ಗುರುವಾರ , ಅಕ್ಟೋಬರ್ 22, 2020
21 °C

ಚಕ್ರಬಡ್ಡಿ ಮನ್ನಾ: ಬ್ಯಾಂಕ್‌ಗಳಿಗೆ ಹೊರೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಮುಂಬೈ: ₹2 ಕೋಟಿವರೆಗಿನ ನಿರ್ದಿಷ್ಟ ಬಗೆಯ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಕೇಂದ್ರ ಸರ್ಕಾರದ ತೀರ್ಮಾನವು ಅರ್ಥವ್ಯವಸ್ಥೆಗೆ ಹೆಚ್ಚಿನ ಚೈತನ್ಯವನ್ನೇನೂ ನೀಡಲಾರದು ಎಂದು ಕೆಲವು ಬ್ಯಾಂಕರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಈ ನಡೆಯು ಬ್ಯಾಂಕುಗಳ ಪಾಲಿಗೆ ಅನಗತ್ಯ ಒತ್ತಡ ಸೃಷ್ಟಿಸಲಿದೆ, ವ್ಯಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಲಿವೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಸಾಲದ ಕಂತುಗಳ ಮರು ಪಾವತಿಗೆ ವಿನಾಯಿತಿ ನೀಡಿದ್ದ (ಮೊರಟೋರಿಯಂ) ಅವಧಿಯ ಚಕ್ರಬಡ್ಡಿಯನ್ನು ಮನ್ನಾ ಮಾಡಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಚಕ್ರಬಡ್ಡಿಯ ಮನ್ನಾದಿಂದ ಬ್ಯಾಂಕ್‌ಗಳಿಗೆ ಆಗಬಹುದಾದ ಹಣಕಾಸಿನ ಹೊರೆಯನ್ನು ತಾನೇ ಹೊತ್ತುಕೊಳ್ಳುವುದಾಗಿಯೂ ಕೇಂದ್ರ ಹೇಳಿದೆ. ಈ ಮೊತ್ತವು ಗರಿಷ್ಠ ₹ 7,300 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಆದರೆ, ಅನುತ್ಪಾದಕ ಸಾಲದ (ಎನ್‌ಪಿಎ) ಸಮಸ್ಯೆಯನ್ನು, ಕೊರೊನಾ ಕಾರಣದಿಂದಾಗಿ ಹೊಸ ಸಾಲದ ಬೇಡಿಕೆ ಕೊರತೆ ಎದುರಿಸುತ್ತಿರುವ ಬ್ಯಾಂಕುಗಳ ಪಾಲಿಗೆ ಕೇಂದ್ರದ ಈ ತೀರ್ಮಾನವು ಇನ್ನಷ್ಟು ಒತ್ತಡವನ್ನು ತಂದಿರಿಸಲಿದೆ. ರೈತರ ಸಾಲ ಮನ್ನಾ ಯೋಜನೆ ಘೋಷಿ ಸಿದ್ದಾಗ, ಕೇಂದ್ರದಿಂದ ಹಣ ಪಡೆಯಲು ಬ್ಯಾಂಕುಗಳು ಒಂಬತ್ತರಿಂದ 24 ತಿಂಗಳು ಗಳವರೆಗೆ ಕಾಯಬೇಕಾಗಿತ್ತು ಎಂದು ಬ್ಯಾಂಕಿಂಗ್‌ ವಲಯದ ಇಬ್ಬರು ಪ್ರತಿನಿಧಿಗಳು ತಿಳಿಸಿದರು.

ಬ್ಯಾಂಕುಗಳು ತಾವು ನೀಡಿರುವ ಸಾಲದ ಬಡ್ಡಿ, ಚಕ್ರಬಡ್ಡಿಯ ವಿಚಾ ರವಾಗಿ ಹೊಸದಾಗಿ ಲೆಕ್ಕಾಚಾರ ಮಾಡಬೇಕಾಗುತ್ತದೆ. ‘ಸರ್ಕಾರದಿಂದ ಹಣವನ್ನು ಪಡೆದುಕೊಳ್ಳುವುದು ಕಷ್ಟದ ಕೆಲಸ’ ಎಂದು ಮೂಲಗಳು ಹೇಳುತ್ತವೆ. ‘ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಹಳಷ್ಟು ಕೆಲಸ ಮಾಡಬೇಕಾಗುತ್ತದೆ. ಅಂತಿಮವಾಗಿ, ಇದರಿಂದ ಯಾರೂ ಖುಷಿಪಡುವ ಸ್ಥಿತಿ ನಿರ್ಮಾಣವಾಗದು. ಸರ್ಕಾರವೇ ಬಡವಾಗುತ್ತದೆ’ ಎನ್ನುತ್ತವೆ ಮೂಲಗಳು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕೇಂದ್ರ ಹಣಕಾಸು ಇಲಾಖೆಯ ವಕ್ತಾರರು ನಿರಾಕರಿಸಿದ್ದಾರೆ.

ಸಾಲ ಪಡೆದವರಿಗೆ ಸಹಾಯ ಮಾಡಬೇಕು ಎಂದಿದ್ದರೆ ಸಾಲ ಮರುಹೊಂದಾಣಿಕೆ ಅಥವಾ ಸಬ್ಸಿಡಿ ನೀಡುವುದು ಒಳಿತು ಎಂದು ಕೆಲವು ಬ್ಯಾಂಕರ್‌ಗಳು ಹೇಳಿದರು. ‘ಇನ್ನು ಮುಂದೆ, ಪ್ರವಾಹ ಅಥವಾ ಆ ಬಗೆಯ ಇತರ ಸಂದರ್ಭಗಳು ಎದುರಾದಾಗ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇರುವವರೂ ಕಂತು ಪಾವತಿಸದೆ ಇರಬಹುದು. ಏಕೆಂದರೆ, ಸರ್ಕಾರ ತಮ್ಮ ನೆರವಿಗೆ ಬರುತ್ತದೆ ಎಂಬ ಖಾತರಿ ಅವರಲ್ಲಿ ಇರುತ್ತದೆ’ ಎಂದು ಒಂದು ಖಾಸಗಿ ಬ್ಯಾಂಕ್‌ನ‌ ಹಿರಿಯ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು