ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಂಭ್ರಮಕ್ಕೆ ಉಳಿತಾಯ ಕೊಡುಗೆ...

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದೀಪಾವಳಿ ಸಮೀಪಿಸುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕಂಪೆನಿಗಳು ಬೋನಸ್ ಜತೆಗೊಂದು ಸಿಹಿತಿಂಡಿಯ ಪೊಟ್ಟಣ ಕೊಟ್ಟು ನೌಕರರಿಗೆ ರಜೆಯ ಸಂಭ್ರಮ ಅನುಭವಿಸಲು ಅವಕಾಶಕೊಡುತ್ತವೆ. ಕೈಯಲ್ಲಿ ಬೋನಸ್ ಹಣ, ಮಜಾ ಮಾಡಲು ರಜೆ ಇರುವಾಗ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನುಬೇಕೆಂದು ನೌಕರರು ಸಂಭ್ರಮದಲ್ಲಿ ತೇಲಾಡುತ್ತಾರೆ.

ಮಡದಿಗೆ ಹೊಸಬಟ್ಟೆ, ಒಡವೆ, ಮಕ್ಕಳಿಗೆ ಪಟಾಕಿ, ಅಕ್ಕಪಕ್ಕದ ಮನೆಯವರಿಗೆ ಸಿಹಿಹಂಚಿ ಉಲ್ಲಾಸ- ಉತ್ಸಾಹದಿಂದ ದೀಪಾವಳಿಗೆ ಸಜ್ಜಾಗುತ್ತಾರೆ. ಪ್ರತಿವರ್ಷವೂ ದೀಪಾವಳಿ ಇದೇ ರೀತಿ ಹೀಗೆ ಬಂದು ಹಾಗೆ ಹೋಗುತ್ತದೆ.

ಆದರೆ, ಈ ವರ್ಷ ದೀಪಾವಳಿ ಸಂಭ್ರಮವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲವು ನಿರ್ಧಾರಗಳನ್ನು ನೀವೇಕೆ ತೆಗೆದುಕೊಳ್ಳಬಾರದು? ಸಂಭ್ರಮವೆನ್ನುವುದು ಪಟಾಕಿಯಂತೆ ಸಿಡಿದು ಭಸ್ಮವಾಗದೆ ಶಾಶ್ವತವಾಗಿ ನಮ್ಮಂದಿಗೆ ಸಂತಸ ಹಂಚಿಕೊಳ್ಳಲು ಏನು ಮಾಡಬಹುದು? ಕೆಲವು ಸರಳ ಉತ್ತರಗಳು ಇಲ್ಲಿವೆ ನೋಡಿ...

 ಗೋಲಕ
ಮಗುವಿಗೆ ಪಟಾಕಿ ಕೊಡಿಸಲೆಂದು ಮೀಸಲಿಟ್ಟಿದ್ದ ಹಣದಲ್ಲಿಯೇ ಒಂದು ಉತ್ತಮ ಗೋಲಕ ಕೊಡಿಸಿ. ಪಟಾಕಿ ಪ್ರಮಾಣ ಕೊಂಚ ಕಡಿಮೆಯಾದರೂ ಚಿಂತೆಯಿಲ್ಲ. ಅದರಲ್ಲಿ 50 ಪೈಸೆ- 1 ರೂಪಾಯಿ ನಾಣ್ಯಗಳಿಂದ ಕೂಡಿದ 90 ರೂಪಾಯಿ ಮಾತ್ರ ಇರಲಿ. ಒಂದು ತಿಂಗಳಲ್ಲಿ ಅದಕ್ಕೆ 10 ರೂಪಾಯಿ ಸೇರಿಸಿದರೆ ನಾನು ಇನ್ನೂ 10 ರೂಪಾಯಿ ಕೊಡುತ್ತೇನೆಂದು ಮಗುವಿಗೆ ಭರವಸೆ ಕೊಡಿ.

ಈಗ ನೋಡಿ ಮ್ಯಾಜಿಕ್. ನಿಮ್ಮ ಮಗು ಗೋಲಕದಲ್ಲಿ ಇದ್ದ ಹಣವನ್ನೆಲ್ಲಾ ಕೆಳಗೆ ಹಾಕಿಕೊಂಡು ಎಣಿಸಲು ಯತ್ನಿಸುತ್ತದೆ. ನೀವು ಅಥವಾ ನಿಮ್ಮ ಸ್ನೇಹಿತರು ಚಾಕಲೇಟ್ ಖರೀದಿಗೆಂದು ಕೊಟ್ಟ ಹಣವನ್ನು ಗೋಲಕಕ್ಕೆ ಸೇರಿಸಿ ಅದನ್ನು ಹೆಚ್ಚಿಸಲು ಯತ್ನಿಸುತ್ತದೆ. 50 ಪೈಸೆಯ 20 ನಾಣ್ಯಗಳು ಸೇರಿದರೆ 10 ರೂಪಾಯಿ ಆಗುತ್ತದೆ ಎಂಬ ಆರ್ಥಿಕ ವ್ಯವಹಾರದ ಮೊದಲ ಪಾಠವನ್ನು ಕಲಿಯುತ್ತದೆ.

  ಉಳಿತಾಯ ಖಾತೆ
ಬಹುತೇಕ ಎಲ್ಲ ಬ್ಯಾಂಕ್‌ಗಳು ಮಕ್ಕಳಿಗಾಗಿ ಉಳಿತಾಯ ಖಾತೆಗಳ ಯೋಜನೆ ಪ್ರಕಟಿಸಿವೆ. ನಿಮ್ಮ ಮಗುವಿನ ಹೆಸರಿನಲ್ಲಿ ಇಂಥದ್ದೊಂದು ಖಾತೆ ತೆರೆದು ಗೋಲಕದಲ್ಲಿ ತುಂಬಿದ ಹಣವನ್ನೇ ಇಂಥ ಖಾತೆಗಳಿಗೆ ಜಮಾ ಮಾಡಬಹುದು. ದೀಪಾವಳಿ, ವರಲಕ್ಷ್ಮಿ, ಮಗುವಿನ ಹುಟ್ಟುಹಬ್ಬದಂಥ ಶುಭ ದಿನಗಳಲ್ಲಿ ನಿಮ್ಮ ಗೆಳೆಯರು- ಹಿರಿಯರು ಮಗುವಿಗೆ ಆಶೀರ್ವದಿಸಿ ಕೊಟ್ಟ ಹಣವನ್ನು ನಿಯಮಿತವಾಗಿ ಜಮಾ ಮಾಡುತ್ತಾ ಮಗುವಿನ ಹೆಸರಿನಲ್ಲಿಯೇ ಎಫ್‌ಡಿ ಅಥವಾ ಮಕ್ಕಳ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಬಹುದು.

ಹೀಗೆ ಮಾಡುವುದರಿಂದ ಮಗುವಿಗೆ ಬ್ಯಾಂಕಿನ ಬಗ್ಗೆ ಇರುವ ಅವ್ಯಕ್ತ ಭಯ ಹೋಗುತ್ತದೆ. ಜತೆಗೆ ಖರ್ಚು ಮಾಡಿದ ಹಣ ಕರಗುತ್ತದೆ- ಕೂಡಿಟ್ಟ ಹಣ ಬೆಳೆಯುತ್ತದೆ ಎಂಬ ಸರಳ ಆರ್ಥಿಕ ತತ್ವ ಮನದಟ್ಟಾಗುತ್ತದೆ.

ವ್ಯವಸ್ಥಿತ ಹೂಡಿಕೆ ಯೋಜನೆ
ಮಗುವಿನ ಹೆಸರಿನಲ್ಲಿ ನಿಯಮಿತ ಹೂಡಿಕೆ ಯೋಜನೆ (ಸಿಸ್ಟಮೆಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಬಹುದು. ಬಹುತೇಕ ಫಂಡ್‌ಗಳಲ್ಲಿ ಮೊದಲು ಕಂತಿನ ಮೌಲ್ಯ ಕನಿಷ್ಠ  ರೂ 5000 ಇರುತ್ತದೆ. ನಂತರದ ಕಂತುಗಳು ಸಾಮಾನ್ಯವಾಗಿ ರೂ 100ರಿಂದ 1000ದವರೆಗೆ ಇರುತ್ತವೆ.

ತಿಂಗಳ ಮಾಸಿಕ ಕಂತು ತುಂಬಲು ಗೋಲಕದ ಹಣ ಬಳಸಲು ಪ್ರೇರೇಪಿಸಿ. ಕಂತು ತುಂಬಲು ಸಾಲುವಷ್ಟು ಹಣ ಗೋಲಕದಲ್ಲಿ ಸಂಗ್ರಹವಾಗದಿದ್ದರೆ ಕಡಿಮೆಯಾದ ಹಣವನ್ನಷ್ಟೇ ನೀವು ಕೊಡಿ. ಫಂಡ್‌ನ ಎನ್‌ಎವಿ (ನಿವ್ವಳ ಮೌಲ್ಯ) ಗಮನಿಸಿ, ಮಗುವಿಗೆ ಲಾಭ- ನಷ್ಟ ವಿವರಿಸಿ.

ಹೀಗೆ ಮಾಡುವುದರಿಂದ ಮಗುವಿಗೆ ಷೇರು ವ್ಯವಹಾರದ ಮೊದಲ ಪಾಠವನ್ನು ಪ್ರಾಯೋಗಿಕವಾಗಿ ಮತ್ತು ಅತ್ಯಂತ ಸರಳವಾಗಿ ಹೇಳಿಕೊಡುವ ಮೊದಲ ಗುರು ನೀವೇ ಆಗುತ್ತೀರಿ.

 ಇಟಿಎಫ್
ದೀಪಾವಳಿ ಸವಿಗೆಂದು ಹೆಂಡತಿಗೆ ಚಿನ್ನದ ಸರ ಮಾಡಿಸುವ ಕನಸು ನಿಮಗಿರಬಹುದು. ಅದರ ಬದಲು ಇದೇ ಮೊದಲ ಸಲ ಒಂದು ಗೋಲ್ಡ್ ಇಟಿಎಫ್ ಫಂಡ್‌ನಲ್ಲಿ `ಎಸ್‌ಐಪಿ~ ಪ್ರಾರಂಭಿಸಿ. ಅದರ ಮಹತ್ವವನ್ನು ನಿಮ್ಮಾಕೆಗೆ ಮನದಟ್ಟು ಮಾಡಿಸಿ.

 ಮಾಸಿಕ ವರಮಾನ
ವಯಸ್ಸಾದ ಪಾಲಕರಿಗೆ ಪಿಂಚಣಿ ಬಿಟ್ಟರೆ ಬೇರೆ ಆಧಾರವಿಲ್ಲ. ನೀವು ಅವರ ಎಲ್ಲ ಅಗತ್ಯವನ್ನು ಶ್ರದ್ಧೆಯಿಂದ ಪೂರೈಸಿದರೂ, ಅವರಿಗೆ ಅವರದ್ದೇ ಆದ ಸ್ವಂತ ಆದಾಯವಿಲ್ಲವೆಂಬ ಚಿಂತೆ ಇದ್ದೇ ಇರುತ್ತದೆ. ವಿವಿಧ ಬ್ಯಾಂಕ್ ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಲಭ್ಯವಿರುವ ಮಾಸಿಕ ವರಮಾನ ಯೋಜನೆಯಲ್ಲಿ ಹಣ ತೊಡಗಿಸಿ ನಿಮ್ಮ  ಪಾಲಕರ ಖಾತೆಗೆ ಪ್ರತಿ ತಿಂಗಳು ನಿಗದಿತ ಪ್ರಮಾಣದ ಹಣ ಜಮಾ ಆಗುವಂತೆ ಮಾಡಬಹುದು.

 ಆರೋಗ್ಯ ವಿಮೆ
ನಿಮ್ಮ ತಂದೆ, ತಾಯಿ, ಅತ್ತೆ, ಮಾವ, ಹೆಂಡತಿ, ಮಕ್ಕಳ ಆರೋಗ್ಯದ ಬಗ್ಗೆ ಇಷ್ಟು ದಿನ ನೀವು ಆಲೋಚಿಸದಿದ್ದರೆ ಈ ದೀಪಾವಳಿ ನೆನಪಿಗೆ ನೀವು ಈ ಕೆಲಸ ಮಾಡಲೇಬೇಕು. ಅನೇಕ ಕಂಪೆನಿಗಳಲ್ಲಿ  ವರಿಷ್ಠ ವಿಮಾ ಯೋಜನೆಗಳು (ಹಿರಿಯ ನಾಗರಿಕರಿಗಾಗಿ) ಲಭ್ಯ ಇರುತ್ತವೆ. ಉತ್ತಮ ಆರೋಗ್ಯ ವಿಮೆಯ ಕೊಡುಗೆ ನೀಡುವ ಮನಃಸ್ಥೈರ್ಯವನ್ನು ಇನ್ಯಾವ ಕೊಡುಗೆಯೂ ನೀಡುವುದಿಲ್ಲ.

  ಗೆಳೆಯರ ಬಳಗ
ದೀಪಾವಳಿ ಸಂಭ್ರಮದಲ್ಲಿ ಗೆಳೆಯರ ಬಳಗಕ್ಕೆ ನಾವೆಲ್ಲಾ ಸಿಹಿ ತಿಂಡಿಯ ಪೊಟ್ಟಣಗೊಂದಿಗೆ ಶುಭಾಶಯ ಪತ್ರಗಳನ್ನು ಕಳಿಸುತ್ತೇವೆ. ಈ ಬಾರಿ ಸ್ವಲ್ಪ ವಿಶೇಷವಾಗಿ ಆಚರಿಸೋಣ. ನಿಮ್ಮ ಬತ್ತಳಿಕೆಯಲ್ಲಿರುವ ಅತಿಮುಖ್ಯ ಕಂಪೆನಿಯ ಒಂದೋ- ಎರಡೋ ಷೇರನ್ನು ನಿಮ್ಮ ಪ್ರಾಣಮಿತ್ರನಿಗೆ ಗಿಫ್ಟ್ ಮಾಡಿ.

ಹಬ್ಬದ ಕೊಡುಗೆಗಳಿಗೆ ಭಾವನಾತ್ಮಕ ಸಂಬಂಧವೂ ಇರುವುದರಿಂದ ಗೆಳೆಯರು ಆ ಷೇರನ್ನು ಹಾಗೆಯೇ ಉಳಿಸಿಕೊಳ್ಳುತ್ತಾರೆ. ದೀರ್ಘಕಾಲದಲ್ಲಿ ಬೋನಸ್‌ಗಳ ಮೂಲಕ ಅದು ಬೆಳೆದು ನಿಮ್ಮ ನೆನಪನ್ನು ಶಾಶ್ವತಗೊಳಿಸುತ್ತದೆ. `ಈ ಗ್ರೀಟಿಂಗ್ಸ್~ ಬದಲು ಉಳಿತಾಯದ ಮಹತ್ವ ಸಾರುವ `ಇ ಬುಕ್~ಗಳನ್ನು ಮೇಲ್ ಮಾಡಿ. ನಿಮ್ಮ ಒಂದೇ ಒಂದು ಉತ್ತಮ ಸಲಹೆ, ಉತ್ತಮ ನಿರ್ಧಾರ ಗೆಳೆಯನ ಬದುಕಿನ ದಿಕ್ಕನ್ನೇ ಬದಲಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT