ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ

ದೇಶದಲ್ಲಿ ಐದು ದಿನಕ್ಕೆ ಒಬ್ಬ ಶತಕೋಟ್ಯಧಿಪತಿ ಸೃಷ್ಟಿ
Published 29 ಆಗಸ್ಟ್ 2024, 16:11 IST
Last Updated 29 ಆಗಸ್ಟ್ 2024, 16:11 IST
ಅಕ್ಷರ ಗಾತ್ರ

ಮುಂಬೈ: ಹುರುನ್‌ ಇಂಡಿಯಾ ಗುರುವಾರ ಬಿಡುಗಡೆ ಮಾಡಿರುವ 2024ರ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಅವರನ್ನು ಹಿಂದಿಕ್ಕಿ, ಉದ್ಯಮಿ ಗೌತಮ್‌ ಅದಾನಿ ಅಗ್ರಸ್ಥಾನಕ್ಕೇರಿದ್ದಾರೆ. ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ ₹11.6 ಲಕ್ಷ ಕೋಟಿ ದಾಟಿದೆ.

ಒಂದೇ ವರ್ಷದ ಅವಧಿಯಲ್ಲಿ ದೇಶದ ಶತಕೋಟ್ಯಧಿಪತಿಗಳ ಪಟ್ಟಿಗೆ ಹೊಸದಾಗಿ 272 ಮಂದಿ ಸೇರ್ಪಡೆಯಾಗಿದ್ದು, ಈ ಸಂಖ್ಯೆ 334ಕ್ಕೆ ಮುಟ್ಟಿದೆ. ಇವರ ಒಟ್ಟು ಸಂಪತ್ತು ₹159 ಲಕ್ಷ ಕೋಟಿಯಾಗಿದ್ದು, ಇದು ದೇಶದ ಜಿಡಿಪಿ ಗಾತ್ರದ ಅರ್ಧಕ್ಕಿಂತಲೂ ಹೆಚ್ಚಿದೆ.

ಭಾರತದಲ್ಲಿ 2023ರಲ್ಲಿ ಐದು ದಿನಕ್ಕೆ ಒಬ್ಬರು ಶತಕೋಟ್ಯಧಿಪತಿಯಾಗಿ ಹೊರಹೊಮ್ಮಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. 

ಷೇರು ಮಾರುಕಟ್ಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು ಅಮೆರಿಕದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್‌ ರಿಸರ್ಚ್‌ 2023ರ ಜನವರಿಯಲ್ಲಿ ವರದಿ ಪ್ರಕಟಿಸಿತ್ತು. ಇದರಿಂದ ಅದಾನಿ ಸಂಪತ್ತು ₹4.74 ಲಕ್ಷ ಕೋಟಿ (ಶೇ 57ರಷ್ಟು) ಕರಗಿತ್ತು. ಆ ವೇಳೆ ₹8.08 ಲಕ್ಷ ಕೋಟಿ ಸಂಪತ್ತು ಹೊಂದಿದ್ದ ಮುಕೇಶ್‌ ಅಂಬಾನಿ ಮೊದಲ ಸ್ಥಾನಕ್ಕೇರಿದ್ದರು.

ಈ ವರ್ಷ ಎರಡನೇ ಸ್ಥಾನಕ್ಕೆ ಕುಸಿದಿರುವ ರಿಲಯನ್ಸ್ ಇಂಡಸ್ಟ್ರಿಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಸಂಪತ್ತಿನಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. ಒಟ್ಟು  ₹10.14 ಲಕ್ಷ ಕೋಟಿ ಮೌಲ್ಯದ ಸಂಪತ್ತಿನ ಒಡೆತನ ಹೊಂದಿದ್ದಾರೆ.

ಉಳಿದ ಸ್ಥಾನದಲ್ಲಿ ಯಾರಿದ್ದಾರೆ?

ಎಚ್‌ಸಿಎಲ್‌ ಮುಖ್ಯಸ್ಥ ಶಿವ ನಾಡರ್‌ (3ನೇ ಸ್ಥಾನ), ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಸೈರಸ್ ಪೂನಾವಾಲಾ (4ನೇ ಸ್ಥಾನ) ಹಾಗೂ ಸನ್‌ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್‌ ಸಾಂಘ್ವಿ (5ನೇ ಸ್ಥಾನ) ಆ ನಂತರದ ಸ್ಥಾನದಲ್ಲಿದ್ದಾರೆ.‌

ಸ್ವಂತ ಪರಿಶ್ರಮದಿಂದ ಸಿರಿವಂತರಾದ ಮಹಿಳೆಯರ ಪಟ್ಟಿಯಲ್ಲಿರುವ ಜೋಹೊ ಕಂಪನಿಯ ರಾಧಾ ವೆಂಬು ಅವರು, ₹47,500 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಜೆಪ್ಟೊ ಕಂಪನಿಯ ಸಹ ಸಂಸ್ಥಾಪಕರಾದ ಕೈವಲ್ಯ ವೊಹ್ರಾ (21ನೇ ಸ್ಥಾನ) ಮತ್ತು ಆದಿತ್ ಪಲಿಚ (22ನೇ ಸ್ಥಾನ) ಅವರು ಕಿರಿಯ ವಯಸ್ಸಿನ ಸಿರಿವಂತರಾಗಿದ್ದಾರೆ. ಈ ಇಬ್ಬರು ಕ್ರಮವಾಗಿ ₹3,600 ಹಾಗೂ ₹4,300 ಕೋಟಿ ಸಂಪತ್ತು ಹೊಂದಿದ್ದಾರೆ. 

₹1 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿದದವರ ಪಟ್ಟಿಗೆ ಹೊಸದಾಗಿ 220 ವ್ಯಕ್ತಿಗಳು ಸೇರ್ಪಡೆಯಾಗಿದ್ದಾರೆ. ದೇಶದಲ್ಲಿ ಇಷ್ಟು ಮೊತ್ತದ ಆಸ್ತಿ ಹೊಂದಿದವರ ಸಂಖ್ಯೆ 1,539 ಆಗಿದೆ. 

ದಶಕದ ಹಿಂದಿದ್ದ ಅದಾನಿ ಸಂಪತ್ತು ಎಷ್ಟು?

2014ರಲ್ಲಿ ಪ್ರಕಟಗೊಂಡಿದ್ದ ಹುರುನ್‌ ವರದಿ ಅನ್ವಯ ಗೌತಮ್‌ ಅದಾನಿ ಅವರ ಸಂಪತ್ತು ₹44 ಸಾವಿರ ಕೋಟಿ ಇತ್ತು. ಆಗ ಅವರು ದೇಶದ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಅದಾನಿ ಸಂಪತ್ತು ಶೇ 95ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಶಾರುಖ್‌ ಖಾನ್‌ ₹7300 ಕೋಟಿ ಒಡೆಯ

ಬಾಲಿವುಡ್‌ ನಟ ಶಾರುಖ್‌ ಖಾನ್‌ ಮೊದಲ ಬಾರಿಗೆ ಶತಕೋಟ್ಯಧಿಪತಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅವರು ಒಟ್ಟು  ₹7300 ಕೋಟಿ ಸಂಪತ್ತು ಹೊಂದಿದ್ದಾರೆ. ಬಾಲಿವುಡ್‌ ನಟಿ ಜೂಹಿ ಚಾವ್ಲಾ ₹4600 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. 16 ವೃತ್ತಿಪರರು ಕೂಡ ಶ್ರೀಮಂತರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಈ ಪೈಕಿ ಅರಿಸ್ಟಾ ನೆಟ್‌ವರ್ಕ್ಸ್‌ನ ಮುಖ್ಯ ಕಾರ್ಯ ನಿರ್ವಾಹಕಿ ಜಯಶ್ರೀ ಉಲ್ಲಾಳ್‌ ₹32100 ಕೋಟಿ ಆಸ್ತಿ ಹೊಂದಿದ್ದಾರೆ. ಡಿ–ಮಾರ್ಟ್‌ನ ಮುಖ್ಯ ಕಾರ್ಯ ನಿರ್ವಾಹಕ ಇಗ್ನೇಷಿಯಸ್ ನವಿಲ್ ನೊರೊನ್ಹಾ ಅವರು ₹6900 ಕೋಟಿ ಸಂಪತ್ತು ಹೊಂದಿದ್ದಾರೆ.

ಹತ್ತು ಶ್ರೀಮಂತರು ಹೆಸರು : ಆಸ್ತಿ ಮೌಲ್ಯ(₹ ಲಕ್ಷ ಕೋಟಿಗಳಲ್ಲಿ)

ಗೌತಮ್‌ ಅದಾನಿ : ₹11.61

ಮುಕೇಶ್ ಅಂಬಾನಿ : 10.14

ಶಿವ ನಾಡಾರ್ : 3.14

ಸೈರಸ್ ಪೂನಾವಾಲಾ : 2.89

ದಿಲೀಪ್‌ ಶಾಂಘ್ವಿ : 2.49

ಕುಮಾರ ಮಂಗಲಂ ಬಿರ್ಲಾ: 2.35

ಗೋಪಿಚಂದ್ ಹಿಂದುಜಾ : 1.92

ರಾಧಾಕೃಷ್ಣ ಧಮಾನಿ :1.90

ಅಜೀಂ ಪ್ರೇಮ್‌ಜೀ :1.90

ನೀರಜ್‌ ಬಜಾಜ್‌ : 1.62

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT