ಶುಕ್ರವಾರ, ಏಪ್ರಿಲ್ 23, 2021
22 °C
ಶಿಥಿಲಗೊಂಡ ಕಟ್ಟಡ ತೆರವಿಗೆ ಇಲ್ಲ ಮಾನದಂಡ: ಒ.ಸಿ ನೀಡಿದ ಬಳಿಕ ಕಟ್ಟಡ ತಪಾಸಣೆಯೂ ಕಡ್ಡಾಯವಲ್ಲ

ಬಹುಮಹಡಿ ಕಟ್ಟಡ ಬಾಳಿಕೆ ಎಷ್ಟು ವರ್ಷ?

ಪ್ರವೀಣ್‌ ಕುಮಾರ್ ಪಿ.ವಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಬಹುಮಹಡಿ ಕಟ್ಟಡಗಳು ಹೆಚ್ಚು ಎಂದರೆ ಎಷ್ಟು ವರ್ಷ ಬಾಳಿಕೆ ಬಂದಾವು. ಬಹುಮಹಡಿ ಕಟ್ಟಡಗಳನ್ನು ಹೆಚ್ಚೆಂದರೆ ಎಷ್ಟು ವರ್ಷಗಳವರೆಗೆ ಬಳಸಬಹುದು. ಇಂತಿಷ್ಟು ವರ್ಷಗಳ ನಂತರ ಅವುಗಳ ಬಳಕೆ ಅಪಾಯಕಾರಿಯಾಗಲಿದೆಯೇ. ಕಟ್ಟಡದ ಬಳಕೆಯೋಗ್ಯ ಅವಧಿಯನ್ನು ನಿರ್ಧರಿಸಲು ಮಾನದಂಡಗಳೇನಾದರೂ ಇವೆಯೇ?

ಗಗನಚುಂಬಿ ಕಟ್ಟಡ ಶಿಥಿಲಗೊಂಡು ನೆಲಕ್ಕುರುಳಿದರೆ, ಅಕ್ಕಪಕ್ಕದ ಕಟ್ಟಡಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಪಾಲಿಕೆ, ಶಿಥಿಲಗೊಂಡರೆ ಅದನ್ನು ಸುರಕ್ಷಿತವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತದೆಯೇ. ಭವಿಷ್ಯದಲ್ಲಿ ಇಂತಹ ಪ್ರಮೇಯ ಎದುರಾರಾದರೆ ಪರಿಸ್ಥಿತಿ ನಿಭಾಯಿಸಲು ಪರಿಹಾರ ಸೂತ್ರಗಳೇನಾದರೂ ಇವೆಯೇ. ಈ ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ... ‘ಇಲ್ಲ’.

ಒಂದು ಕಟ್ಟಡದ ಬಾಳಿಕೆಯ ಗರಿಷ್ಠ ಅವಧಿಯನ್ನು ನಿರ್ಧರಿಸುವ ಯಾವುದೇ ಮಾನದಂಡಗಳು ಸದ್ಯಕ್ಕಂತೂ ಜಾರಿ
ಯಲ್ಲಿ ಇಲ್ಲ. ಬಹುಮಹಡಿ ಕಟ್ಟಡ ಶಿಥಿಲಗೊಂಡರೆ ಅವುಗಳನ್ನು ತೆರವುಗೊಳಿಸುವ ಬಗ್ಗೆಯೂ ಸೂಕ್ತ ನಿಯಮಗಳಿಲ್ಲ ಎನ್ನುತ್ತಾರೆ ಬಿಬಿಎಂಪಿಯ ನಗರ ಯೋಜನಾ ವಿಭಾಗದ ಹಿರಿಯ ಅಧಿಕಾರಿಗಳು.

‘ಬಹುಮಹಡಿ ಕಟ್ಟಡ ಯೋಜನೆಗಳಿಗೆ ಮಂಜೂರಾತಿ ನೀಡುವ ಮುನ್ನವೇ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ನಿರ್ಮಾಣದ ಪ್ರತಿ ಹಂತದಲ್ಲೂ ತಪಾಸಣೆ ನಡೆಸಲಾಗುತ್ತದೆ. ಕಬ್ಬಿಣ ಹಾಗೂ ಸಿಮೆಂಟ್‌ ಸೇರಿದಂತೆ ಗುಣಮಟ್ಟದ ಪರಿಕರ ಬಳಸಿ ನಿರ್ಮಿಸುವ ಕಟ್ಟಡ 100 ವರ್ಷಗಳ ಕಾಲ ಬಾಳಿಕೆ ಬರುವುದರಲ್ಲಿ ಅನುಮಾನವಿಲ್ಲ. ಆದರೆ, ಆ ಬಳಿಕ ಅಥವಾ ನಡುವೆ ಕಟ್ಟಡ ಶಿಥಿಲಗೊಂಡರೆ, ಅಂತಹ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು, ಅದರಲ್ಲಿ ಬಿಬಿಎಂಪಿಯ ಉತ್ತರದಾಯಿತ್ವ ಏನು ಎಂಬುದನ್ನು ವಿಷದಪಡಿಸುವ ಅಂಶಗಳು ಕೆಎಂಸಿ ಕಾಯ್ದೆಯಲ್ಲೂ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕಟ್ಟಡ ನಿರ್ಮಾಣಕ್ಕ ಸಂಬಂಧಿಸಿದಂತೆ ಭಾರತೀಯ ಗುಣಮಟ್ಟದ ಸಂಹಿತೆ (ಐಎಸ್‌ ಕೋಡ್‌) ಜಾರಿಯಲ್ಲಿದೆ. ಸರ್ಕಾರದಿಂದ ಮಾನ್ಯತೆ ಪಡೆದ ನಿರ್ಮಾಣ (ಸ್ಟ್ರಕ್ಚರಲ್‌) ಎಂಜಿನಿಯರ್‌ಗಳು ಕಟ್ಟಡಗಳನ್ನು ನಿರ್ಮಿಸುವಾಗ ಐಎಸ್‌ ಕೋಡ್‌ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಅವರು ನೀಡುವ ಪ್ರಮಾಣಪತ್ರದ ಆಧಾರದಲ್ಲೇ ಪಾಲಿಕೆ ಕಟ್ಟಡಗಳಿಗೆ ಸ್ವಾಧಿನಾನುಭವ ಪತ್ರ ನೀಡಲಾಗುತ್ತದೆ’ ಎಂದು ಪಾಲಿಕೆಯ ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ಆರ್‌.ಪ್ರಸಾದ್‌ ತಿಳಿಸಿದರು.

‘ಕಾಂಕ್ರೀಟ್‌ ಹಾಗೂ ಕಬ್ಬಿಣದ ಗುಣಮಟ್ಟದ ಆಧಾರದಲ್ಲಿ ಕಟ್ಟಡದ ಆಯಸ್ಸು ನಿರ್ಧಾರವಾಗುತ್ತದೆ. ವರ್ಷಗಳು ಕಳೆದಂತೆ ಕಾಂಕ್ರೀಟ್‌ ಸಾಮರ್ಥ್ಯ ಹೆಚ್ಚುತ್ತದೆ. ನೀರು ತಾಗದಂತೆ ನೋಡಿಕೊಂಡರೆ ತುಕ್ಕು ಹಿಡಿಯದಿದ್ದರೆ ಎಷ್ಟು ವರ್ಷ ಆದರೂ ಏನೂ ಆಗಲ್ಲ. ಕಬ್ಬಿಣಕ್ಕೆ ತುಕ್ಕು ಹಿಡಿದರೆ ಅದರ ಸಾಮರ್ಥ್ಯ ಕುಸಿತ ಆಗುತ್ತದೆ. ಮನುಷ್ಯನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಆಯಸ್ಸು ಹೆಚ್ಚುತ್ತದೆ. ಅಂತೆಯೇ ಕಟ್ಟಡವನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ಅದರ ಆಯಸ್ಸು ಹೆಚ್ಚುತ್ತದೆ. ಆದರೆ, ನಿರ್ವಹಣೆ ಸರಿಯಾಗಿ ಮಾಡಲಾಗುತ್ತಿದೆಯೇ ಎಂಬುದನ್ನು ದೃಢೀಕರಿಸಬೇಕು ಎಂಬ ನಿಯಮಗಳಿಲ್ಲ’ ಎಂದರು.

‘ಕಾಮಗಾರಿ ಕಳಪೆ: ಆಯಸ್ಸು ಕ್ಷೀಣ’
ಮಣ್ಣಿನ ಸುರಕ್ಷಿತ ಧಾರಣಾ ಸಾಮರ್ಥ್ಯದ (ಎಸ್‌ಬಿಸಿ) ಪರೀಕ್ಷೆ ಮಾಡದಿರುವುದು, ಕಟ್ಟಡ ನಿರ್ಮಾಣಕ್ಕೆ ಫಿಲ್ಟರ್‌ ಮರಳು ಬಳಸುವುದು, ಪಾಯ ಹಾಕಿದ ಮೇಲೆ ಮೂಲ ವಿನ್ಯಾಸದಲ್ಲಿ ಮಾರ್ಪಾಡು ಮಾಡುವುದು, ನಿರ್ಮಾಣ ವೆಚ್ಚ ಕಡಿಮೆ ಮಾಡುವ ಸಲುವಾಗಿ ನಿಗದಿಗಿಂತ ಕಳಪೆ ಕಬ್ಬಿಣ ಬಳಸುವುದು, ಗುಣಮಟ್ಟದ ಸಿಮೆಂಟ್‌ ಬಳಸದಿರುವುದು... ಇವೆಲ್ಲವೂ ಕಟ್ಟಡ ಕ್ಷಮತೆ ಮೇಲೆ ಪರಿಣಾಮವನ್ನು ಉಂಟು ಮಾಡುತ್ತವೆ ಎನ್ನುತ್ತಾರೆ ಕಟ್ಟಡ ನಿರ್ಮಾಣ ತಜ್ಞರು.

‘ಸಾಮಾನ್ಯವಾಗಿ ವಾತಾವರಣದಲ್ಲಿ ಉಪ್ಪಿನಂಶ ಇರುವ ಕರಾವಳಿ ಪ್ರದೇಶದಲ್ಲಿ ಒಂದು ಕಾಂಕ್ರೀಟ್‌ ಕಟ್ಟಡ 50 ವರ್ಷ ಬಾಳಿಕೆ ಬಂದರೆ, ಬೆಂಗಳೂರಿನಂತಹ ಪ್ರದೇಶದಲ್ಲಿ 100ಕ್ಕೂ ಹೆಚ್ಚು ವರ್ಷ ಬಾಳಿಕೆ ಬರುತ್ತದೆ. ಆದರೆ, ಕಟ್ಟಡ ನಿರ್ಮಾಣ ಹಂತದಲ್ಲಿ ಸರಿಯಾದ ಉಸ್ತುವಾರಿ ಇಲ್ಲದಿದ್ದರೆ ಅಥವಾ ಕಳಪೆ ಸಾಮಗ್ರಿ ಬಳಸಿದರೆ ಅದರ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಂತೂ ಸ್ಪಷ್ಟ’  ಎನ್ನುತ್ತಾರೆ ಹಿರಿಯ ನಿರ್ಮಾಣ ಎಂಜಿನಿಯರ್‌ ರಾಧೇಶ್‌ ಪ್ರಭಾಕರ್‌.

‘ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಗರದಲ್ಲೇ 40– 50 ಮಹಡಿಗಳ ಕಟ್ಟಡಗಳು ತಲೆ ಎತ್ತುತ್ತಿವೆ. ನಿರ್ಮಾಣವಾದ 20 ವರ್ಷಗಳ ಬಳಿಕ ಬಹುಮಹಡಿ ಕಟ್ಟಡವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ತಪಾಸಣೆಗೆ ಒಳಪಡಿಸಿ ಅದರ ಸಂರಚನೆ ಗಟ್ಟಿಮುಟ್ಟಾಗಿದೆಯೇ ಎಂಬುದನ್ನು ದೃಢಪಡಿಸಿಕೊಂಡರೆ ಒಳ್ಳೆಯದು. ಇದರಿಂದ ಕಟ್ಟಡ ಕುಸಿತದಿಂದ ಅನಾಹುತ ಉಂಟಾಗುವುದನ್ನು ತಡೆಯಬಹುದು’ ಎಂದು ಅವರು ಸಲಹೆ ನೀಡಿದರು.

‘10 ವರ್ಷಗಳಿಗೊಮ್ಮೆ ದೃಢೀಕರಣ’
‘ಸಾಮಾನ್ಯವಾಗಿ ಬಹುಮಹಡಿ ಕಟ್ಟಡ ಯೋಜನೆಗಳಿಗೆ ಅನುಮೋದನೆ ನಿಡುವಾಗ ಹಾಗೂ ಪ್ರಾರಂಭಿಕ ಪ್ರಮಾಣಪತ್ರ (ಸಿ.ಸಿ) ನೀಡುವಾಗ ಅಧಿಕಾರಿಗಳು ನಿಯಮಗಳನ್ನು ಸರಿಯಾಗಿಯೇ ಪಾಲಿಸುತ್ತಾರೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಮಾಲೀಕರು ಸ್ವಾಧೀನಾನುಭವ ಪ್ರಮಾಣಪತ್ರ ಪಡೆದೇ ಪಡೆಯುತ್ತಾರೆ. ಇಲ್ಲದಿದ್ದರೆ ಅವುಗಳಲ್ಲಿನ ಪ್ಲ್ಯಾಟ್‌ಗಳ ಮಾರಾಟ ಕಷ್ಟ. ಆದರೆ, ಬಳಿಕ ಅವುಗಳ ನಿರ್ವಹಣೆ ಸರಿಯಾಗಿ ಮಾಡಲಾಗುತ್ತಿದೆಯೇ ಎಂಬುದರ ಮೇಲೆ ನಿಗಾ ಇಡುವ ವ್ಯವಸ್ಥೆ ಇಲ್ಲ. ನಿಯಮಿತವಾಗಿ ಅಥವಾ ಪ್ರತಿ 10 ವರ್ಷಕ್ಕೊಮ್ಮೆ ಕಟ್ಟಡ ಸಾಮರ್ಥ್ಯ ತಪಾಸಣೆ ನಡೆಸಿ ದೃಢೀಕರಣ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಬೇಕು. ಈ ಬಗ್ಗೆ ಸೂಕ್ತ  ಕಾನೂನು ಜಾರಿಗೆ ತರುವ ಅಗತ್ಯ ಇದೆ’ ಎಂದು ಬಿಬಿಎಂಪಿಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಂ.ಬಿ.ತಿಪ್ಪಣ್ಣ ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು