ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಚ್ಚು ಸಾಲ’ದಲ್ಲಿ ಅದಾನಿ ಸಮೂಹ: ಕ್ರೆಡಿಟ್‌ಸೈಟ್ಸ್‌ ಎಚ್ಚರಿಕೆ

Last Updated 23 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತ್ಯಂತ ಶ್ರೀಮಂತ, ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಸಮೂಹವು ‘ಹೆಚ್ಚು ಸಾಲದಲ್ಲಿದೆ’ ಎಂದು ಫಿಚ್ ಸಮೂಹದ ಅಂಗಸಂಸ್ಥೆ ಕ್ರೆಡಿಟ್‌ಸೈಟ್ಸ್‌ ವರದಿ ಹೇಳಿದೆ. ಸಮೂಹವು ಹಾಲಿ ಹಾಗೂ ಹೊಸ ವಹಿವಾಟುಗಳಿಗೆ ಹೂಡಿಕೆ ಮಾಡಲು ಸಾಲವನ್ನು ಮುಖ್ಯವಾಗಿ ಬಳಸುತ್ತಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.

‘ಹೆಚ್ಚು ಮಹತ್ವಾಕಾಂಕ್ಷೆಯ, ಸಾಲದ ಹಣದಲ್ಲಿ ನಡೆಯುವ ಬೆಳವಣಿಗೆ ಯೋಜನೆಗಳು ಕಾಲಕ್ರಮೇಣ ಭಾರಿ ಸಾಲದ ಸುಳಿಗೆ ಸಿಲುಕಬಹುದು. ಅತ್ಯಂತ ನಕಾರಾತ್ಮಕ ಸಂದರ್ಭದಲ್ಲಿ ಮಾತ್ರ ಹೀಗಾಗಬಹುದು’ ಎಂದು ವರದಿಯಲ್ಲಿ ತಿಳಿಸಲಾಗಿದೆ.

1980ರ ದಶಕದಲ್ಲಿ ಸರಕುಗಳ ವರ್ತಕ ಆಗಿ ಆರಂಭವಾದ ಅದಾನಿ ಸಮೂಹವು ಈಗ ಗಣಿಗಾರಿಕೆ, ಬಂದರು, ವಿದ್ಯುತ್ ಉತ್ಪಾದನೆ, ವಿಮಾನ ನಿಲ್ದಾಣ ನಿರ್ವಹಣೆ, ದತ್ತಾಂಶ ಕೇಂದ್ರ, ರಕ್ಷಣೆಯಂತಹ ಕ್ಷೇತ್ರಗಳಲ್ಲಿಯೂ ಚಾಚಿಕೊಂಡಿದೆ. ಈಚೆಗೆ ಕಂಪನಿಯು ಸಿಮೆಂಟ್ ಉತ್ಪಾದನೆ ವಲಯವನ್ನೂ ಪ್ರವೇಶಿಸಿದೆ. ಸಮೂಹದ ಬಹುತೇಕ ವಿಸ್ತರಣಾ ಚಟುವಟಿಕೆಗಳು ಸಾಲವಾಗಿ ಪಡೆದ ಹಣವನ್ನು ಬಳಕೆ ಮಾಡಿಕೊಂಡಿವೆ.

‘ಅದಾನಿ ಸಮೂಹವು ಹೊಸ ಮತ್ತು ನೇರವಾಗಿ ಸಂಬಂಧ ಇಲ್ಲದ ವಹಿವಾಟುಗಳಿಗೆ ವಿಸ್ತರಿಸಿಕೊಳ್ಳುತ್ತಿದೆ. ಈ ವಹಿವಾಟುಗಳು ಹೆಚ್ಚಿನ ಬಂಡವಾಳ ಬಯಸುತ್ತವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಅದಾನಿ ಸಮೂಹದ ಆರು ಕಂಪನಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿವೆ. ಈ ಆರು ಕಂಪನಿಗಳ ಒಟ್ಟು ಸಾಲವು ಈ ವರ್ಷದ ಮಾರ್ಚ್‌ 31ಕ್ಕೆ ₹ 2.30 ಲಕ್ಷ ಕೋಟಿ ಆಗಿತ್ತು. ಕಂಪನಿಗಳ ಬಳಿ ಇರುವ ನಗದನ್ನು ಪರಿಗಣಿಸಿದರೆ, ನಿವ್ವಳ ಸಾಲದ ಮೊತ್ತವು ₹ 1.72 ಲಕ್ಷ ಕೋಟಿ ಆಗುತ್ತದೆ.

ಸಮೂಹದ ವಿಸ್ತರಣಾ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದಾಗಿ ವರದಿಯು ತಿಳಿಸಿದೆ. ಅದಾನಿ ಸಮೂಹವು ದೇಶದ ಮೂರನೆಯ ಅತಿದೊಡ್ಡ ಉದ್ಯಮ ಸಮೂಹ. ಸಮೂಹದ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 15.97 ಲಕ್ಷ ಕೋಟಿಗಿಂತ ಹೆಚ್ಚು.

ಈಚಿನ ವರ್ಷಗಳಲ್ಲಿ ಅದಾನಿ ಸಮೂಹವು ಹಾಲಿ ವಹಿವಾಟುಗಳನ್ನು ವಿಸ್ತರಿಸುವ ಹಾಗೂ ಹೊಸ ಉದ್ದಿಮೆಗಳನ್ನು ಸ್ಥಾಪಿಸುವ ಕೆಲಸವನ್ನು ತೀವ್ರವಾಗಿ ಮಾಡುತ್ತಿದೆ. ‘ನಾವು, ಇತರ ಹೂಡಿಕೆದಾರರು ಸಮೂಹದ ತೀವ್ರಗತಿಯ ಬೆಳವಣಿಗೆ ಮತ್ತು ಸಾಲದ ಮಟ್ಟದ ಬಗ್ಗೆ ಕಳವಳ ಹೊಂದಿದ್ದೇವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಪೂರ್ವ ಅನುಭವ ಇಲ್ಲದ ತಾಮ್ರ ಸಂಸ್ಕರಣೆ, ‍ಪೆಟ್ರೊಕೆಮಿಕಲ್ಸ್, ದೂರಸಂಪರ್ಕ, ಅಲ್ಯುಮಿನಿಯಂ ಉತ್ಪಾದನೆಯಂತಹ ವಹಿವಾಟುಗಳಲ್ಲಿಯೂ ಸಮೂಹವು ವಿಸ್ತರಣೆ ನಡೆಸುತ್ತಿದೆ. ಈ ವಹಿವಾಟುಗಳು ಆರಂಭಿಕ ವರ್ಷಗಳಲ್ಲಿ ಲಾಭ ತಂದುಕೊಡುವುದಿಲ್ಲವಾದ ಕಾರಣ, ಇಲ್ಲಿ ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯ ತಕ್ಷಣಕ್ಕೆ ಬರುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸಮೂಹದ ಆಡಳಿತದ ಬಗ್ಗೆ ಉಲ್ಲೇಖಿಸಿರುವ ವರದಿಯು, ಎಲ್ಲ ಕಂಪನಿಗಳ ಆಡಳಿತ ಮಂಡಳಿಗಳಲ್ಲಿಯೂ ಪ್ರವರ್ತಕರ ಕುಟುಂಬದ ಸದಸ್ಯರು ಇದ್ದಾರೆ ಎಂದಿದೆ. ಗೌತಮ್ ಅದಾನಿ ಅವರು ಸಮೂಹದ, ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಆರೂ ಕಂಪನಿಗಳ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಅವರ ಕುಟುಂಬದ ಸದಸ್ಯರೂ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಸಹೋದರ ರಾಜೇಶ್ ಅದಾನಿ, ಮಗ ಕರಣ್ ಅದಾನಿ ಬೇರೆ ಬೇರೆ ಆಡಳಿತ ಮಂಡಳಿಗಳಲ್ಲಿ ಇದ್ದಾರೆ.

‘ಗೌತಮ್ ಅದಾನಿ ಅವರು ಹೊಂದಿರುವ ಔದ್ಯಮಿಕ ದೂರದೃಷ್ಟಿಯು ಪ್ರಶಂಸೆಗೆ ಅರ್ಹವಾಗಿದೆ. ಆದರೆ ಅವರ ಅನುಪಸ್ಥಿತಿಯಲ್ಲಿ ಸಮೂಹದ ಕಂಪನಿಗಳಲ್ಲಿನ ಹಿರಿಯ ಶ್ರೇಣಿಯ ಆಡಳಿತ ನಿರ್ವಹಣೆಯ ಸಾಮರ್ಥ್ಯವು ಸಾಕಾಗಲಿಕ್ಕಿಲ್ಲ’ ಎಂದು ಕ್ರೆಡಿಟ್‌ಸೈಟ್ಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT