ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಬಜೆಟ್ 2020 | ಮಹಿಳೆ, ಮಕ್ಕಳತ್ತ ವಾತ್ಸಲ್ಯ ಅನುದಾನದಲ್ಲಿ ಚೌಕಾಸಿ!

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ಇಲ್ಲ
Published : 5 ಮಾರ್ಚ್ 2020, 19:58 IST
ಫಾಲೋ ಮಾಡಿ
Comments

ಬೆಂಗಳೂರು:ಮಹಿಳೆ, ಮಕ್ಕಳಿಗಾಗಿಯೇ ಪ್ರತ್ಯೇಕ ಬಜೆಟ್‌ ರೂಪದಲ್ಲಿ ₹74,123 ಕೋಟಿ ವೆಚ್ಚದ ಕಾರ್ಯಕ್ರಮಗಳ ಪ್ರಸ್ತಾವನೆಯನ್ನು ಮುಂದಿಟ್ಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಶಿಕ್ಷಣ, ಆರೋಗ್ಯ, ಯುವಜನ, ಕನ್ನಡ ಮತ್ತು ಸಂಸ್ಕೃತಿಗೆ ವಿಶೇಷ ಎನ್ನುವಂತಹ ಕೊಡುಗೆ ನೀಡಿಲ್ಲ. ಸಂತ, ಶರಣರನ್ನು ಮಾತ್ರ ಮರೆತಿಲ್ಲ.

ಮಹಿಳೆಯರಿಗಾಗಿ ₹37,783 ಕೋಟಿ ಮೊತ್ತದ 953 ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. ವಿವರಗಳು ಮಾತ್ರ ಇಲ್ಲ. ಈ ಎರಡೂ ವಿಭಾಗಗಳು ಒಟ್ಟು ಬಜೆಟ್‌ನ ಶೇ 31.16ರಷ್ಟು ಗಾತ್ರ ಹೊಂದಿರುತ್ತದೆ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕೊಡುಗೆಗಳಿಲ್ಲ. ಆದರೆಶಿಕ್ಷಕರು ತರಗತಿ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದಕ್ಕಾಗಿ, ಎಲ್ಲಾ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು ‘ಶಿಕ್ಷಕ ಮಿತ್ರ’ ಎಂಬ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸುವುದಾಗಿ ಹೇಳಿರುವುದು ಹೊಸ ಭರವಸೆ.ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸಲು ವಿಟಿಯು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ತಲಾ ₹5 ಕೋಟಿ ವೆಚ್ಚದಲ್ಲಿ ಜಿಯೋಸ್ಪೇಶಿಯಲ್‌ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ. ಶಾಸಕರು ತಮ್ಮ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಪ್ರಸ್ತಾವವಿದೆ.

ಆರೋಗ್ಯ: ಟೆಲಿಮೆಡಿಸಿನ್, ಪೆರಿಟೋನಿಯಲ್ ಡಯಾಲಿಸಿಸ್‌ನಂತಹ ಸೇವೆಗಳು ಜಿಲ್ಲಾ ಆಸ್ಪತ್ರೆಗಳಿಗೂ ವಿಸ್ತರಣೆ. ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆನಗದುರಹಿತ ಶಸ್ತ್ರಚಿಕಿತ್ಸೆ ಸೇವೆ ನೀಡಲಾಗುತ್ತದೆ.

ಕೇಂದ್ರ ಸರ್ಕಾರದನೆರವಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಕ್ಷೇಮಗಳಲ್ಲಿ ಹಂತ ಹಂತವಾಗಿ ₹19 ಕೋಟಿ ವೆಚ್ಚದಲ್ಲಿ ಟೆಲಿಮೆಡಿಸಿನ್ ಸೇವೆ ವಿಸ್ತರಣೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಿಪಿಎಲ್ ಕುಟುಂಬದ ರೋಗಿಗಳಿಗೆ ಆಯ್ದ ಐದು ಜಿಲ್ಲೆಗಳಲ್ಲಿ ₹5 ಕೋಟಿ ವೆಚ್ಚದಲ್ಲಿಮನೆಯಲ್ಲಿಯೇ ಸ್ವಯಂ ಆಗಿ ಡಯಾಲಿಸಿಸ್‌ ಮಾಡಿಕೊಳ್ಳಬಹುದಾದ (ಪೆರಿಟೋನಿಯಲ್‌ ಡಯಾಲಿಸಿಸ್‌) ಸೇವೆ. ಕಿವುಡುತನವಿರುವ ಆರು ವರ್ಷದೊಳಗಿನ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆ ನಡೆಸಿ, ಶ್ರವಣಯಂತ್ರಗಳನ್ನು ಒದಗಿಸಲು ₹28 ಕೋಟಿ ಮೀಸಲು.

ಕೆ.ಸಿ.ಜನರಲ್ ಆಸ್ಪತ್ರೆಸೇರಿದಂತೆ ಆರು ಆಸ್ಪತ್ರೆಗಳ ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಲು, ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಅಭಿವೃದ್ಧಿ. ಇದಕ್ಕೆ ₹5 ಕೋಟಿ ಅನುದಾನ. ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ ₹3 ಕೋಟಿ ವೆಚ್ಚದಲ್ಲಿ ಸಿಮ್ಯುಲೇಷನ್ ಲ್ಯಾಬ್‌ಗಳು ಹಾಗೂ ತಲಾ ₹30 ಲಕ್ಷ ವೆಚ್ಚದಲ್ಲಿ ಮಾಲಿಕ್ಯುಲಾರ್ ಬಯಾಲಜಿ ಲ್ಯಾಬ್‌ ಸ್ಥಾ‌ಪಿಸಲಾಗುತ್ತದೆ.

ಒಂದು ಲಕ್ಷ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಖ್ಯಮಂತ್ರಿ ಆರೋಗ್ಯ ಸುರಕ್ಷಾ ಯೋಜನೆಯಡಿಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್ ವಿತರಣೆ, ನಗರ ಪ್ರದೇಶಗಳಲ್ಲಿನ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ರಕ್ಷಣೆಗೆ 10 ಮೊಬೈಲ್ ಕ್ಲಿನಿಕ್ ಆರಂಭಿಸಲಾಗುತ್ತದೆ.

ಮಕ್ಕಳಿಗೆ ಪ್ರತ್ಯೇಕ ಬಜೆಟ್‌
ಬೆಂಗಳೂರು: ಹದಿನೆಂಟು ವರ್ಷದ ಒಳಗಿನ ಎಲ್ಲ ಮಕ್ಕಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರತ್ಯೇಕ ಬಜೆಟ್‌ ಮಂಡಿಸಿದ್ದು, ಇದು ಒಂದು ಇತಿಹಾಸ ಎಂದು ಹೇಳಿಕೊಂಡಿದ್ದಾರೆ.

ಆದರೆ, ₹36,340 ಕೋಟಿಯ 279 ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿರುವುದು ಬಿಟ್ಟರೆ ಅದರ ವಿವರಗಳನ್ನು ನೀಡಿಲ್ಲ. ಹೀಗಾಗಿ ಇಷ್ಟು ದೊಡ್ಡ ಮೊತ್ತದ ವಿನಿಯೋಗದ ಕುರಿತಂತೆ ಕುತೂಹಲ ಉಳಿದುಕೊಂಡಿದೆ.

ರಾಜ್ಯದಲ್ಲಿ ಹೊಸದಾಗಿ ಏಳು ಬಾಲಮಂದಿರಗಳ ಸ್ಥಾಪನೆಗಾಗಿ ₹5.67 ಕೋಟಿ ಅನುದಾನ, ನೆರೆ ಹಾವಳಿಯಿಂದ ಹಾನಿಗೊಳಗಾದ 842 ಅಂಗನವಾಡಿ ಕೇಂದ್ರಗಳ ಪುನರ್‌ನಿರ್ಮಾಣಕ್ಕಾಗಿ ₹138 ಕೋಟಿ ನೀಡಲಾಗುತ್ತದೆ.

ಸಮಾಜದ ಶೋಷಿತ ವರ್ಗದವರಿಗೆ ಆಶ್ರಯ ನೀಡುವ ಸುಧಾರಣಾ ಸಂಸ್ಥೆಗಳನ್ನು ಒಂದು ಮಾಸ್ಟರ್‌ ಪ್ಲಾನ್‌ ತಯಾರಿಸಿ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ₹5 ಕೋಟಿ ಅನುದಾನ ಮೀಸಲಿಡಲಾಗಿದೆ. ಬಾಲಮಂದಿರದಲ್ಲಿ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಉದ್ಯೋಗ ಪ್ರಾರಂಭಿಸಲು, ತಿಂಗಳಿಗೆ ₹5 ಸಾವಿರದಂತೆ ಗರಿಷ್ಠ ಮೂರು ವರ್ಷದವರೆಗೆ ಆರ್ಥಿಕ ನೆರವು ನೀಡುವ ‘ಉಪಕಾರ’ ಯೋಜನೆ ಜಾರಿಗೊಳಿಸಲಾಗುತ್ತದೆ. ಕೌಶಲಾಭಿವೃದ್ಧಿ ಇಲಾಖೆಯಿಂದ ತರಬೇತಿಗಾಗಿ ₹1 ಕೋಟಿ ಅನುದಾನ ನೀಡಲಾಗುತ್ತದೆ.

ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಸಾಮರ್ಥ್ಯ ಹೆಚ್ಚಿಸಲು ₹20 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲು ₹20 ಕೋಟಿ ಅನುದಾನ ಒದಗಿಸಲಾಗಿದೆ.

ಶಿಕ್ಷಣ: ಮುಖ್ಯಾಂಶಗಳು
* 276 ಪಬ್ಲಿಕ್‌ ಶಾಲೆಗಳ ಮೂಲಸೌಕರ್ಯಕ್ಕೆ ₹ 100 ಕೋಟಿ
* ನೆರೆ ಹಾವಳಿ: 6,469 ಶಾಲಾ ಕೊಠಡಿ ನಿರ್ಮಾಣಕ್ಕೆ ನಬಾರ್ಡ್‌ ಸಹಯೋಗದಲ್ಲಿ ₹ 758 ಕೋಟಿ
* ತಿಂಗಳ ಎರಡು ಶನಿವಾರ ಬ್ಯಾಗ್‌ರಹಿತ ದಿನ ‘ಸಂಭ್ರಮ ಶನಿವಾರ’
* 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ, ಅದಕ್ಕಾಗಿ ₹ 1 ಕೋಟಿ
* ದಾವಣಗೆರೆ, ಉಡುಪಿ, ದೊಡ್ಡಬಳ್ಳಾಪುರದ ಸ್ಕೌಟ್ಟ್‌ ಮತ್ತು ಗೈಡ್ಸ್‌ ಕೇಂದ್ರಗಳಿಗೆ ₹ 4 ಕೋಟಿ
* ರಾಜ್ಯದ ವಿಶ್ವವಿದ್ಯಾಲಯ, ಕಾಲೇಜುಗಳ ಆಡಳಿತ ವ್ಯವಸ್ಥೆಯನ್ನು ತಾಂತ್ರಿಕ ನೆರವಿನಿಂದ ನಿರ್ವಹಿಸಲು ₹ 1 ಕೋಟಿ ವೆಚ್ಚದಲ್ಲಿ ಶಾಶ್ವತ ವ್ಯವಸ್ಥೆ
* ಉನ್ನತ ಶಿಕ್ಷಣದ ನಿವ್ವಳ ನೋಂದಣಿ ಅನುಪಾತ ಹೆಚ್ಚಿಸಲು ಇಂಟರಾಕ್ಟೀವ್‌ ಆನ್‌ಲೈನ್‌ ಕೋರ್ಸ್‌ ಆರಂಭ, ಇದಕ್ಕಾಗಿ ಇ–ಕಂಟೆಂಟ್‌ ಸಿದ್ಧಪಡಿಸಲು ₹ 1 ಕೋಟಿ
* ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ₹ 10 ಕೋಟಿ
* ಸಂಚಾರಿ ಡಿಜಿಟಲ್‌ ತಾರಾಲಯ–ಈಗಿನ 11 ಜಿಲ್ಲೆಯಿಂದ 16 ಜಿಲ್ಲೆಗಳಿಗೆ ವಿಸ್ತರಣೆಗೆ ₹ 5 ಕೋಟಿ
* ಪಿಯು ವಿದ್ಯಾರ್ಥಿಗಳಿಗೆ ‘ವಿಜ್ಞಾನ ಪ್ರತಿಭಾ ಶೋಧನೆ’–500 ವಿದ್ಯಾರ್ಥಿಗಳಿಗೆ ಮಾಸಿಕ ₹ 1,000 ಶಿಷ್ಯವೇತನ
* 2 ವರ್ಷಗಳಲ್ಲಿ 1 ಸಾವಿರ ಪದವೀಧರರಿಗೆ ₹ 2 ಕೋಟಿ ವೆಚ್ಚದಲ್ಲಿ ಪ್ರತಿಭಾ ಪ್ರೇರಣಾ ಕಾರ್ಯಕ್ರಮ
* ನವೋದ್ಯಮಗಳ ವೇಗ ವರ್ಧನೆಗೆ ನೆರವಾಗಲು ₹ 3
* ಇಂಟರ್‌ನೆಟ್‌ ಆಫ್‌ ಎಥಿಕಲ್‌ ಥಿಂಗ್ಸ್‌ ವಿಷಯದ ಉತ್ಕೃಷ್ಟತಾ ಕೇಂದ್ರಕ್ಕೆ ₹ 7.5 ಕೋಟಿ
* ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಗೆ ₹ 20 ಕೋಟಿ
* ಬೆಂಗಳೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ ಸೇವಾ ಕೇಂದ್ರಗಳ ಸಾಮರ್ಥ್ಯ ಉನ್ನತೀಕರಣಕ್ಕೆ ₹ 20 ಕೋಟಿ
* ಆಟೊ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ ₹ 2 ಸಾವಿರ ನೆರವು, ₹ 40 ಕೋಟಿ ಅನುದಾನ

ಪ್ರತಿಕ್ರಿಯೆಗಳು
ಸಣ್ಣ, ಮಧ್ಯಮ ಕೈಗಾರಿಕಾ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕಂಚಿನ ಪ್ರತಿಮೆಗಳ ನಿರ್ಮಾಣಕ್ಕೆ ನೂರಾರು ಕೋಟಿ ನೀಡುವ ಬದಲು, ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿತ್ತು. ಬಡ್ಡಿ ಮನ್ನಾ ಮಾಡಬೇಕಿತ್ತು.
–ರೂಪಾರಾಣಿ, ಕೈಗಾರಿಕೋದ್ಯಮಿ

**

ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿರುವ ಬಜೆಟ್ ಇದು. ಶಿಕ್ಷಣವನ್ನು ಸ್ಪರ್ಧೆಯ ಬದಲು, ಸ್ಫೂರ್ತಿಯಾಗಿಸುವ ದೃಷ್ಟಿಕೋನ ಬಜೆಟ್‌ನಲ್ಲಿದೆ.ಪರಿಸರ ಸಂರಕ್ಷಣೆ ಕೇವಲ ಸಮುದಾಯದ ಹೊಣೆಗಾರಿಕೆ ಆಗಿರದೇ, ಸುಸ್ಥಿರ ಔದ್ಯೋಗಿಕ ಮಾದರಿಯಾಗಲಿ.
ಡಾ.ಭಾವನಾ ಹಾಲನಾಯ್ಕ, ಸಂಶೋಧಕಿ

**

ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿ ಬಸ್‌ಪಾಸ್‌ ಉಚಿತವಾಗಿ ನೀಡುವ ರೀತಿಯಲ್ಲಿಯೇ, ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಬಸ್‌ಗಳಲ್ಲಿ ಓಡಾಡುವ ಮಹಿಳಾ ಕಾರ್ಮಿಕರಿಗೂ ಉಚಿತವಾಗಿ ಬಸ್‌ಪಾಸ್‌ ನೀಡುವ ಯೋಜನೆ ರೂಪಿಸಬೇಕಾಗಿತ್ತು.
–ಕೆ.ಪಿ.ನಾಗವೇಣಿ, ಗೃಹಿಣಿ

**

ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಸ್ತಾಪಿಸಲಾಗಿದ್ದ ‘ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌’ ಯೋಜನೆಯು ಯಾವ ಹಂತದಲ್ಲಿದೆ ಮತ್ತು ಅದರ ರೂಪು–ರೇಷೆಗಳ ಕುರಿತು ಯಾವುದೇ ಉಲ್ಲೇಖವಿಲ್ಲ. ಇದು ನಿರಾಶಾದಾಯಕ, ಜಾಳು ಜಾಳಾದ ಬಜೆಟ್‌.
–ಬಿ.ಶ್ರೀಪಾದ ಭಟ್, ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT