ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರಡಿ ಕುಣಿತಕ್ಕೆ ಷೇರುಪೇಟೆ ತತ್ತರ

ಬಿಎಸ್‌ಸಿ ಮಿಡ್‌ ಕ್ಯಾ‍ಪ್‌ ಶೇ 8.07, ಸ್ಮಾಲ್‌ ಕ್ಯಾಪ್‌ ಶೇ 6.79ರಷ್ಟು ಇಳಿಕೆ
Published 4 ಜೂನ್ 2024, 16:03 IST
Last Updated 4 ಜೂನ್ 2024, 16:03 IST
ಅಕ್ಷರ ಗಾತ್ರ

ಮುಂಬೈ: ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶಕ್ಕಾಗಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದು ಕೂಡ ಷೇರು ಸೂಚ್ಯಂಕಗಳು ಇಳಿಕೆ ಕಾಣಲು ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಸೋಮವಾರ ಗೂಳಿಯು ನಾಗಾಲೋಟ ಕಂಡಿತ್ತು. ಮಂಗಳವಾರದ ವಹಿವಾಟಿನಲ್ಲಿ ಕರಡಿ ಕುಣಿತ ಜೋರಾಯಿತು. ಸಾರ್ವಜನಿಕ ವಲಯದ ಕಂಪನಿಗಳು, ಬ್ಯಾಂಕ್‌ಗಳು, ವಿದ್ಯುತ್‌, ಯುಟಿಲಿಟಿ, ತೈಲ ಮತ್ತು ಅನಿಲ, ಬಂಡವಾಳ ಸರಕು ಸೂಚ್ಯಂಕದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು.

‘ಲೋಕಸಭಾ ಚುನಾವಣೆಯ ಅನಿರೀಕ್ಷಿತ ಫಲಿತಾಂಶದಿಂದ ಆತಂಕಕ್ಕೆ ಸಿಲುಕಿದ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಷೇರುಪೇಟೆಗಳು ಕುಸಿತ ಕಂಡಿವೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ, ಮಾರುಕಟ್ಟೆಯು ಚೇತರಿಕೆಯ ಹಳಿಗೆ ಮರಳಬಹುದು’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

2014ರ ಮೇ 16ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ಸೆನ್ಸೆಕ್ಸ್‌ 261 ಅಂಶ ಏರಿಕೆ ಕಂಡು 24,121 ಅಂಶಗಳಲ್ಲಿ ಸ್ಥಿರಗೊಂಡಿತ್ತು. ನಿಫ್ಟಿ 79 ಅಂಶ ಏರಿಕೆ ಕಂಡು 7,203 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.

2019ರ ಮೇ 19ರಂದು 298 ಅಂಶ ಇಳಿಕೆ ಕಂಡು 38,811 ಅಂಶಗಳಿಗೆ ತಲುಪಿತ್ತು. ನಿಫ್ಟಿ 80 ಅಂಶ ಇಳಿಕೆ ಕಂಡು 11,657 ಅಂಶಗಳಲ್ಲಿ ಸ್ಥಿರಗೊಂಡಿತ್ತು. 

ಸೆನ್ಸೆಕ್ಸ್ ಗುಚ್ಛದಲ್ಲಿನ ಎನ್‌ಟಿಪಿಸಿ ಷೇರಿನ ಮೌಲ್ಯದಲ್ಲಿ ಶೇ 15ರಷ್ಟು ಇಳಿಕೆಯಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇ 14, ಎಲ್‌ ಆ್ಯಂಡ್‌ ಟಿ ಶೇ 12, ಪವರ್‌ ಗ್ರಿಡ್‌ ಷೇರಿನ ಮೌಲ್ಯದಲ್ಲಿ ಶೇ 12ರಷ್ಟು ಕುಸಿದಿದೆ. ಟಾಟಾ ಸ್ಟೀಲ್‌, ಇಂಡಸ್‌ಇಂಡ್‌ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ರಿಲಯನ್ಸ್  ಇಂಡಸ್ಟ್ರೀಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರಿನ ಮೌಲ್ಯವೂ ಇಳಿಕೆಯಾಗಿದೆ.

ಹಿಂದುಸ್ತಾನ್‌ ಯೂನಿಲಿವರ್‌ ಶೇ 6ರಷ್ಟು ಮತ್ತು ನೆಸ್ಲೆ ಇಂಡಿಯಾ ಷೇರಿನ ಮೌಲ್ಯದಲ್ಲಿ ಶೇ 3ರಷ್ಟು ಏರಿಕೆಯಾಗಿದೆ. ಟಿಸಿಎಸ್‌, ಏಷ್ಯನ್‌ ಪೇಂಟ್ಸ್‌, ಸನ್‌ ಫಾರ್ಮಾ ಷೇರಿನ ಮೌಲ್ಯವೂ ಹೆಚ್ಚಳವಾಗಿದೆ.  

ಬಿಎಸ್‌ಸಿ ಮಿಡ್‌ ಕ್ಯಾ‍ಪ್‌ ಶೇ 8.07ರಷ್ಟು ಹಾಗೂ ಸ್ಮಾಲ್‌ ಕ್ಯಾಪ್‌ ಶೇ 6.79ರಷ್ಟು ಇಳಿಕೆಯಾಗಿದೆ. 

ಯುಟಿಲಿಟಿ ಸೂಚ್ಯಂಕ (ಶೇ 14.40), ಪವರ್‌ (ಶೇ 14.25), ತೈಲ ಮತ್ತು ಅನಿಲ (ಶೇ 13.07), ಸೇವೆ (12.65), ಬಂಡವಾಳ ಸರಕು (ಶೇ 12.06), ಎನರ್ಜಿ (ಶೇ 11.62) ಮತ್ತು ಲೋಹ (ಶೇ 9.65) ಸೂಚ್ಯಂಕ ಇಳಿಕೆ ಕಂಡಿವೆ. 

ಸೋಲ್‌, ಟೋಕಿಯೊ ಮಾರುಕಟ್ಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆದರೆ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆ ಗಳಿಕೆ ಕಂಡಿವೆ. ಯುರೋಪ್‌ ಮಾರುಕಟ್ಟೆಯಲ್ಲೂ ಇಳಿಕೆಯಾಗಿದೆ. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 1.88ರಷ್ಟು ಕುಸಿತವಾಗಿದ್ದು, ಪ್ರತಿ ಬ್ಯಾರೆಲ್‌ಗೆ 76.89 ಡಾಲರ್‌ ಆಗಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ಗೆ ನಷ್ಟ: ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರಿನ ಮೌಲ್ಯದಲ್ಲಿ ಶೇ 7.50ರಷ್ಟು ಕುಸಿತವಾಗಿದ್ದು, ಎಂ–ಕ್ಯಾಪ್‌ ₹1.54 ಲಕ್ಷ ಕೋಟಿ ನಷ್ಟವಾಗಿದೆ.

ಸರ್ಕಾರಿ ಉದ್ದಿಮೆ ಬ್ಯಾಂಕ್‌ ಷೇರಿನ ಮೌಲ್ಯ ಇಳಿಕೆ

ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಇ) ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರಿನ ಮೌಲ್ಯದಲ್ಲಿ ಶೇ 24ರಷ್ಟು ಇಳಿಕೆಯಾಗಿದೆ. ನಿಫ್ಟಿ ಪಿಎಸ್‌ಇ ಸೂಚ್ಯಂಕ 1856 ಅಂಶ ಇಳಿಕೆ (ಶೇ 16.38ರಷ್ಟು) ಕಂಡಿದ್ದು 9475 ಅಂಶ ಆಗಿದೆ. ಪವರ್‌ ಫೈನಾನ್ಸ್ ಕಾರ್ಪೊರೇಷನ್‌ ಷೇರಿನ ಮೌಲ್ಯದಲ್ಲಿ ಶೇ 21.62 ಕಂಟೈನರ್‌ ಕ್ರಾಪ್‌ ಆಫ್‌ ಇಂಡಿಯಾ ಶೇ 19.43 ಹಾಗೂ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಷೇರಿನ ಮೌಲ್ಯದಲ್ಲಿ ಶೇ 19.21ರಷ್ಟು ಇಳಿಕೆಯಾಗಿದೆ. ಒಎನ್‌ಜಿಸಿ ಶೇ 16.23 ಕೋಲ್‌ ಇಂಡಿಯಾ ಶೇ 13.54 ಎನ್‌ಟಿಪಿಸಿ ಶೇ 14.52  ಹಾಗೂ ಪವರ್‌ ಗ್ರಿಡ್‌ ಷೇರಿನ ಮೌಲ್ಯದಲ್ಲಿ ಶೇ 11.98ರಷ್ಟು ಕುಸಿದಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್‌ ಸೂಚ್ಯಂಕ 1211 ಅಂಶ ಇಳಿಕೆಯಾಗಿದೆ (ಶೇ 15.14ರಷ್ಟು). ಯೂನಿಯನ್‌ ಬ್ಯಾಂಕ್‌ ಶೇ 17.65 ಬ್ಯಾಂಕ್‌ ಆಫ್‌ ಬರೋಡಾ ಶೇ 1574 ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಶೇ 15.15 ಕೆನರಾ ಬ್ಯಾಂಕ್‌ ಶೇ 13.45 ಮತ್ತು ಎಸ್‌ಬಿಐ ಷೇರಿನ ಮೌಲ್ಯದಲ್ಲಿ ಶೇ 13.37ರಷ್ಟು ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT