ಗುರುವಾರ , ನವೆಂಬರ್ 14, 2019
19 °C
ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಸಾಧ್ಯತೆ; ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ

ಅಡಿಕೆ ದರ ₹3 ಸಾವಿರ ಕುಸಿತ

Published:
Updated:
Prajavani

ಶಿವಮೊಗ್ಗ: ಆಗ್ನೇಯ ಏಷ್ಯಾದ 16 ದೇಶಗಳ ಮಧ್ಯೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‌ಸಿಇಪಿ) ಒಪ್ಪಂದಕ್ಕೆ ಭಾರತ ಸಹಿ ಹಾಕುತ್ತದೆ ಎಂಬ ಸುದ್ದಿಗೆ ಅಡಿಕೆ ಮಾರುಕಟ್ಟೆ ತಲ್ಲಣಗೊಂಡಿದೆ. ತಿಂಗಳಲ್ಲೇ ಅಡಿಕೆ ಧಾರಣೆ ಕ್ವಿಂಟಲ್‌ಗೆ ₹ 3 ಸಾವಿರ ಕುಸಿದಿದೆ.

ಈ ಒಪ್ಪಂದಕ್ಕೆ ಭಾರತ ಸಹಿ ಮಾಡಿದರೆ 16 ದೇಶಗಳ ಮಧ್ಯೆ ಕೃಷಿ, ವಾಣಿಜ್ಯ, ಹೈನುಗಾರಿಕೆ ಉತ್ಪನ್ನಗಳ ಮುಕ್ತ ಮಾರುಕಟ್ಟೆಗೆ ಅವಕಾಶ ಸಿಗುತ್ತದೆ. ಆಮದು ಮತ್ತು ರಫ್ತು ನೀತಿ ಸರಳಗೊಳ್ಳಲಿದ್ದು, ಇದು ಅಡಿಕೆ ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ ಎಂಬುದು ಬೆಳೆಗಾರರ, ವರ್ತಕರ ಆತಂಕಕ್ಕೆ ಕಾರಣವಾಗಿದೆ.

ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ 60ರಷ್ಟಿದೆ. ರಾಜ್ಯದಲ್ಲಿ ಪ್ರತಿ ವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಕೇರಳದಲ್ಲಿ 30–50 ಸಾವಿರ ಟನ್‌, ಗೋವಾದಲ್ಲಿ 6–8 ಸಾವಿರ ಟನ್‌, ಅಸ್ಸಾಂನಲ್ಲಿ 20–25 ಸಾವಿರ ಟನ್‌ ಹಾಗೂ ಮಹಾರಾಷ್ಟ್ರ ಸೇರಿ ಇತರೆ ಕೆಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಅಡಿಕೆ ಬೆಳೆಯಲಾಗುತ್ತದೆ.

ರಾಜ್ಯದಲ್ಲಿ ಬೆಳೆಯುವ ಶೇ 60ಕ್ಕೂ ಹೆಚ್ಚು ಅಡಿಕೆಯನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲೇ ಬೆಳೆಯಲಾಗುತ್ತದೆ. ಮಲೆನಾಡಿನ ಕೆಂಪಡಿಕೆ ಗುಣಮಟ್ಟಕ್ಕೆ ಹೆಸರಾಗಿದೆ. ಮಾರುಕಟ್ಟೆಯಲ್ಲಿ ಇತರೆ ಪ್ರದೇಶದ ಅಡಿಕೆಗಿಂತ ಧಾರಣೆ ತುಸು ಹೆಚ್ಚಿರುತ್ತದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ.

ಹಿಂದೆ ಕ್ವಿಂಟಲ್‌ ಅಡಿಕೆಗೆ ₹ 1 ಲಕ್ಷ ಗಡಿ ಸಮೀಪಿಸಿತ್ತು. ಆಗ ವರ್ತಕರು ಸಾರ್ಕ್‌ ಒಪ್ಪಂದದ ಅನ್ವಯ ಇದ್ದ ಅವಕಾಶ ಪಡೆದು ₹ 15 ಸಾವಿರಕ್ಕೆ ಒಂದು ಕ್ವಿಂಟಲ್‌ ಅಡಿಕೆ ಸಿಗುವ ವಿದೇಶಿ ಅಡಿಕೆಯನ್ನು ಶ್ರೀಲಂಕಾ ಮೂಲಕ ಆಮದು ಮಾಡಿಕೊಳ್ಳುತ್ತಿದ್ದರು. ನಂತರ ಸ್ಥಳೀಯ ಕೆಂಪಡಿಕೆ ಜತೆ ಮಿಶ್ರಣ ಮಾಡಿ ಗುಟ್ಕಾ, ಪಾನ್‌ ಮಸಾಲ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದರು. ಆಗ ಶಿವಮೊಗ್ಗ ಎಪಿಎಂಸಿ ಅಧಿಕಾರಿಗಳು ದಾಳಿ ನಡೆಸಿ ಹಲವು ಲೋಡ್‌ ಅಡಿಕೆ ವಶಪಡಿಸಿಕೊಂಡಿದ್ದರು.

ಆಮದು ಅಡಿಕೆ ಸೃಷ್ಟಿಸಿದ ಅವಾಂತರ, ಸ್ಥಳೀಯ ಬೆಳೆಗಾರರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಒಂದು ಕ್ವಿಂಟಲ್ ವಿದೇಶಿ ಅಡಿಕೆಗೆ
₹ 25,100 ಕನಿಷ್ಠ ಬೆಲೆ ನಿಗದಿ ಮಾಡಿತ್ತು. ನಂತರ ಧಾರಣೆ ಸ್ಥಿರತೆ ಕಂಡಿತ್ತು. ಈಗ ಆರ್‌ಸಿಇಪಿ ಒಪ್ಪಂದವಾದರೆ ಅಡಿಕೆ ಧಾರಣೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

‘ದಕ್ಷಿಣ ಏಷ್ಯಾದ 8 ರಾಷ್ಟ್ರಗಳ ಮಧ್ಯೆ ಇರುವ ಪ್ರಾದೇಶಿಕ ಸಹಕಾರ ಒಪ್ಪಂದಗಳ (ಸಾರ್ಕ್‌) ಲಾಭ ಪಡೆದು ವರ್ತಕರು ಅಗ್ಗದ ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದರು. ಆರ್‌ಸಿಇಪಿ ಒಪ್ಪಂದವಾದರೆ ಚೀನಾ, ಮ್ಯಾನ್ಮಾರ್‌ ಅಡಿಕೆ ಬಂದು ದರ ಕುಸಿಯುವ ಸಾಧ್ಯತೆ ಇದೆ. ಈ ಕುರಿತು ಅಡಿಕೆ ಬೆಳೆಗಾರರ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಈ ಒಪ್ಪಂದದಲ್ಲಿ ವಾಣಿಜ್ಯ ಬೆಳೆ ಅಡಕವಾಗಿರುವ ಕುರಿತು ಇನ್ನೂ ಖಚಿತತೆ ಇಲ್ಲ’ ಎಂದು ತೋಟೋತ್ಪನ್ನಗಳ ಮಾರಾಟ ಸಹಕಾರ ಸಂಘದ ನಿರ್ದೇಶಕ ಆರ್.ಎಂ. ರವಿ
ಪ್ರತಿಕ್ರಿಯಿಸಿದರು.

**
ಅಧಿಕ ಅಡಿಕೆ ಬೆಳೆಯುವ ಚೀನಾ, ಮ್ಯಾನ್ಮಾರ್‌ ದೇಶದ ಅಡಿಕೆ ಇಲ್ಲಿಗೆ ಬರಲು ಅವಕಾಶ ದೊರೆತರೆ ಸ್ಥಳೀಯ ಅಡಿಕೆ ಧಾರಣೆ ಕುಸಿಯುವ ಸಾಧ್ಯತೆ ಇದೆ.
-ಆರ್.ಎಂ. ರವಿ, ನಿರ್ದೇಶಕ, ತೋಟೋತ್ಪನ್ನಗಳ ಮಾರಾಟ ಸಹಕಾರ ಸಂಘ

ಪ್ರತಿಕ್ರಿಯಿಸಿ (+)