಗೆ ಮಧ್ಯಂತರ ಬಜೆಟ್‌ನಲ್ಲಿ ಸಾಲು ಸಾಲು ಭರವಸೆಗಳು.

ನಿಶ್ಚಿತವಾಗಿ ಮುಂಬರುವ ಚುನಾವಣೆಯ ಮತಗಳ ಮೇಲೆ ಕಣ್ಣಿಟ್ಟು ಈ ಬಜೆಟ್‌ ಮಾಡಿದ್ದಲ್ಲ ಬಿಡಿ. ಭವಿಷ್ಯದಲ್ಲಿ ಗ್ರಾಮೀಣ ಭಾರತ, ಅಭಿವೃದ್ಧಿಯ ಹಳಿಯ ಮೂಲಕ ಚಲಿಸಿ, ಭಾರತ ಬೆಳಗಬೇಕು ಎಂಬುದೇ ನೈಜ ಉದ್ದೇಶವಾಗಿದೆ. ನಮ್ಮ ಬಹಳಷ್ಟು ‘ಗೌರವಾನ್ವಿತ’ ಗ್ರಾಮೀಣ ಪ್ರಜೆಗಳು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹೊಂದುವ ಮೂಲಕ ಹಣಕಾಸಿನ ಅರ್ಥ ವ್ಯವಸ್ಥೆಯಲ್ಲಿ ಮತ್ತು ಡಿಜಿಟಲ್‌ ಗ್ರಾಮಗಳಲ್ಲಿ ಜೀವಿಸಲಿದ್ದಾರೆ. ಪಿಂಚಣಿ ಯೋಜನೆ, ವಿಮೆ ಯೋಜನೆ, 22 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಮತ್ತು 50 ರಷ್ಟು ಉತ್ಪಾದನಾ ವೆಚ್ಚ ಭರಿಸುವ ಭರವಸೆ ನೀಡಲಾಗಿದೆ. ಅಷ್ಟೇ ಅಲ್ಲ, ಗೋವನ್ನೂ ಮರೆತಿಲ್ಲ. ವಿಫಲಗೊಳ್ಳುತ್ತಿರುವ ಕೃಷಿಯ ರಕ್ಷಕವಾಗಿ ‘ರಾಷ್ಟ್ರೀಯ ಕಾಮಧೇನು ಆಯೋಗ’ ಅವತಾರ ಎತ್ತಿದೆ. ಮೀನುಗಾರರ ಸಮುದಾಯ, ಅಧಿಸೂಚಿತವಲ್ಲದ ಸಮುದಾಯ, ಅಲೆಮಾರಿ ಮತ್ತು ಬುಡಕಟ್ಟು ಸಮುದಾಯವನ್ನು ಈ ಆಯವ್ಯಯ ಕುಸಿದು ಹೋಗಿರುವ ಗ್ರಾಮೀಣ ಜನರ ಸಾಲಿಗೆ ತಂದು ನಿಲ್ಲಿಸಿದೆ. ಉಳುವ ಯೋಗಿ ಮಾತ್ರವಲ್ಲ, ಕುರಿಗಾಹಿ, ಬೆಸ್ತ, ಅಲೆಮಾರಿ ಹೀಗೆ ಹಲವು ಸಮುದಾಯಗಳನ್ನು ‘ಗೌರವಾನ್ಮಿತ’ ಪ್ರಜೆಗಳೆಂದು ಗುರುತಿಸಲಾಗಿದೆ.

ಎರಡು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ₹ 6000ವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡುವ ಯೋಜನೆ ಪ್ರಕಟಿಸಲಾಗಿದೆ. ಇವೆಲ್ಲದರ ಪರಿಣಾಮ ನಮ್ಮ ಭಾರತದ ಅರ್ಥ ವ್ಯವಸ್ಥೆ ಮೇಲಕ್ಕೆದ್ದು, ತೇಲುವುದಂತೂ ಖಚಿತ. ಬಹಳ ಕಾಲದಿಂದ ಭರವಸೆ ನೀಡುತ್ತಾ ಬಂದಿದ್ದ ಹಾಗೆ ನಮ್ಮ ಮಹಾನ್‌ ಮತ್ತು ಪ್ರಜ್ಞಾವಂತ ದೇಶ ಸೂಪರ್‌ ಪವರ್‌ ಆಗುವುದು ನಿಶ್ಚಿತ ಬಿಡಿ...!

ನಮ್ಮ ಗ್ರಾಮೀಣರನ್ನು ಕಾಡುತ್ತಿರುವ ಮುಖ್ಯ ಹಾಗೂ ಮೂಲಭೂತ ಸಂಗತಿಗಳೇ ಬಜೆಟ್‌ನಲ್ಲಿ ಬಿಟ್ಟು ಹೋಗಿವೆ. ಮುಖ್ಯವಾಗಿ ಗ್ರಾಮೀಣ ಸಮಾಜದ ವಿನ್ಯಾಸದ ಅರ್ಥೈಸುವಿಕೆ ಬಜೆಟ್‌ನಲ್ಲಿ ಆಗಿಲ್ಲ. ಇದು ನಮ್ಮ ಗ್ರಾಮೀಣ ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಲಿದೆ. ವಿವಿಧ ಬಗೆಯ ಕೃಷಿ ಭೂಮಿಯಲ್ಲಿ ಉತ್ಪಾದಕತೆ ಮತ್ತು ಗುಣಮಟ್ಟದ ವೈವಿಧ್ಯತೆಯನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಏಕೆಂದರೆ, ನೀರಾವರಿ ಮತ್ತು ಮಳೆ ಆಶ್ರಿತ ಕೃಷಿ ಭೂಮಿಗಳು ಹೆಚ್ಚು ಫಲವತ್ತಾಗಿರುತ್ತವೆ. ಅತಿ ಸಣ್ಣ ಹಿಡುವಳಿಗಳು ಶುಷ್ಕವಾಗಿರುತ್ತವೆ. ಇಂಥ ಕಡೆಗಳಲ್ಲಿ ಸಣ್ಣ ಹಿಡುವಳಿದಾರರು ಹೊಂದಿರುವ ಭೂಮಿಯ ಪ್ರಮಾಣ ಮೂರು ಎಕರೆಗಿಂತಲೂ ಹೆಚ್ಚಾಗಿರುತ್ತದೆ. ಆದರೆ, ಇಲ್ಲಿ ಉತ್ಪಾದಕತೆ ಮತ್ತು ಇಳುವರಿ ಪ್ರಮಾಣ ಅತ್ಯಲ್ಪ. ಕೃಷಿಕ ನಷ್ಟ ಹೊಂದುವ ಪ್ರಮಾಣ ಅಧಿಕ. ಇದಕ್ಕೆ ನಮ್ಮ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಕೃಷಿ ಪ್ರದೇಶವೇ ಉತ್ತಮ ನಿದರ್ಶನ.

ಬಜೆಟ್‌ನಲ್ಲಿ ಘೋಷಿಸಿರುವ ‘ಪ್ರಧಾನ ಮಂತ್ರಿಗಳ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆ ಈ ಭೌಗೋಳಿಕ ರಚನೆಯಲ್ಲಿರುವ ತಾರತಮ್ಯವನ್ನು ಹೇಗೆ ನಿವಾರಿಸುತ್ತದೆ? ಗಾಯದ ಮೇಲೆ ಬರೆ ಎಳೆದಂತೆ ಹವಾಮಾನ ಬದಲಾವಣೆಯಿಂದ ಮಳೆ ಮತ್ತು ಉಷ್ಣಾಂಶ ಮತ್ತು ಮಳೆಯಲ್ಲಿ ಏರಿಳಿತ, ಕೀಟಬಾಧೆ, ಸಸ್ಯಗಳಿಗೆ ರೋಗ ಕೃಷಿ ಸಮುದಾಯವನ್ನು ಕಂಗೆಡಿಸಿದೆ. ಈ ಎಲ್ಲ ಸಮಸ್ಯೆಗಳನ್ನು ಗುರುತಿಸಿ ತುರ್ತು ಆದ್ಯತೆಯಾಗಿ ಚಿಕಿತ್ಸೆ ನೀಡದೇ ಇರುವುದು ಕ್ಷಮಾರ್ಹವಲ್ಲ. ಗ್ರಾಮೀಣ ಸಮಸ್ಯೆಯನ್ನು ಹಣ
ಕಾಸು–ತಂತ್ರಜ್ಞಾನದ ಆಡಳಿತವಾಗಿ ಪರಿವರ್ತಿಸಿ, ಅದಕ್ಕೆ ಕೆಲವು ಗಿಮಿಕ್‌ಗಳಿಂದ ಕೂಡಿದ ಕಲ್ಯಾಣ ಕ್ರಮ ಪ್ರಕಟಿಸಿ ಬಿಟ್ಟರೆ ಸಮಸ್ಯೆಗಳು ಬಗೆಹರಿದು ಬಿಡುವುದಿಲ್ಲ. ಮುಂದಾಲೋಚನೆ ಇಲ್ಲದೆ ಭಾರಿ ಮೊತ್ತದ ಹಣವನ್ನು ಕಲ್ಯಾಣ ಯೋಜನೆಗಳಿಗೆ ನಿಗದಿ ಮಾಡಿ ಯೋಜನೆಯ ಅನುಷ್ಠಾನ ಮತ್ತು ಆಡಳಿತ ನಿರ್ವಹಣೆ ಅವಿವೇಕತನದಿಂದ ಕೂಡಿದ್ದರೆ, ಸಂಪೂರ್ಣ ಯೋಜನೆಯೇ ವಿಫಲವಾಗುತ್ತದೆ. ಕಳೆದ ಎರಡು ಮೂರು ದಶಕಗಳಲ್ಲಿ ಹಲವು ಕಲ್ಯಾಣ ಕಾರ್ಯಕ್ರಮಗಳ ಜಾರಿಯಲ್ಲಿ ಆಗಿರುವ ಎಡವಟ್ಟುಗಳೇ ಇದಕ್ಕೆ ಸಾಕ್ಷಿ. ದುರಾಡಳಿತದ ಬಗ್ಗೆ ಗಮನಹರಿಸದೇ ಇದ್ದರೆ, ಸಮಾನತೆ, ಪ್ರಜಾಪ್ರಭುತ್ವ ಮತ್ತು ನ್ಯಾಯ ವ್ಯವಸ್ಥೆ ಅನುತ್ಪಾದಕ ಎನಿಸಿಬಿಡುತ್ತದೆ.

ಚುನಾವಣಾ ಪೂರ್ವದ ಈ ಬಜೆಟ್‌ನಲ್ಲಿ ಅರ್ಥಶಾಸ್ತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಬದಲಿಗೆ ರಾಜಕೀಯ ಪಾರುಗಾಣಿಕೆಯ ಆಟ ನಡೆದಿದೆ. ನೈಜ ಮತ್ತು ವ್ಯವಸ್ಥಿತ ವಿತ್ತೀಯತೆಯನ್ನು ನಿರ್ಲಕ್ಷಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಅನುದಾನವನ್ನು ಗಣನೀಯವಾಗಿ ಹೆಚ್ಚಿಸುತ್ತಲೇ, ಜೀವನೋಪಾಯಕ್ಕೆ ಮೂಲಭೂತ ಸಂಪನ್ಮೂಲ ಖಾತರಿಪಡಿಸುವುದನ್ನು ನಿರ್ಲಕ್ಷಿಸಲಾಗಿದೆ. ಮತದ ಫಸಲನ್ನು ತೆಗೆಯಬಹುದಾದ ಜನಪ್ರಿಯ ಕಾರ್ಯಕ್ರಮಗಳಿಗೆ ಒತ್ತು ನೀಡುವ ರಾಜಕೀಯದಾಟ ನಡೆಸಲಾಗಿದೆ.

ಗ್ರಾಮೀಣ ಪ್ರದೇಶಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿದ್ದರೂ ಅವುಗಳು ಸಾಕಾರ ಆಗುತ್ತವೆ ಎಂಬ ಖಾತರಿಯಿಲ್ಲ. 2014ರಿಂದ ನೀಡುತ್ತಾ ಬಂದಿರುವ ಆಶ್ವಾಸನೆಗಳು ಏನಾಗಿವೆ? ವಿಮೆ, ಪಿಂಚಣಿ ಮತ್ತು ಯುವಕರಿಗೆ ಉದ್ಯೋಗ ಎಲ್ಲವೂ ನಪಾಸ್‌ ಆಗಿವೆ. ಬಹುತೇಕ ಆಶ್ವಾಸನೆಗಳು ಒಂದೋ ಈಡೇರಿಲ್ಲ ಇಲ್ಲವೇ ಹುಸಿ ಭರವಸೆಗಳಾಗಿಯೇ ಉಳಿದಿವೆ. ನೋಟು ರದ್ದತಿ ಮತ್ತು ಜೆಎಸ್‌ಟಿ ಜಾರಿಯಿಂದ ಆಗಿರುವ ಸಾರ್ವಜನಿಕರಿಗೆ ಆಗಿರುವ ಘಾಸಿ ಮತ್ತು ನಾಶವನ್ನು ಗಮನಕ್ಕೆ ತೆಗೆದುಕೊಳ್ಳದ ಮನೋ
ಭಾವವನ್ನು ಈ ಸರ್ಕಾರ ಬೆಳೆಸಿಕೊಂಡಿದೆ. ನಮ್ಮ ಮುಂದೆ ಇಟ್ಟಿರುವ ‘ಖಜಾನೆ’ ಎಂದರೆ ಕೇವಲ ಮಾತುಗಳದ್ದು, ಸೂಕ್ಷ್ಮ ಸಂವೇದನೆ ಇಲ್ಲದ ಆಡಳಿತಗಾರರ ಬಗ್ಗೆ ನಾವು ಭರವಸೆಕಳೆದುಕೊಳ್ಳುವುದು ಬೇಡ.

(ಲೇಖಕಿ: ಸಾಮಾಜಿಕ ಮಾನವಶಾಸ್ತ್ರಜ್ಞೆ)

 

ಇವನ್ನೂ ಓದಿ...

ನಿಮ್ಮ ಆದಾಯಕ್ಕೂ ಇದೆಯೇ ತೆರಿಗೆ ವಿನಾಯಿತಿ? ಬಜೆಟ್‌ ಬಳಿಕ ಆಗಿದ್ದೇನು?

ರಾಷ್ಟ್ರೀಯ ಕಾಮಧೇನು ಆಯೋಗ ರಚನೆ, ಗೋಕುಲ ಮಿಷನ್‌ಗೆ ₹750 ಕೋಟಿ​

ಮಧ್ಯಮ ವರ್ಗ, ರೈತ, ಕಾರ್ಮಿಕರಿಗೆ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ​

‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಸ್ಥಾ‍ಪನೆ, ರೈತರ ಖಾತೆಗೆ ₹6 ಸಾವಿರ

ಎಸ್‌ಸಿ, ಎಸ್‌ಟಿ ಅನುದಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಳ​

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ: ₹93 ಸಾವಿರ ಕೋಟಿ ಅನುದಾನ ​

ವೇತನದಾರರಿಗೆ ಬಜೆಟ್‌ ಬೋನಸ್: ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ​

ಕೇಂದ್ರ ಬಜೆಟ್‌ 2019: ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ​

ರೈಲ್ವೆಗೆ ₹1.6 ಲಕ್ಷ ಕೋಟಿ: ಕಾವಲುರಹಿತ ಕ್ರಾಸಿಂಗ್‌ಗಳು ಬಂದ್‌​

ಹೆಚ್ಚಿದೆ ಆದಾಯ, ಪ್ರಕಾಶಿಸುತ್ತಿದೆ ಭಾರತ: ಪೀಯೂಷ್ ಗೋಯಲ್

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್’​

ಆಯುಷ್ಮಾನ್ ಭಾರತ್‌ ಯೋಜನೆಯಡಿ 10 ಲಕ್ಷ ಜನರಿಗೆ ಚಿಕಿತ್ಸೆ

ನಾನು ರೂಪಿಸಿದ್ದ ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ: ಸಿದ್ದರಾಮಯ್ಯ ಆರೋಪ​

ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪನೆ, ಲಕ್ಷ ಡಿಜಿಟಲ್‌ ಗ್ರಾಮ ನಿರ್ಮಾಣಕ್ಕೆ ಒತ್ತು

ಕೇಂದ್ರ ಬಜೆಟ್‌ 2019: ಇವರು ಹೀಗಂದರು...​

* ಈ ಬಜೆಟ್ ಅರ್ಥ ಮಾಡಿಕೊಳ್ಳಬೇಕಿರುವುದು ಹೀಗೆ...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು