ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯಲ್ಲಿ ಗೂಳಿಯ ನಾಗಾಲೋಟ

Last Updated 24 ಮೇ 2019, 18:31 IST
ಅಕ್ಷರ ಗಾತ್ರ

ಮುಂಬೈ: ಷೇರುಗಳ ಮಾನದಂಡವಾಗಿರುವ ಸಂವೇದಿ ಸೂಚ್ಯಂಕ ಮತ್ತು ‘ನಿಫ್ಟಿ’, ಶುಕ್ರವಾರದ ವಹಿವಾಟಿನಲ್ಲಿ ದಾಖಲೆ ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿವೆ.

ನರೇಂದ್ರ ಮೋದಿ ನೇತೃತ್ವದಲ್ಲಿನ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ನಿರ್ಣಾಯಕವಾಗಿ ಬೆಂಬಲಿಸಿರುವುದರಿಂದ ಆರ್ಥಿಕ ಸುಧಾರಣಾ ಕ್ರಮಗಳ ಜಾರಿಗೆ ಭಾರಿ ವೇಗ ಸಿಗಲಿದೆ ಎಂದು ಹೂಡಿಕೆದಾರರು ಬಹುವಾಗಿ ನಿರೀಕ್ಷಿಸಿದ್ದಾರೆ. ಹೀಗಾಗಿ ಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿದೆ.

ಬಿಎಸ್‌ಇ ಸಂವೇದಿ ಸೂಚ್ಯಂಕವು 623 ಅಂಶಗಳ ಏರಿಕೆ ದಾಖಲಿಸಿ 39,434 ಅಂಶಗಳಲ್ಲಿ ಮತ್ತು ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’, 187 ಅಂಶ ಏರಿಕೆ ಕಂಡು 11,844 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿವೆ.

ವಹಿವಾಟಿನ ಮಧ್ಯದಲ್ಲಿ ಸೂಚ್ಯಂಕವು ಗರಿಷ್ಠ 39,476.97 ಅಂಶ ಮತ್ತು ಕನಿಷ್ಠ 38,824.26 ಅಂಶಗಳ ಮಧ್ಯೆ ಹೊಯ್ದಾಡಿತು. 11,784 ಅಂಶಗಳೊಂದಿಗೆ ವಹಿವಾಟು ಆರಂಭಿಸಿದ ‘ನಿಫ್ಟಿ’ ಕೂಡ, ಗರಿಷ್ಠ 11,859 ಮತ್ತು ಕನಿಷ್ಠ 11,658 ಅಂಶಗಳ ಮಧ್ಯೆ ಚಲಿಸಿತು.

ದಿನದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕದಲ್ಲಿನ 26 ಷೇರುಗಳು ಲಾಭ ಬಾಚಿಕೊಂಡರೆ, 4 ಷೇರುಗಳ ಬೆಲೆ ಮಾತ್ರ ಕುಸಿತ ಕಂಡವು. ಎಲ್ಲ 19 ವಲಯಗಳಲ್ಲಿನ ಷೇರುಗಳು, ರಿಯಾಲ್ಟಿ, ಭಾರಿ ಯಂತ್ರೋಪಕರಣ, ದೂರಸಂಪರ್ಕ ಮತ್ತು ವಾಹನ ತಯಾರಿಕಾ ಸಂಸ್ಥೆಗಳ ನೇತೃತ್ವದಲ್ಲಿ ಲಾಭ ಮಾಡಿಕೊಂಡವು.

ಗಳಿಕೆ ಕಂಡ ಷೇರುಗಳಲ್ಲಿ ಐಸಿಐಸಿಐ ಬ್ಯಾಂಕ್‌ (ಶೇ 5.09) ಮುಂಚೂಣಿಯಲ್ಲಿತ್ತು. ನಂತರದ ಸ್ಥಾನದಲ್ಲಿ ಎಲ್ಆ್ಯಂಡ್‌ಟಿ, ಭಾರ್ತಿ ಏರ್‌ಟೆಲ್‌, ವೇದಾಂತ ಮತ್ತು ಟಾಟಾ ಮೋಟರ್ಸ್‌ ಷೇರುಗಳು ಶೇ 4.60ರವರೆಗೆ ಗಳಿಕೆ ದಾಖಲಿಸಿದವು.

ಮಧ್ಯಮ (ಶೇ 2.43) ಮತ್ತು ಸಣ್ಣ ಗಾತ್ರದ ಕಂಪನಿಗಳ ಷೇರುಗಳು (ಶೇ 2.09) ಉತ್ತಮ ಸಾಧನೆ ತೋರಿದವು. ಒಟ್ಟಾರೆ 1,827 ಷೇರುಗಳ ಬೆಲೆ ಏರಿಕೆ ಕಂಡವು. 695 ಷೇರುಗಳ ಬೆಲೆ ಕುಸಿತ ದಾಖಲಿಸಿದವು.

ಡಾಲರ್‌ ಎದುರಿನ ರೂ‍ಪಾಯಿ ವಿನಿಮಯ ದರ ಏರಿಕೆಯಾಗಿರುವುದು ವಹಿವಾಟಿನ ಉತ್ಸಾಹ ಹೆಚ್ಚಿಸಿದೆ ಎಂದು ಷೇರು ದಲ್ಲಾಳಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT