ಮಂಗಳವಾರ, ಮಾರ್ಚ್ 2, 2021
18 °C

ಬಜೆಟ್: ಆಟಿಕೆ ಉದ್ಯಮಕ್ಕೆ ವಿಶೇಷ ನೆರವು?

ಪಿಟಿಐ Updated:

ಅಕ್ಷರ ಗಾತ್ರ : | |

ಗೊಂಬೆ ಮತ್ತು ಆಟಿಕೆಗಳು–ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಆಟಿಕೆಗಳ ತಯಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಟಿಕೆ ಉದ್ಯಮ ವಲಯಕ್ಕೆ ಮೀಸಲಾದ ನೀತಿಯೊಂದನ್ನು ರೂಪಿಸುವ ಘೋಷಣೆಯನ್ನು ಕೇಂದ್ರ ಸರ್ಕಾರವು ಫೆಬ್ರುವರಿ 1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಆಟಿಕೆ ಉದ್ಯಮಕ್ಕೆ ಪೂರಕವಾಗುವ ವಾತಾವರಣವನ್ನು ಸೃಷ್ಟಿಸಲು, ಆಟಿಕೆ ತಯಾರಿಕೆ ವಲಯಕ್ಕೆ ನವೋದ್ಯಮಗಳನ್ನು ಆಕರ್ಷಿಸಲು ಈ ನೀತಿ ನೆರವಾಗಲಿದೆ ಎಂದು ಮೂಲಗಳು ಹೇಳಿವೆ. ಆಟಿಕೆಗಳನ್ನು ದೇಶದಲ್ಲೇ ತಯಾರಿಸುವುದನ್ನು ಉತ್ತೇಜಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈಗಾಗಲೇ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದೇಶಗಳಿಂದ ಆಮದಾಗುವ ಆಟಿಕೆಗಳಿಗೆ ಸುಂಕವನ್ನು ಹೆಚ್ಚಿಸಿದೆ.

ಆಮದಾಗುವ ಆಟಿಕೆಗಳ ಗುಣಮಟ್ಟವನ್ನು ಪರೀಕ್ಷಿಸಬೇಕು ಎಂಬ ಆದೇಶವನ್ನೂ ಹೊರಡಿಸಿದೆ. ಈ ಆದೇಶವು ಅಗ್ಗದ, ಕಳಪೆ ಗುಣಮಟ್ಟದ ಆಟಿಕೆಗಳು ಭಾರತದ ಮಾರುಕಟ್ಟೆಗೆ ಬರಬಾರದು ಎಂಬ ಉದ್ದೇಶವನ್ನು ಹೊಂದಿದೆ.

ಅಂತರರಾಷ್ಟ್ರೀಯ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ತೀರಾ ಕಡಿಮೆ ಇದೆ. ಜಾಗತಿಕ ಮಟ್ಟದಲ್ಲಿ ಇರುವ ಬೇಡಿಕೆಯನ್ನು ಗಮನಿಸಿದರೆ, ಭಾರತದಿಂದ ಆಗುವ ಆಟಿಕೆಗಳ ರಫ್ತಿನ ಪ್ರಮಾಣ ಶೇಕಡ 0.5ರಷ್ಟು ಮಾತ್ರ. ಹಾಗಾಗಿ, ಆಟಿಕೆ ಉದ್ಯಮದಲ್ಲಿ ಬಹಳ ದೊಡ್ಡ ಅವಕಾಶ ಇದೆ ಎಂದು ಮೂಲವೊಂದು ವಿವರಿಸಿದೆ.

‘ಆಟಿಕೆಗಳ ತಯಾರಿಕೆಗೆ ಉತ್ತೇಜನ ನೀಡುವುದರಿಂದ ಭಾರತದಿಂದ ಆಟಿಕೆಗಳನ್ನು ರಫ್ತು ಮಾಡುವುದಕ್ಕೂ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಈಗಿನ ಸಂದರ್ಭದಲ್ಲಿ ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳು ಆಟಿಕೆ ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಭಾರತದ ಆಟಿಕೆ ಉದ್ಯಮವು ಈಗಲೂ ಅಸಂಘಟಿತ ವಲಯದಲ್ಲೇ ಕೇಂದ್ರೀಕೃತ ಆಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಅಂದಾಜು ನಾಲ್ಕು ಸಾವಿರ ಉದ್ಯಮಗಳು ದೇಶದಲ್ಲಿ ಆಟಿಕೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ದೇಶದಲ್ಲಿ ಲಭ್ಯವಿರುವ ಸರಿಸುಮಾರು ಶೇಕಡ 85ರಷ್ಟು ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಅತಿಹೆಚ್ಚಿನ ಪ್ರಮಾಣದ ಆಟಿಕೆಗಳು ಬರುವುದು ಚೀನಾದಿಂದ. ಶ್ರೀಲಂಕಾ, ಮಲೇಷ್ಯಾ, ಜರ್ಮನಿ, ಹಾಂಗ್‌ಕಾಂಗ್‌ ಮತ್ತು ಅಮೆರಿಕದಿಂದಲೂ ಆಟಿಕೆಗಳು ಆಮದಾಗುತ್ತವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು