ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದ ಸುಳಿಗೆ ದೂರಸಂಪರ್ಕ: ವೊಡಾಫೋನ್‌–ಐಡಿಯಾ ಮುಚ್ಚುವ ಭೀತಿ

Last Updated 20 ಫೆಬ್ರುವರಿ 2020, 3:13 IST
ಅಕ್ಷರ ಗಾತ್ರ
ADVERTISEMENT
""
""

ದೂರಸಂಪರ್ಕ ಕ್ಷೇತ್ರವು ಭಾರತದ ಉದ್ಯಮ ಕ್ಷೇತ್ರದ ಅತಿದೊಡ್ಡ ಬಿಕ್ಕಟ್ಟಿನ ಅಂಚಿನಲ್ಲಿದೆ. ಬೃಹತ್‌ ಕಂಪನಿಗಳು ದೊಡ್ಡ ಮೊತ್ತದ ನಷ್ಟದಲ್ಲಿವೆ. ಹೊಂದಾಣಿಕೆ ಮಾಡಿದ ನಿವ್ವಳ ವರಮಾನದ ಒಂದು ಭಾಗವನ್ನು ಸರ್ಕಾರಕ್ಕೆ ತಕ್ಷಣವೇ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಇಡೀ ಕ್ಷೇತ್ರವೇ ತತ್ತರಿಸಿದೆ. ದೂರಸಂಪರ್ಕ ಕ್ಷೇತ್ರ ಮತ್ತು ವಿಶೇಷವಾಗಿ ವೊಡಾಫೋನ್‌–ಐಡಿಯಾ ಉಳಿಯಬೇಕಿದ್ದರೆ ಸರ್ಕಾರದ ಮಧ್ಯಪ್ರವೇಶ ಅಗತ್ಯ ಎಂದು ತಜ್ಞರು ಹೇಳುತ್ತಿದ್ದಾರೆ. ಅದೇನೇ ಇದ್ದರೂ, ಈ ಬಿಕ್ಕಟ್ಟಿನ ಹೊರೆ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವೆಯ ಗ್ರಾಹಕರ ಮೇಲೆ ಬೀಳುವುದರಲ್ಲಿ ಅನುಮಾನ ಇಲ್ಲ. ಈಗ, ಅತ್ಯಂತ ಕಡಿಮೆ ದರದ ಈ ಸೇವೆಗಳು ಮುಂದಿನ ದಿನಗಳಲ್ಲಿ ಭಾರಿ ದುಬಾರಿ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ

***

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮಾತ್ರವಲ್ಲ, ದೇಶದ ದೂರಸಂಪರ್ಕ ಕ್ಷೇತ್ರದ ಹಲವು ಖಾಸಗಿ ಕಂಪನಿಗಳೂ ಕಳೆದ ವರ್ಷ ದಾಖಲೆ ಪ್ರಮಾಣದ ನಷ್ಟ ಅನುಭವಿಸಿವೆ. ಹೊಂದಾಣಿಕೆ ಮಾಡಿದ ಒಟ್ಟು ವರಮಾನಕ್ಕೆ (ಎಜಿಆರ್‌) ಸಂಬಂಧಿಸಿದಂತೆ ಕಳೆದ ವರ್ಷ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು, ಈ ಕಂಪನಿಗಳನ್ನು ಸಂಕಷ್ಟದ ಹೊಸ್ತಿಲಿಗೆ ತಂದು ನಿಲ್ಲಿಸಿದೆ.

ದೂರಸಂಪರ್ಕ ಸೇವಾ ಕಂಪನಿಗಳು ಕೋರ್ಟ್‌ ತೀರ್ಪಿನ ಪ್ರಕಾರ ಸರ್ಕಾರಕ್ಕೆ ಪರವಾನಗಿ ಶುಲ್ಕ ಹಾಗೂ ತರಂಗಾಂತರ ಬಳಕೆ ಶುಲ್ಕದ ರೂಪದಲ್ಲಿ ಕೋಟ್ಯಂತರ ರೂಪಾಯಿಯನ್ನು ತೆರಬೇಕಾಗಿದೆ. ಎಜಿಆರ್‌ ಮೌಲ್ಯದ ಆಧಾರದಲ್ಲಿ ಒಟ್ಟು ಮೊತ್ತ ನಿರ್ಧಾರವಾಗುತ್ತದೆ. ಶುಲ್ಕ, ಅದರ ಬಡ್ಡಿ ಮತ್ತು ದಂಡ ಎಲ್ಲಾ ಸೇರಿ ಕಂಪನಿಗಳು ಸರ್ಕಾರಕ್ಕೆ ಒಟ್ಟಾರೆ ಸುಮಾರು ₹1.47 ಲಕ್ಷ ಕೋಟಿ ಪಾವತಿಸಬೇಕಾಗಿದೆ.

‘ಎಜಿಆರ್‌’ನಿಂದ ಗೊಂದಲ
ಭಾರತದಲ್ಲಿ ಹಲವು ದಶಕಗಳ ಕಾಲ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಏಕಸ್ವಾಮ್ಯವಿತ್ತು. 1994ರಲ್ಲಿ ರಾಷ್ಟ್ರೀಯ ದೂರಸಂಪರ್ಕ ನೀತಿಯೊಂದನ್ನು ರೂಪಿಸಿದ ಸರ್ಕಾರವು ಈ ಕ್ಷೇತ್ರವನ್ನು ಉದಾರೀಕರಣಗೊಳಿಸಿ, ಖಾಸಗಿ ಕಂಪನಿಗಳಿಗೂ ಸೇವೆ ಒದಗಿಸಲು ಪರವಾನಗಿ ನೀಡಲಾರಂಭಿಸಿತು. ಸೇವೆ ಒದಗಿಸಲು ಬರುವ ಪ್ರತಿ ಕಂಪನಿಯಿಂದಲೂ ನಿಗದಿತ ಪರವಾನಗಿ ಶುಲ್ಕವನ್ನು ಪಡೆಯಲಾಗುತ್ತಿತ್ತು.

‘ಈ ಶುಲ್ಕವು ವಿಪರೀತವಾಗಿದೆ, ಎಲ್ಲಾ ಕಂಪನಿಗಳಿಗೂ ಒಂದೇ ರೀತಿಯ ಶುಲ್ಕ ವಿಧಿಸುವುದು ಸರಿಯಲ್ಲ’ ಎಂಬ ಆಕ್ಷೇಪಗಳು ಕೇಳಿಬಂದ ಕಾರಣ 1999ರಲ್ಲಿ ಸರ್ಕಾರವು ‘ವರಮಾನ ಹಂಚಿಕೆ ಶುಲ್ಕ’ ಮಾದರಿಯನ್ನು ಪರಿಚಯಿಸಿತು. ಇದಕ್ಕೆ ಕಂಪನಿಗಳೂ ಒಪ್ಪಿಕೊಂಡವು.

ಹೊಸ ನಿಯಮಾವಳಿಯ ಅಡಿ, ದೂರಸಂಪರ್ಕ ಕಂಪನಿಗಳು ತಮ್ಮ ಎಜಿಆರ್‌ನ ನಿಗದಿತ ಪ್ರಮಾಣವನ್ನು ವಾರ್ಷಿಕ ಶುಲ್ಕ ಹಾಗೂ ತರಂಗಾಂತರ ಬಳಕೆ ಶುಲ್ಕದ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕು. ಒಂದು ಕಂಪನಿಯ ಎಜಿಆರ್‌ ಎಷ್ಟು ಎಂಬುದನ್ನು ದೂರಸಂಪರ್ಕ ಇಲಾಖೆ ಹಾಗೂ ಆಯಾ ಕಂಪನಿಗಳು ಸೇರಿ ನಿರ್ಧರಿಸಬೇಕು. ಶೇ 3ರಷ್ಟು ಪರವಾನಗಿ ಶುಲ್ಕ ಹಾಗೂ ಶೇ 5ರಷ್ಟು ತರಂಗಾಂತರ ಬಳಕೆ ಶುಲ್ಕ ಎಂದು ಒಟ್ಟು ಶೇ 8ರಷ್ಟನ್ನು ಶುಲ್ಕದ ರೂಪದಲ್ಲಿ ಪಡೆಯಲು ನಿರ್ಧರಿಸಲಾಗಿತ್ತು.

ಆದರೆ, ಎಜಿಆರ್‌ನ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆ ಹಾಗೂ ಖಾಸಗಿ ಕಂಪನಿಗಳ ಮಧ್ಯೆ ವಿವಾದ ಹುಟ್ಟಿಕೊಂಡಿತು. ಕಂಪನಿಗಳ ದೂರಸಂಪರ್ಕ ಮತ್ತು ದೂರಸಂಪರ್ಕಯೇತರ ವರಮಾನವನ್ನು (ಕಡಿತಗಳನ್ನು ಪರಿಗಣಿಸದೆ) ಎಜಿಆರ್‌ ಎಂದು ಪರಿಗಣಿಸುವುದಾಗಿ ದೂರಸಂಪರ್ಕ ಇಲಾಖೆ ವಾದಿಸಿತು. ಆದರೆ ಪ್ರಮುಖ ಸೇವೆಗಳಿಂದ ಬರುವ ಆದಾಯವನ್ನು ಮಾತ್ರ ಎಜಿಆರ್‌ ಒಳಗೊಂಡಿರಬೇಕು, ಲಾಭಾಂಶ, ಬಡ್ಡಿ ಆದಾಯ, ಯಾವುದೇ ಹೂಡಿಕೆ ಅಥವಾ ಸ್ಥಿರ ಆಸ್ತಿಗಳ ಮಾರಾಟದಿಂದ ಬಂದ ಲಾಭವನ್ನು ಪರಿಗಣಿಸಬಾರದು ಎಂದು ಕಂಪನಿಗಳು ವಾದಿಸಿದವು. ಸಮಸ್ಯೆ ಇತ್ಯರ್ಥಕ್ಕಾಗಿ ದೂರಸಂಪರ್ಕ ವಿವಾದ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿಯ (ಟಿಡಿಎಸ್‌ಎಟಿ) ಮೊರೆ ಹೋದವು.

2015ರಲ್ಲಿ ಟಿಡಿಎಸ್‌ಎಟಿಯು, ಸರ್ಕಾರ ವಿಧಿಸಿದ ಶುಲ್ಕಕ್ಕೆ ತಡೆಯಾಜ್ಞೆ ನೀಡಿ, ಬಾಡಿಗೆ, ಸ್ಥಿರ ಆಸ್ತಿಗಳ ಮಾರಾಟದ ಲಾಭ, ಲಾಭಾಂಶ, ಬಡ್ಡಿ ಮತ್ತು ಇತರ ಮೂಲಗಳಿಂದ ಬಂದ ಆದಾಯವನ್ನು ಎಜಿಆರ್‌ ಒಳಗೊಂಡಿರಬಾರದು ಎಂದಿತು. ಇದು ಖಾಸಗಿ ಸಂಸ್ಥೆಗಳಿಗೆ ತಾತ್ಕಾಲಿಕ ಸಾಂತ್ವನ ನೀಡಿತು.

ಆದರೆ 2019ರ ಅಕ್ಟೋಬರ್‌ 24ರಂದು ಸುಪ್ರೀಂ ಕೋರ್ಟ್‌, ಎಜಿಆರ್‌ಗೆ ಸಂಬಂಧಿಸಿದಂತೆ ಟಿಡಿಎಸ್‌ಎಟಿಯ ವ್ಯಾಖ್ಯಾನವನ್ನು ತಳ್ಳಿಹಾಕಿ, ದೂರಸಂಪರ್ಕ ಇಲಾಖೆಯು ನೀಡಿದ್ದ ವ್ಯಾಖ್ಯಾನವನ್ನು ಎತ್ತಿ ಹಿಡಿಯಿತು. ಪರಿಣಾಮ ಈಗ ಕಂಪನಿಗಳು ಭಾರಿ ಪ್ರಮಾಣದ ಶುಲ್ಕವನ್ನು ಪಾವತಿಸಬೇಕಾಗಿ ಬಂದಿದೆ.

ತೀರ್ಪಿನ ಪರಿಣಾಮವೇನು?
ನೇರವಾಗಿ ಹೇಳುವುದಾದರೆ ವಿವಿಧ ಕಂಪನಿಗಳಿಂದ ಶುಲ್ಕದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1.47 ಲಕ್ಷ ಕೋಟಿ ಬರಲಿದೆ. ಸರ್ಕಾರಕ್ಕೆ ಇದು ಖುಷಿಕೊಡುವ ವಿಚಾರ. ಆದರೆ ದೂರಸಂಪರ್ಕ ಕಂಪನಿಗಳಿಗೆ ಇದರಿಂದ ಭಾರಿ ಹೊರೆಯಾಗಿದೆ.

ದೂರಸಂಪರ್ಕ ಕ್ಷೇತ್ರಕ್ಕೆ ಹಲವು ಕಂಪನಿಗಳ ಪ್ರವೇಶವಾಗಿದ್ದರಿಂದ ವಿಪರೀತ ಸ್ಪರ್ಧೆ ಉಂಟಾಗಿ, ಕಂಪನಿಗಳ ವರಮಾನಕ್ಕೆ ಕತ್ತರಿ ಬಿದ್ದಿದೆ. ಕೋರ್ಟ್‌ ತೀರ್ಪಿನಿಂದ ಕಂಪನಿಗಳ ಮೇಲಿನ ಹೊರೆ ಇನ್ನಷ್ಟು ಹೆಚ್ಚಾದಂತಾಗಿದೆ. ಕೆಲವು ಕಂಪನಿಗಳು ಶೀಘ್ರದಲ್ಲೇ ನಷ್ಟ ದಾಖಲಿಸುವ ಸಾಧ್ಯತೆ ಇದೆ. ನಿವ್ವಳ ಲಾಭದಲ್ಲಿ ಕಡಿತ ಅಥವಾ ಆರ್ಥಿಕ ಅಸ್ಥಿರತೆಯನ್ನು ಎದುರಿಸಲು ಸಹ ಕಂಪನಿಗಳು ಸಿದ್ಧವಾಗಬೇಕಾಗಬಹುದು.

ಶುಲ್ಕದಲ್ಲಿ ರಿಯಾಯಿತಿ ನೀಡದಿದ್ದರೆ ವಹಿವಾಟನ್ನೇ ಸ್ಥಗಿತಗೊಳಿಸಬೇಕಾಗಬಹುದು ಎಂಬ ಭೀತಿಯನ್ನು ಕೆಲವು ಕಂಪನಿಗಳು ಈಗಾಗಲೇ ವ್ಯಕ್ತಪಡಿಸಿವೆ. ಬಳಕೆದಾರರ ದೃಷ್ಟಿಯಿಂದಲೂ ಇದು ಆತಂಕದ ವಿಚಾರವೇ.

ಬ್ಯಾಂಕ್ ಖಾತರಿ ಹಣ ಮುಟ್ಟುಗೋಲು?
ವೊಡಾಫೋನ್ ಐಡಿಯಾ ಸಂಸ್ಥೆಯು ದೂರಸಂಪರ್ಕ ಇಲಾಖೆಗೆ ಪಾವತಿಸಬೇಕಿರುವ ₹53,039 ಕೋಟಿ ಪೈಕಿ ₹2,500 ಕೋಟಿ ಪಾವತಿಸಿದೆ. ಮಾರ್ಚ್ 17ರ ಒಳಗೆ ಬಾಕಿ ಹಣ ಪಾವತಿಸುವ ಅನಿವಾರ್ಯಕ್ಕೆ ಸಿಲುಕಿದೆ. ಒಂದು ವೇಳೆ, ನಿಗದಿತ ಅವಧಿಯಲ್ಲಿ ಬಾಕಿ ಹಣ ಪಾವತಿಸದಿದ್ದಲ್ಲಿ, ದೂರಸಂಪರ್ಕ ಕಂಪೆನಿಯು ಇಲಾಖೆಯಲ್ಲಿ ಠೇವಣಿ ಇಟ್ಟಿರುವ ಬ್ಯಾಂಕ್ ಖಾತರಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಇದಕ್ಕೆ ತಡೆ ನೀಡಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

₹7000 ಕೋಟಿ
ದೂರಸಂಪರ್ಕ ಇಲಾಖೆ ಬಳಿಯಿರುವವಿವಿಧ ಟೆಲಿಕಾಂ ಕಂಪನಿಗಳ ಬ್ಯಾಂಕ್ ಖಾತರಿ ಮೊತ್ತ

ಸುಪ್ರೀಂ ಕೋರ್ಟ್ ಹೇಳಿದ್ದೇನು?
₹1.47 ಲಕ್ಷ ಕೋಟಿ ಬಾಕಿ ಪಾವತಿಸುವಂತೆ ಭಾರ್ತಿ ಏರ್‌ಟೆಲ್‌, ವೊಡಾಫೋನ್, ಟಾಟಾ ಟೆಲಿಸರ್ವೀಸಸ್ ಸೇರಿದಂತೆ ವಿವಿಧ ಟೆಲಿಕಾಂ ಕಂಪೆನಿಗಳಿಗೆ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಮಾರ್ಚ್ 17ರ ಗಡುವನ್ನೂ ನೀಡಿತ್ತು. ಈ ಅವಧಿಯಲ್ಲಿ ಬಾಕಿ ಪಾವತಿಸಲು ವಿಫಲವಾದರೆ, ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಖುದ್ದಾಗಿ ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ತಪ್ಪಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದೂ ಎಚ್ಚರಿಸಿತ್ತು.

ಆರ್‌ಬಿಐ ಪರಿಶೀಲನೆ
ದೂರಸಂಪರ್ಕ ಕ್ಷೇತ್ರದ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ. ‘ಬ್ಯಾಂಕಿಂಗ್ ಕ್ಷೇತ್ರದ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದು ಆರ್‌ಬಿಐ ಗವರ್ನರ್ ಶಶಿಕಾಂತ್ ದಾಸ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

ಬಾಕಿ ಎಷ್ಟು?
ಸುಪ್ರೀಂ ಕೋರ್ಟ್‌ನ ಮುಂದಿನ ವಿಚಾರಣೆಯೊಳಗೆ ದೂರಸಂಪರ್ಕ ಕಂಪೆನಿಗಳು ಬಾಕಿ ಹಣವನ್ನು ಪೂರ್ತಿಯಾಗಿ ಪಾವತಿಸಬೇಕಿದೆ. ಒಂದು ವೇಳೆ ವಿಫಲವಾದರೆ, ದೂರಸಂಪರ್ಕ ಇಲಾಖೆಯು ಸಹಜವಾಗಿಯೇ ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ. ಬಾಕಿ ಹಣಕ್ಕೆ ಕಂಪೆನಿಗಳು ಜಿಎಸ್‌ಟಿಯನ್ನೂ ಪಾವತಿಸಬೇಕಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT