ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದುಬಿದ್ದ ಅಮೆಜಾನ್–ಫ್ಯೂಚರ್ ಮಾತುಕತೆ

Last Updated 15 ಮಾರ್ಚ್ 2022, 16:04 IST
ಅಕ್ಷರ ಗಾತ್ರ

ನವದೆಹಲಿ (ರಾಯಿಟರ್ಸ್): ಅಮೆಜಾನ್ ಮತ್ತು ಫ್ಯೂಚರ್ ರಿಟೇಲ್ ನಡುವಿನ ವ್ಯಾಜ್ಯವನ್ನು ಬಗೆಹರಿಸುವ ಉದ್ದೇಶದಿಂದ ನಡೆದ ಮಾತುಕತೆಯು ಮುರಿದುಬಿದ್ದಿದೆ. ಅಮೆಜಾನ್ ಕಂಪನಿಯು ಫ್ಯೂಚರ್ ರಿಟೇಲ್‌ನಿಂದ ₹ 1,527 ಕೋಟಿಯನ್ನು ಕೇಳಿದ್ದು ಇದಕ್ಕೆ ಕಾರಣ ಎಂದು ಮೂಲಗಳು ಹೇಳಿವೆ. ಅಮೆಜಾನ್ ತಾನು ಫ್ಯೂಚರ್ ರಿಟೇಲ್‌ನಲ್ಲಿ ಮಾಡಿದ್ದ ಹೂಡಿಕೆಯಲ್ಲಿ ಇಷ್ಟು ಮೊತ್ತವನ್ನು ವಾಪಸ್ ಕೇಳಿದೆ ಎನ್ನಲಾಗಿದೆ.

ತನ್ನ ಜೊತೆಗಿನ ಕೆಲವು ಒಪ್ಪಂದಗಳ ಉಲ್ಲಂಘನೆ ಆಗಿದೆ ಎಂದು ದೂರಿರುವ ಅಮೆಜಾನ್, ಫ್ಯೂಚರ್ ರಿಟೇಲ್‌ಅನ್ನು ರಿಲಯನ್ಸ್ ಕಂಪನಿಗೆ ಮಾರಾಟ ಮಾಡುವುದನ್ನು ತಡೆದಿದೆ. ಆದರೆ, ತನ್ನ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ ಎಂದು ಫ್ಯೂಚರ್ ರಿಟೇಲ್ ಹೇಳಿದೆ. ಅಮೆಜಾನ್ ಮತ್ತು ಫ್ಯೂಚರ್ ಕಂಪನಿಯ ಪ್ರತಿನಿಧಿಗಳು ಮಾತುಕತೆಗೆ ಒಪ್ಪಿದ ನಂತರದಲ್ಲಿ, ಈ ಎರಡು ಕಂಪನಿಗಳ ನಡುವಿನ ವ್ಯಾಜ್ಯವು ನ್ಯಾಯಾಲಯದ ಹೊರಗಡೆ ಇತ್ಯರ್ಥ ಕಾಣಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ, ಮಾತುಕತೆ ಮುರಿದುಬಿದ್ದಿದೆ ಎಂದು ಎರಡೂ ಕಂಪನಿಗಳು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿವೆ. ಅಮೆಜಾನ್ ಕಂಪನಿಯು ರಿಲಯನ್ಸ್ ಹಾಗೂ ಫ್ಯೂಚರ್ ಸಮೂಹವನ್ನು ಟೀಕಿಸಿ ಕೆಲವು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ.

ಫ್ಯೂಚರ್ ಕಂಪನಿಯ ಘಟಕವೊಂದರಲ್ಲಿ ಅಮೆಜಾನ್ 2019ರಲ್ಲಿ ಹಣ ಹೂಡಿಕೆ ಮಾಡಿದೆ. ಅದರಲ್ಲಿ ಕನಿಷ್ಠ ₹ 1,527 ಕೋಟಿಯನ್ನು ವಾಪಸ್ ಕೊಟ್ಟರೆ ಈಗಿನ ವ್ಯಾಜ್ಯವು ಕೊನೆಗೊಳ್ಳಬಹುದು ಎಂದು ಅಮೆಜಾನ್ ಪ್ರತಿನಿಧಿಗಳು ಮಾತುಕತೆ ಸಂದರ್ಭದಲ್ಲಿ ತಿಳಿಸಿದರು. ಆದರೆ, ಹಣದ ಬದಲಿಗೆ ತನ್ನ ಯಾವುದಾದರೂ ಒಂದು ಘಟಕದ ಷೇರುಗಳನ್ನು ಕೊಡಲಾಗುವುದು ಎಂದು ಫ್ಯೂಚರ್ ಕಂಪನಿಯು ಅಮೆಜಾನ್‌ಗೆ ಹೇಳಿತು. ಇದು ಅಮೆಜಾನ್‌ಗೆ ಒಪ್ಪಿಗೆ ಆಗಲಿಲ್ಲ ಎಂದು ಮೂಲಗಳು ಹೇಳಿವೆ.

ಈ ವಿಚಾರವಾಗಿ ಪ್ರತಿಕ್ರಿಯೆ ಕೋರಿ ಕಳುಹಿಸಿದ ಇ–ಮೇಲ್‌ಗೆ ಅಮೆಜಾನ್, ಫ್ಯೂಚರ್ ಉತ್ತರಿಸಿಲ್ಲ. ಮಾತುಕತೆ ಸಂದರ್ಭದಲ್ಲಿ ಇತರ ಹಲವು ಅಂಶಗಳೂ ಪರಿಗಣನೆಗೆ ಬಂದಿದ್ದವು. ಆದರೆ, ಕನಿಷ್ಠಪಕ್ಷ ಹಣವಾದರೂ ವಾಪಸ್ ಸಿಗಬೇಕು ಎಂಬುದು ಅಮೆಜಾನ್‌ ಬೇಡಿಕೆಯಾಗಿತ್ತು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT