ಭಾನುವಾರ, ಮೇ 22, 2022
22 °C
ಭಾರತೀಯ ಕಂಪೆನಿಗಳಿಂದ 1ಲಕ್ಷ ಉದ್ಯೋಗ

ಅಮೆರಿಕದಲ್ಲಿ ಭಾರತದ ಹೂಡಿಕೆ 1100 ಕೋಟಿ ಡಾಲರ್‌ಗೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್(ಪಿಟಿಐ): ಅಮೆರಿಕದ ಉದ್ಯಮ ವಲಯದಲ್ಲಿ ಭಾರತದ ಕಂಪೆನಿಗಳು ತೊಡಗಿಸಿರುವ ಒಟ್ಟು ಬಂಡವಾಳ ದಾಖಲೆಯ 1100 ಕೋಟಿ ಅಮೆರಿಕನ್ ಡಾಲರ್‌ಗಳಿಗೆ (ಈಗಿನ ಲೆಕ್ಕದಲ್ಲಿ ರೂ. 66,000 ಕೋಟಿ) ಮುಟ್ಟಿದೆ. ಇದರಿಂದಾಗಿ 1 ಲಕ್ಷದಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ ಎಂಬುದನ್ನು ಇತ್ತೀಚಿನ ಅಧ್ಯಯನ ವರದಿ ಖಚಿತಪಡಿಸಿದೆ.`ಅಮೆರಿಕ-ಭಾರತ ಬಿಜಿನೆಸ್ ಕೌನ್ಸಿಲ್'(ಯುಎಸ್‌ಐಬಿಸಿ) ಸಂಸ್ಥೆ ಇತ್ತೀಚೆಗೆ `ಅಮೆರಿಕದಲ್ಲಿ ಬಂಡವಾಳ ಹೂಡುವ ಮೂಲಕ ಅಮೆರಿಕನ್ನರಿಗಾಗಿ ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಭಾರತ ಹೇಗೆ ನೆರವಾಗುತ್ತಿದೆ' ಎಂಬ ಅಂಶದ ಮೇಲೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ.ಭಾರತದೊಂದಿಗೆ ವಾಣಿಜ್ಯ ಸಂಬಂಧ ಹೆಚ್ಚಿಸಿಕೊಳ್ಳುವುದರಿಂದ ಅಮೆರಿಕದ ಆರ್ಥಿಕ ಸ್ಥಿತಿಗೆ ಯಾವ ಬಗೆಯಲ್ಲಿ ಅನುಕೂಲವಾಗುತ್ತಿದೆ ಎಂಬ ವಿವರಗಳನ್ನೂ ಒಳಗೊಂಡಿರುವ ಈ ವರದಿಯನ್ನು `ಯುಎಸ್‌ಐಬಿಸಿ' ಜುಲೈ 11ರಂದು ನಡೆಯಲಿರುವ ತನ್ನ 38ನೇ ವಾರ್ಷಿಕ ನಾಯಕತ್ವ ಸಮಾವೇಶದಲ್ಲಿ ಬಿಡುಗಡೆ ಮಾಡಲಿದೆ.2000ದಿಂದ 2010ರ ನಡುವಿನ ಅವಧಿಯಲ್ಲಿ ಅಮೆರಿಕದಲ್ಲಿನ ಭಾರತದ ನೇರ ಬಂಡವಾಳ ಹೂಡಿಕೆ 500 ಕೋಟಿ ಡಾಲರ್‌ಗಳಷ್ಟು ಹೆಚ್ಚಿದೆ. ಈ ಮೊದಲು ಅದು ಕೇವಲ 20 ಕೋಟಿ ಡಾಲರ್‌ಗಳಷ್ಟಿದ್ದಿತು. ಅಲ್ಲದೆ, ಇಲ್ಲಿ ನೆಲೆಗೊಂಡಿರುವ ಭಾರತದ ಕಂಪೆನಿಗಳು ಅಮೆರಿಕನ್ನರಿಗೆ 50,000 ಉದ್ಯೋಗಾವಕಾಶಗಳನ್ನೂ ಸೃಷ್ಟಿಸಿವೆ ಎಂದು ಅಮೆರಿಕದ ಗೃಹ ಖಾತೆ ಉಪ ಸಚಿವ ವಿಲಿಯಂ ಬರ್ನ್ಸ್ 2012ರ ಅಕ್ಟೋಬರ್‌ನಲ್ಲಿ ಹೇಳಿದ್ದರು.ಅಮೆರಿಕದ ಉದ್ಯಮ ಜಗತ್ತಿಗೆ ಭಾರತದ ವಾಣಿಜ್ಯ ಲೋಕದ ಕೊಡುಗೆ  ಎರಡೂ ದೇಶಗಳ ನಡುವೆ `ವಾಣಿಜ್ಯ ಸಮರ' ನಡೆಯಬೇಕೆಂದು ಬಯಸುತ್ತಿರುವ ಹಲವರಿಗೆ ಸಶಕ್ತವಾದ ಉತ್ತರವನ್ನೇ ನೀಡುತ್ತದೆ ಎಂದು ಅಧ್ಯಯನ ವರದಿ ಗಮನ ಸೆಳೆದಿದೆ.ಅಮೆರಿಕದ ವಾಣಿಜ್ಯ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತೆ ಭಾರತ ವರ್ತಿಸುತ್ತಿದೆ. ಸ್ವದೇಶಿ ಕಂಪೆನಿಗಳನ್ನು ರಕ್ಷಿಸುವ ಸಲುವಾಗಿ ವಿದೇಶಿ ಸರಕುಗಳ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿದೆ.ಹಾಗಾಗಿ ಆ ದೇಶದ ಮೇಲೆ ಈ ಕುರಿತು ಸರಿಯಾದ ರೀತಿಯಲ್ಲಿ ಒತ್ತಡ ಹೇರಬೇಕು ಎಂದು ಅಲ್ಲಿನ ಕೆಲವು ಸಂಸದರು ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಜೂನ್‌ನಲ್ಲಿ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.