ಶುಕ್ರವಾರ, ಏಪ್ರಿಲ್ 23, 2021
27 °C
ಕೆಪಿಎಂಜಿ ಸಂಸ್ಥೆ ನಡೆಸಿದ ಸಮೀಕ್ಷೆ

ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇದೇ ಶುಕ್ರವಾರ ಮಂಡನೆಯಾಗಲಿರುವ ಪ್ರಸಕ್ತ ಹಣಕಾಸು ವರ್ಷದ (2019–20) ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಸದ್ಯದ ₹ 2.5 ಲಕ್ಷದಿಂದ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಕೆಪಿಎಂಜಿ (ಇಂಡಿಯಾ) ಸಂಸ್ಥೆಯು ಬಜೆಟ್‌ ಮುಂಚೆ ನಡೆಸಿರುವ ಈ ಸಮೀಕ್ಷೆಯಲ್ಲಿ, ವಿವಿಧ ಉದ್ದಿಮೆಗಳ 226 ಜನರು ಭಾಗಿಯಾಗಿದ್ದರು. ಶೇ 74ರಷ್ಟು ಜನರು ಐ.ಟಿ ವಿನಾಯ್ತಿ ಮಿತಿ ಏರಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾರ್ಷಿಕ ₹ 10 ಕೋಟಿಗಳಷ್ಟು ಆದಾಯ ಗಳಿಸುವ ಸಿರಿವಂತರಿಗೆ ಶೇ 40ರಷ್ಟು ತೆರಿಗೆ ವಿಧಿಸುವ ಪ್ರಸ್ತಾವವನ್ನು ಸರ್ಕಾರ ಪರಿಗಣಿಸಬೇಕು ಎಂದು ಶೇ 58ರಷ್ಟು ಜನರು ತಿಳಿಸಿದ್ದಾರೆ. ಪಿತ್ರಾರ್ಜಿತ ಆಸ್ತಿ ಮರಳಿ ಜಾರಿಗೆ ತರಬೇಕು ಎಂಬುದು ಶೇ 13ರಷ್ಟು ಜನರ ಅನಿಸಿಕೆಯಾಗಿದೆ.

ಮನೆಗಳ ಖರೀದಿ ಉತ್ತೇಜಿಸಲು, ಸ್ವಂತದ ವಾಸಕ್ಕೆ ಬಳಸುವ ಗೃಹ ಸಾಲದ ಬಡ್ಡಿಗೆ ಸಂಬಂಧಿಸಿದಂತೆ   ತೆರಿಗೆ ಕಡಿತದ ಮಿತಿಯನ್ನು ಸದ್ಯದ ₹ 2 ಲಕ್ಷದಿಂದ ಹೆಚ್ಚಿಸಬೇಕು ಎನ್ನುವುದು ಶೇ 65ರಷ್ಟು ಜನರ ಬೇಡಿಕೆಯಾಗಿದೆ.

80 ಸಿ ಸೆಕ್ಷನ್‌ ಅಡಿ ಸದ್ಯಕ್ಕೆ ಇರುವ ₹ 1.50 ಲಕ್ಷದ ವಿನಾಯ್ತಿ ಮಿತಿಯಿಂದ ಗೃಹ ಸಾಲದ ಅಸಲು ಮರುಪಾವತಿಯನ್ನು ಬೇರ್ಪಡಿಸಬೇಕು ಎಂದು ಶೇ 51ರಷ್ಟು ಜನರು ಬಯಸಿದ್ದಾರೆ.

ನೇರ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮೊದಲ ಬಜೆಟ್‌ನಿಂದ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ ಎನ್ನುವುದು ಶೇ 53ರಷ್ಟು ಜನರ ಅಭಿಪ್ರಾಯವಾಗಿದೆ. ಕಾರ್ಪೊರೇಟ್‌ ತೆರಿಗೆಯನ್ನು ಸದ್ಯದ ಶೇ 25ರಿಂದ ಕಡಿತ ಮಾಡಬಾರದು ಎಂದು ಶೇ 46ರಷ್ಟು ಜನರು ಬಯಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು