ಬೆಂಗಳೂರು: ರಾಜ್ಯ ಉನ್ನತಾಧಿಕಾರ ಸಮಿತಿ ₹ 9,048.39 ಕೋಟಿ ಬಂಡವಾಳ ಹೂಡಿಕೆಯ ಆರು ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಐಟಿ, ಐಟಿಇಎಸ್ಗೆ ಸಂಬಂಧಿಸಿದ ನಾಲ್ಕು, ಪ್ರವಾಸೋದ್ಯಮ ಮತ್ತು ಕೈಗಾರಿಕೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ತಲಾ ಒಂದು ಯೋಜನೆಗಳಿಗೆ ಸಮಿತಿ ಒಪ್ಪಿಗೆ ನೀಡಿದೆ. ಆ ಮೂಲಕ ಸುಮಾರು 35,487 ಮಂದಿಗೆ ಉದ್ಯೋಗಾವಕಾಶ ಲಭ್ಯವಾಗುವ ನಿರೀಕ್ಷೆ ಇದೆ.
ಬೆಂಗಳೂರು ನಗರ ಜಿಲ್ಲೆಯ ಕಾಡುಬೀಸನಹಳ್ಳಿಯಲ್ಲಿ 13.29 ಎಕರೆಯಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿ ಅರಾಕಲ್ ₹ 2,438 ಕೋಟಿ ಬಂಡವಾಳ ಹೂಡಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ 55 ಎಕರೆ ಜಾಗದಲ್ಲಿ ಬ್ಲೂಸ್ಟೋನ್ ಟೆಕ್ ಪಾರ್ಕ್ ಸಂಸ್ಥೆ ₹ 2,051.39 ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್ ಐಟಿ ಪಾರ್ಕ್ ನಿರ್ಮಿಸಲಿದೆ.