ರೌಡಿ ತಬ್ರೇಜ್ ಕಾಲಿಗೆ ಗುಂಡೇಟು

7
ಕೊಲೆಗೆ ಯತ್ನ, ದರೋಡೆ ಪ್ರಕರಣದ ಆರೋಪಿ

ರೌಡಿ ತಬ್ರೇಜ್ ಕಾಲಿಗೆ ಗುಂಡೇಟು

Published:
Updated:
Prajavani

ಬೆಂಗಳೂರು: ಪದೇ ಪದೇ ಅಪರಾಧ ಕೃತ್ಯ ಎಸಗುತ್ತ ಸಾರ್ವಜನಿಕರಿಗೆ ಭಯವನ್ನುಂಟು ಮಾಡುತ್ತಿರುವ ರೌಡಿಗಳನ್ನು ಬೇಟೆಯಾಡುತ್ತಿರುವ ನಗರದ ಪೊಲೀಸರು, ರೌಡಿ ತಬ್ರೇಜ್ ಅಲಿಯಾಸ್ ಬಿಲಾವರ್‌ (27) ಎಂಬಾತನ ಕಾಲಿಗೆ ಸೋಮವಾರ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ.

ವೆಂಕಟೇಶಪುರ ನಿವಾಸಿ ತಬ್ರೇಜ್‌ನ ಮೇಲೆ ಕೊಲೆಗೆ ಯತ್ನ, ದರೋಡೆ, ದರೋಡೆಗೆ ಸಂಚು ಆರೋಪಗಳಡಿ 14 ಪ್ರಕರಣಗಳು ದಾಖಲಾಗಿದ್ದವು. ಆತ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ರಾಮಮೂರ್ತಿನಗರ, ಹೆಣ್ಣೂರು ಹಾಗೂ ಬಾಗಲಗುಂಟೆ ಠಾಣೆಯ ರೌಡಿಶೀಟರ್.

‘ಕೆ.ಜಿ.ಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಎಡ್ವಿನ್ ಪ್ರದೀಪ್ ನೇತೃತ್ವದ ತಂಡ, ತಬ್ರೇಜ್‌ನನ್ನು ಬಂಧಿಸಲು ಹೋಗಿತ್ತು. ಸೋಮವಾರ ಬೆಳಿಗ್ಗೆ 11.50ರ ಸುಮಾರಿಗೆ ಪೊಲೀಸರನ್ನು ಕಂಡ ತಬ್ರೇಜ್‌, ತಪ್ಪಿಸಿಕೊಂಡು ಓಡಲಾರಂಭಿಸಿದ್ದ. ಅದೇ ವೇಳೆ ಹಿಡಿಯಲು ಹೋದ ಹೆಡ್‌ ಕಾನ್‌ಸ್ಟೆಬಲ್ ಶಿವಕುಮಾರ್ ಮೇಲೆ ಹಲ್ಲೆ ಮಾಡಿದ್ದ’ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಡ್ ಕಾನ್‌ಸ್ಟೆಬಲ್ ರಕ್ಷಣೆಗೆ ಹೋಗಿದ್ದ ಇನ್‌ಸ್ಪೆಕ್ಟರ್, ಶರಣಾಗುವಂತೆ ತಬ್ರೇಜ್‌ಗೆ ಸೂಚಿಸಿದ್ದರು. ಇನ್‌ಸ್ಪೆಕ್ಟರ್‌ ಮೇಲೆಯೇ ಆತ ಹಲ್ಲೆಗೆ ಮುಂದಾಗಿದ್ದ. ಆಗ ಇನ್‌ಸ್ಪೆಕ್ಟರ್, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು’ ಎಂದು ಮಾಹಿತಿ ನೀಡಿದರು.

‘ಬಲಗಾಲು ಹಾಗೂ ಬಲಗೈಗೆ ಗುಂಡು ತಗುಲಿ ಗಾಯಗೊಂಡಿರುವ ತಬ್ರೇಜ್‌ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಡ್‌ ಕಾನ್‌ಸ್ಟೆಬಲ್ ಶಿವಕುಮಾರ್‌ ಅವರನ್ನೂ ಅದೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ಹೇಳಿದರು. 

11 ವಾರಂಟ್ ಜಾರಿ: ‘ತಬ್ರೇಜ್ ವಿರುದ್ಧ ದಾಖಲಾದ ಹಲವು ಪ್ರಕರಣಗಳ ವಿಚಾರಣೆ ನ್ಯಾಯಾಲಯಲ್ಲಿ ನಡೆಯುತ್ತಿದ್ದು, ಕಲಾಪಕ್ಕೆ ತಬ್ರೇಜ್ ಗೈರಾಗುತ್ತಿದ್ದ. ಆತನ ಬಂಧನಕ್ಕಾಗಿ 11 ವಾರಂಟ್‌ಗಳು ಜಾರಿಯಾಗಿದ್ದವು. ಆತ ತಲೆಮರೆಸಿಕೊಂಡಿದ್ದ’ ಎಂದು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಹೇಳಿದರು.

‘ನ್ಯಾಯಾಲಯದ ವಾರಂಟ್‌ ಇದ್ದಿದ್ದರಿಂದ ತಬ್ರೇಜ್‌ನನ್ನು ಬಂಧಿಸಲು ಭಾನುವಾರ ರಾತ್ರಿಯೇ ಆತನ ಮನೆಗೆ ಹೋಗಿದ್ದೆವು. ನಾವು ಹೋಗುವಷ್ಟರಲ್ಲೇ ಆತ ತಪ್ಪಿಸಿಕೊಂಡು ಹೋಗಿದ್ದ. ಹೀಗಾಗಿ, ಸೋಮವಾರ ಬೆಳಿಗ್ಗೆ ಪುನಃ ಆತನನ್ನು ಬಂಧಿಸಲು ಹೋಗಿದ್ದಾಗ ಹೆಡ್‌ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದ’ ಎಂದು ತಿಳಿಸಿದರು. 

‘ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದು ಗುಂಡು’

‘ತಬ್ರೇಜ್‌ನ ಮನೆಗೆ ಬಂದಿದ್ದ ಪೊಲೀಸರು, ವೈದ್ಯಕೀಯ ಪರೀಕ್ಷೆಗೆಂದು ಆತನನ್ನು ಕರೆದೊಯ್ದಿದ್ದರು. ಅದಾಗಿ ಕೆಲವು ಗಂಟೆಗಳ ಬಳಿಕ ಪೊಲೀಸರು ಗುಂಡು ಹಾರಿಸಿದ್ದ ಸುದ್ದಿ ಗೊತ್ತಾಯಿತು’ ಎಂದು ಸಂಬಂಧಿಕರು ಹೇಳಿದರು.

ಬೌರಿಂಗ್‌ ಆಸ್ಪತ್ರೆ ಎದುರು ಮಾಧ್ಯಮದವರ ಜೊತೆ ಮಾತನಾಡಿದ ಸಂಬಂಧಿಕರು, ‘ತಬ್ರೇಜ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ಗುಂಡುಗಳನ್ನು ಹೊರಗೆ ತೆಗೆಯಲಾಗಿದೆ. ಗುಂಡು ಹಾರಿಸಿದ ಪ್ರಕರಣದ ಸತ್ಯಾಂಶ ತಿಳಿಯಲು ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !