ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ತೆರಿಗೆ ಪಾವತಿ ಬದ್ಧತೆ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಇನ್ನಷ್ಟು ಕ್ರಮ
Last Updated 27 ಫೆಬ್ರುವರಿ 2019, 20:35 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ₹ 20 ಸಾವಿರ ಕೋಟಿಗಳಷ್ಟು ಜಿಎಸ್‌ಟಿ ವಂಚಿಸಿರುವುದನ್ನು ಪತ್ತೆ ಹಚ್ಚಲಾಗಿದೆ.

‘ಇಂತಹ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಮತ್ತು ತೆರಿಗೆ ಪಾವತಿ ಬದ್ಧತೆ ಹೆಚ್ಚಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ ಸದಸ್ಯರಾಗಿರುವ ಜಾನ್‌ ಜೋಸೆಫ್‌ ಅವರು ತಿಳಿಸಿದ್ದಾರೆ.

‘2018–19ನೆ ಸಾಲಿನ ಏ‍ಪ್ರಿಲ್‌– ಫೆಬ್ರುವರಿ ಅವಧಿಯಲ್ಲಿ ₹ 20 ಸಾವಿರ ಕೋಟಿಗಳಷ್ಟು ಜಿಎಸ್‌ಟಿ ವಂಚಿಸಿರುವುದು ಪತ್ತೆಯಾಗಿದೆ. ಇದರಲ್ಲಿ ₹ 10 ಸಾವಿರ ಕೋಟಿಗಳಷ್ಟು ಮೊತ್ತದ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಉದ್ದಿಮೆ – ವಹಿವಾಟು ಸಮುದಾಯದಲ್ಲಿ ಶೇ 5 ರಿಂದ ಶೇ 10ರಷ್ಟು ಜನರು ಮಾತ್ರ ತೆರಿಗೆ ತಪ್ಪಿಸುವ ವಂಚನೆ ಕೃತ್ಯ ಎಸಗಿ ಇಡೀ ಉದ್ಯಮಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ.

‘ನಮ್ಮಲ್ಲಿ ಅತ್ಯಂತ ಬಡವರು ಮತ್ತು ಅತಿ ಶ್ರೀಮಂತರೂ ಇದ್ದಾರೆ. ಹೀಗಾಗಿ ಒಂದೇ ಹಂತದ ಜಿಎಸ್‌ಟಿ ದರಗಳನ್ನು ಜಾರಿಗೆ ತರುವುದು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ವಿವಿಧ ಹಂತದ ಜಿಎಸ್‌ಟಿ ದರಗಳು ಇನ್ನಷ್ಟು ವಿಲೀನಗೊಳ್ಳಲಿವೆ. ಸದ್ಯದ ಐದು ಹಂತದ ದರಗಳು ಎರಡು ಅಥವಾ ಮೂರು ದರಗಳಿಗೆ ಇಳಿಕೆಯಾಗಲಿವೆ’ ಎಂದು ಜೋಸೆಫ್‌ ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌ ಸಭೆ: ಜಿಎಸ್‌ಟಿ ದರ ತಗ್ಗಿಸಿದ ನಂತರ ಉದ್ಭವಿಸಲಿರುವ ಪರಿಸ್ಥಿತಿ ತಿಳಿದುಕೊಳ್ಳಲು ರಿಯಲ್‌ ಎಸ್ಟೇಟ್‌ ವಲಯದ ಪ್ರತಿನಿಧಿಗಳ ಜತೆ ಶೀಘ್ರದಲ್ಲಿಯೇ ಸಭೆ ಕರೆಯಲು ನಿರ್ಧರಿಸಲಾಗಿದೆ.

ಭಾನುವಾರ ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿಯು, ನಿರ್ಮಾಣ ಹಂತದಲ್ಲಿ ಇರುವ ಗೃಹ ನಿರ್ಮಾಣ ಯೋಜನೆಗಳಿಗೆ ಜಿಎಸ್‌ಟಿ ದರವನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಿದೆ. ಕೈಗೆಟುಕುವ ಮನೆಗಳಿಗೆ ಇದ್ದ ಶೇ 8ರಷ್ಟು ತೆರಿಗೆಯನ್ನು ಈಗ ಶೇ 1ರಷ್ಟಕ್ಕೆ ಇಳಿಸಲಾಗಿದೆ. ಹೊಸ ತೆರಿಗೆ ವ್ಯವಸ್ಥೆಯಡಿ, ಕಟ್ಟಡ ನಿರ್ಮಾಣಗಾರರು ಹುಟ್ಟುವಳಿ ತೆರಿಗೆ ಜಮೆ (ಐಟಿಸಿ) ಪ್ರಯೋಜನ ಕೇಳಲು ಅವಕಾಶ ಇರುವುದಿಲ್ಲ.

‘ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗಳಲ್ಲಿ ಈಗಾಗಲೇ ಪೂರ್ಣಗೊಂಡಿರುವ ಫ್ಲ್ಯಾಟ್‌ಗಳು ಇನ್ನೂ ಮಾರಾಟಗೊಂಡಿರದ ಪ್ರಕರಣಗಳಲ್ಲಿ, ಕಟ್ಟಡ ನಿರ್ಮಾಣಗಾರರಿಗೆ ‘ಐಟಿಸಿ’ ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ರೆವಿನ್ಯೂ ಇಲಾಖೆಯು ಯಾವುದೇ ರಿಯಾಯ್ತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಈ ಬೇಡಿಕೆಯನ್ನು ನಗರಾಭಿವೃದ್ಧಿ ಸಚಿವಾಲಯದ ಮುಂದೆ ಇಡಬೇಕು’ ಎಂದೂ ಜೋಸೆಫ್‌ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಅಸೋಚಾಂ) ಇಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT