ಭಾನುವಾರ, ಜನವರಿ 26, 2020
22 °C

ಅಮೆಜಾನ್‌ ಹೂಡಿಕೆಗೆ ಗೋಯಲ್‌ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ವಹಿವಾಟು ಹೆಚ್ಚಿಸಲು ₹ 7 ಸಾವಿರ ಕೋಟಿ ಮೊತ್ತದ ಹೂಡಿಕೆ ಮಾಡುವ ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ನಿರ್ಧಾರದಿಂದ ಭಾರತಕ್ಕೆ ಪ್ರಯೋಜನವಾಗುವುದಿಲ್ಲ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಪ್ರತಿಕ್ರಿಯಿಸಿದ್ದಾರೆ.

‘ಬಹುರಾಷ್ಟ್ರೀಯ ಇ–ಕಾಮರ್ಸ್‌ ಕಂಪನಿಗಳು ಭಾರತದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೇ ಹೊರತು, ಬಹುಬ್ರ್ಯಾಂಡ್‌ನ ರಿಟೇಲ್‌ ವಹಿವಾಟಿಗೆ ಹಿಂಬಾಗಿಲಿನಿಂದ ಪ್ರವೇಶಿಸಲು ನಿಯಮಗಳಲ್ಲಿನ ಲೋಪಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಹೇಳಿದ್ದಾರೆ.

‘ಮಾರಾಟಗಾರರು ಮತ್ತು ಖರೀದಿದಾರರಿಗೆ ಅಂತರ್ಜಾಲ ತಾಣದಲ್ಲಿ ತಂತ್ರಜ್ಞಾನ ಆಧಾರಿತ ಮಾರುಕಟ್ಟೆ ತಾಣ ಒದಗಿಸುವ ಇ–ಕಾಮರ್ಸ್‌ ಕಂಪನಿಗಳು ಭಾರಿ ನಷ್ಟಕ್ಕೆ ಗುರಿಯಾಗುವುದನ್ನು ಕಂಡಾಗ ಅಚ್ಚರಿಯಾಗುತ್ತದೆ. ನಷ್ಟದ ಮೂಲದ ಬಗ್ಗೆ ಸಂದೇಹಗಳು ಮೂಡುತ್ತವೆ. ಇದಕ್ಕೆ ಉತ್ತರ ಪಡೆಯಬೇಕಾಗಿದೆ’ ಎಂದು ಹೇಳಿದ್ದಾರೆ.

ತಮ್ಮನ್ನು ಭೇಟಿಯಾಗಲು ಅಮೆಜಾನ್‌ ಸಿಇಒ ಜೆಫ್‌ ಬೆಜೊಸ್‌ ಅವರಿಗೆ ಗೋಯಲ್‌ ಅವರು ಇನ್ನೂ ಅವಕಾಶ ನೀಡಿಲ್ಲ.

‘ಸಿಎಐಟಿ’ ವಿರೋಧ:  ಭಾರತದಲ್ಲಿನ ರಿಟೇಲ್‌ ವ್ಯಾಪಾರವನ್ನು ಬಗ್ಗುಬಡಿದು, ಸುಲಿಗೆ ಸ್ವರೂಪದ ಬೆಲೆ ವ್ಯವಸ್ಥೆ ಜಾರಿಗೆ ತರಲು ಮತ್ತು ಭಾರಿ ಬೆಲೆ ಕಡಿತದ ಪ್ರಚಾರಕ್ಕೆ ಅಮೆಜಾನ್‌ ಹಣ ವೆಚ್ಚ ಮಾಡಲಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಟೀಕಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು