ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2020: ರಾಜ್ಯಕ್ಕೆ ಅಗತ್ಯ ನೆರವು ಕೋರಿಕೆ

ಕೇಂದ್ರದ ಸಚಿವರೊಂದಿಗೆ ಬಿಎಸ್‌ವೈ ಚರ್ಚೆ
Last Updated 30 ಜನವರಿ 2020, 20:10 IST
ಅಕ್ಷರ ಗಾತ್ರ

ನವದೆಹಲಿ: ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ವರಿಷ್ಠರ ಒಪ್ಪಿಗೆ ಪಡೆಯಲು ಗುರುವಾರ ಇಲ್ಲಿಗೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಜೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಬಜೆಟ್‌ನಲ್ಲಿ ರಾಜ್ಯಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಶನಿವಾರ ಮಂಡಿಸಲಾಗುವ ಕೇಂದ್ರ ಬಜೆಟ್‌ ಮೂಲಕ ಅಗತ್ಯ ಹಣಕಾಸಿನ ನೆರವು ನೀಡುವಂತೆ ಈ ಸಂದರ್ಭ ಕೋರಿದರು.

ಕೈಗಾರಿಕಾ ವಲಯದ ಬೆಳವಣಿಗೆಯ ನಿಟ್ಟಿನಲ್ಲಿ ಜಾಗತಿಕವಾಗಿ ಹೂಡಿಕೆದಾರರನ್ನು ಆಹ್ವಾನಿಸಲಾಗಿದ್ದು, ರಾಜ್ಯದ ವಿವಿಧ ನಗರಗಳಲ್ಲಿನ ಮೂಲ ಸೌಲಭ್ಯ ಅಭಿವೃದ್ಧಿ ಅಗತ್ಯವಾಗಿದೆ. ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ಹಣಕಾಸಿನ ಹಂಚಿಕೆ ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ವಿಐಎಸ್‌ಎಲ್‌ ಪುನಶ್ಚೇತನಕ್ಕೆ ಮನವಿ:
ಇದಕ್ಕೂ ಮುನ್ನ ಕೇಂದ್ರದ ಪೆಟ್ರೋಲಿಯಂ ಮತ್ತು ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ, ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್‌ಎಲ್‌)ಯ ಪ್ರಸ್ತಾವಿತ ಖಾಸಗೀಕರಣ ನಿರ್ಧಾರ ಕೈಬಿಡುವಂತೆ ಕೋರಿದರು.

ಉತ್ತಮ ಗುಣಮಟ್ಟದ ಉಕ್ಕು ಉತ್ಪಾದಿಸುವ ಈ ಕಾರ್ಖಾನೆಯ ಉತ್ತೇಜನದ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರಗಳು ಯಾವುದೇ ರೀತಿಯ ವಿಶೇಷ ಆಸಕ್ತಿ ತಾಳದ್ದರಿಂದ ನಷ್ಟ ಉಂಟಾಗಿದೆ. ಕೂಡಲೇ ಈ ಬಗ್ಗೆ ಗಮನ ಹರಿಸಿದರೆ ಲಾಭದತ್ತ ಸಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.

ಹೆಚ್ಚುವರಿ ಬಂಡವಾಳ ಹೂಡುವ ಮೂಲಕ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಈ ಕಾರ್ಖಾನೆಗೆ ಅಗತ್ಯವಿರುವ ಉತ್ಕೃಷ್ಟ ಅದಿರನ್ನು ಪೂರೈಸಲು ಬಳ್ಳಾರಿ ಜಿಲ್ಲೆಯಲ್ಲಿನ ಗಣಿಯನ್ನು ಹಂಚಿಕೆ ಮಾಡಲಾಗಿದೆ. ಅಗತ್ಯ ನೀರು, ಭೂಮಿ ಮತ್ತು
ವಿದ್ಯುತ್ ಸೌಲಭ್ಯ ಒಳಗೊಂಡಿರುವ ಕಾರ್ಖಾನೆಗೆ ಸಮರ್ಪಕವಾದ ಬಂಡವಾಳ ಒದಗಿಸಿ ಪುನಶ್ಚೇತನಕ್ಕೆ
ಮುಂದಾಗಬೇಕು ಎಂದು ಅವರು ಕೋರಿದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT