ಮಂಗಳವಾರ, ಏಪ್ರಿಲ್ 7, 2020
19 °C
ಪರಿಶಿಷ್ಟರು, ಹಿಂದುಳಿದವರು, ಕ್ರೈಸ್ತರ ಅಭಿವೃದ್ಧಿಗೆ ಅನುದಾನ ಮೀಸಲು

ಕರ್ನಾಟಕ ಬಜೆಟ್ 2020 | ‘ಸರ್ವೋದಯ’ ಪರಿಕಲ್ಪನೆ ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶೋಷಿತ, ದುರ್ಬಲ ವರ್ಗಗಳ ಅಭಿವೃದ್ಧಿಯತ್ತ ಸರ್ಕಾರದ ದೃಷ್ಟಿ ನೆಟ್ಟಿರುವುದು ಆಯ–ವ್ಯಯದಲ್ಲಿ ಬಿಂಬಿತವಾಗಿದೆ. ‌ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ), ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರಿಗೂ ಅಭಿವೃದ್ಧಿಯ ಪಾಲು ತಲುಪಿಸಬೇಕೆಂಬ ಉದ್ದೇಶದಿಂದ ಯಡಿಯೂರಪ್ಪ ಹೊಸ ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ.

ಬಜೆಟ್‌ನಲ್ಲಿ ಅನುದಾನ ಹಂಚಿಕೆ ಸಂದರ್ಭದಲ್ಲಿ ಶೇ 24.1ರಷ್ಟನ್ನು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳಿಗೆ (ಎಸ್‌ಸಿಎಸ್‌ಪಿ/ಟಿಎಸ್‌ಪಿ) ಕಡ್ಡಾಯವಾಗಿ ನೀಡಬೇಕು. ಅದರನ್ವಯ ಪ್ರಸಕ್ತ ಬಜೆಟ್‌ನಲ್ಲಿ ₹ 26,131 ಕೋಟಿ ತೆಗೆದಿಡಬೇಕಿದೆ. ಆದರೆ, ಸರ್ಕಾರ ₹ 26,930 ಕೋಟಿ ನಿಗದಿಪಡಿಸಿದ್ದು, ₹ 799 ಕೋಟಿ ಹೆಚ್ಚುವರಿಯಾಗಿ ಮೀಸಲಿಟ್ಟಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಯುವ ವಸತಿ ಶಾಲೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲು, ಈ ಶಾಲೆಗಳಲ್ಲಿ ಕನಿಷ್ಠ ಶೇ 25ರಷ್ಟು ಸೀಟು ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಮೀಸಲಿಡಲು ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ.

ಎಸ್‌ಸಿ, ಎಸ್‌ಟಿ ಸಮುದಾಯದ ನಿರುದ್ಯೋಗಿ ಯುವಕ, ಯುವತಿಯರಿಗೆ ವಾಹನ ಚಾಲನಾ ತರಬೇತಿ ನೀಡಲು ರಸ್ತೆ ಸಾರಿಗೆ ಸಂಸ್ಥೆಗಳ ಮೂಲಕ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಆರೋಗ್ಯ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಸಮನ್ವಯದಲ್ಲಿ ಪ್ಯಾರಾ ಮೆಡಿಕಲ್‌ ಸರ್ಟಿಫಿಕೇಟ್‌ ಕೋರ್ಸ್‌ಗಳ ಜೊತೆ ಕೌಶಲಾಭಿವೃದ್ಧಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ಸಮುದಾಯದವರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಸದ್ಯ ನೀಡುತ್ತಿರುವ ಷೇರು ಬಂಡವಾಳವನ್ನು ₹ 10 ಲಕ್ಷದಿಂದ ₹ 20 ಲಕ್ಷಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಪ್ರತಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಸ್‌ಸಿ, ಎಸ್‌ಸಿ ವಿದ್ಯಾರ್ಥಿಗಳಿಗೆ, ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಎಂಬುವವರ ಹೆಸರಿನಲ್ಲಿ ₹ 1 ಲಕ್ಷ ನಗದು ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ಪ್ರಸಕ್ತ ಸಾಲಿನಲ್ಲಿ ₹ 60 ಲಕ್ಷ ನಿಗದಿಪಡಿಸಲಾಗಿದೆ.

ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ಆಯುಷ್‌ ಇಲಾಖೆ ಸಹಯೋಗದಲ್ಲಿ ಬುಡಕಟ್ಟು ಜನರ ಪಾರಂಪರಿಕ ವೈದ್ಯ ಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಿಗಳ ಸಂಸ್ಕರಣಾ ಘಟಕ ಸ್ಥಾಪಿಸಲು ₹ 2 ಕೋಟಿ ವೆಚ್ಚ ಮಾಡಲಾಗುವುದು. ಬಾಬು ಜಗಜೀವನ್‌ ರಾಮ್‌ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ‘ಚರ್ಮ ಶಿಲ್ಪ’ ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕ ಸ್ಥಾಪಿಸಲು ಘಟಕದ ವೆಚ್ಚ ₹ 10 ಲಕ್ಷದಲ್ಲಿ ₹ 5 ಲಕ್ಷ ಸಹಾಯಧನವನ್ನು 250 ಫಲಾನುಭವಿಗಳಿಗೆ ನೀಡಲು ₹ 12.50 ಕೋಟಿ ಒದಗಿಸಲಾಗಿದೆ. ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ₹ 78 ಕೋಟಿ ನೀಡಲಾಗಿದೆ. ಇ – ವಾಣಿಜ್ಯ ಸಂಸ್ಥೆಗಳ ಉತ್ಪನ್ನಗಳನ್ನು ಪೂರೈಸುವ 1,000 ಯುವಕರಿಗೆ ಬೈಕ್‌ ಖರೀದಿಗೆ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ತಲಾ ₹ 25 ಸಾವಿರದಂತೆ ಒಟ್ಟು ₹ 2.5 ಕೋಟಿ ಆರ್ಥಿಕ ನೆರವು ನೀಡಲಾಗುವುದು.

ರಾಜ್ಯದ ಎಲ್ಲ 10 ಮಹಾನಗರಪಾಲಿಕೆಗಳಲ್ಲಿ ಅಧಿಸೂಚಿತವಲ್ಲದ ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿಗೆ ₹ 200 ಕೋಟಿ ಮೀಸಲಿಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಉನ್ನತೀಕರಿಸುವ ಪ್ರಸ್ತಾವವಿದೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ₹ 200 ಕೋಟಿ ಇಡಲಾಗಿದೆ.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನ
ನಿಗಮ; ಮೊತ್ತ (₹ ಕೋಟಿಗಳಲ್ಲಿ)

ಉಪ್ಪಾರ; 10
ವಿಶ್ವಕರ್ಮ; 25
ನಿಜಶರಣ ಅಂಬಿಗರ ಚೌಡಯ್ಯ; 50
ಆರ್ಯವೈಶ್ಯ; 10
ಕುಂಬಾರ; 20
ಗೊಲ್ಲ; 10

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು