ಭಾನುವಾರ, ಮೇ 22, 2022
25 °C

ಕೋವಿಡ್ ಅವಧಿಯಲ್ಲಿ ಮಾರಾಟ ಹೆಚ್ಚಳ: ಐಷಾರಾಮಿ ಉತ್ಪನ್ನಗಳ ಮೇಲೆ ಹೆಚ್ಚುವರಿ ಸೆಸ್?

ಅನ್ನಪೂರ್ಣಾ ಸಿಂಗ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಂಕ್ರಾಮಿಕದ ಅವಧಿಯಲ್ಲಿಯೂ ಐಷಾರಾಮಿ ಉತ್ಪನ್ನಗಳ ಮಾರಾಟ ಪ್ರಮಾಣ ಹೆಚ್ಚಾಗಿರುವ ಕಾರಣ, ಕೇಂದ್ರ ಸರ್ಕಾರವು ಇಂತಹ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಸೆಸ್ ವಿಧಿಸುವ ಸಾಧ್ಯತೆ ಇದೆ.

ಇದೇ ವೇಳೆ, ಸಾಂಕ್ರಾಮಿಕದ ಸಂದರ್ಭದಲ್ಲಿ ಬೇಡಿಕೆ ಕುಸಿದಿರುವ, ವ್ಯಾಪಕವಾಗಿ ಬಳಕೆಯಾಗುವ ಕೆಲವು ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಮಾಡುವ ಸಾಧ್ಯತೆಯೂ ಇದೆ. ಕೇಂದ್ರವು ಫೆಬ್ರುವರಿ 1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ.

ಐಷಾರಾಮಿ ಮನೆಗಳು, ದುಬಾರಿ ಕಾರುಗಳು, ಮುತ್ತುಗಳು ಹಾಗೂ ಆಭರಣಗಳ ಮಾರಾಟ, ಬೆಲೆಬಾಳುವ ವಸ್ತುಗಳ ಆಮದು ಕೋವಿಡ್ ಸಮಯದಲ್ಲಿ ಗಮನಾರ್ಹ ಹೆಚ್ಚಳ ಕಂಡಿವೆ. ಇದೇ ಅವಧಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಕುಟುಂಬಗಳ ಪಾಲಿಗೆ ಅಗತ್ಯವಾದ ಇತರ ಕೆಲವು ಉತ್ಪನ್ನಗಳ ಮಾರಾಟವು ಇಳಿಕೆ ಕಂಡಿದೆ.

ವಿವಿಧ ಉತ್ಪನ್ನಗಳ ಮಾರಾಟ ಯಾವ ರೀತಿ ಆಗುತ್ತಿದೆ ಎಂಬುದನ್ನು ಕೇಂದ್ರ ಗಮನಿಸುತ್ತಿದೆ. ಉತ್ಪನ್ನಗಳ ಮಾರಾಟ ಪ್ರಮಾಣ ಆಧರಿಸಿ ಸುಂಕ ಹೆಚ್ಚಿಸುವ ಅಥವಾ ತಗ್ಗಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

ಜಿಎಸ್‌ಟಿ ದರಗಳನ್ನು ಜಿಎಸ್‌ಟಿ ಮಂಡಳಿ ಮೂಲಕ ವರ್ಷದ ಯಾವುದೇ ಸಂದರ್ಭದಲ್ಲಿ ಬದಲಾಯಿಸಬಹುದಾದರೂ, ಕೇಂದ್ರ ಸರ್ಕಾರವು ಹಣಕಾಸು ಮಸೂದೆ ಮೂಲಕ ಸುಂಕ, ಸೆಸ್‌ಗಳನ್ನು ಹೆಚ್ಚಿಸುವ ಅಥವಾ ಇಳಿಸುವ ಕೆಲಸ ಮಾಡುತ್ತದೆ. ಆತ್ಮನಿರ್ಭರ ಭಾರತ ಯೋಜನೆಗೆ ಬೆಂಬಲವಾಗುವ ನಿಟ್ಟಿನಲ್ಲಿ ಕಸ್ಟಮ್ಸ್ ಮತ್ತು ಕೇಂದ್ರ ಎಕ್ಸ್ಸೈಸ್‌ ಸುಂಕದಲ್ಲಿ ಮಹತ್ವದ ಬದಲಾವಣೆಗಳು ಆಗಬಹುದು ಎನ್ನಲಾಗಿದೆ.

ಕೋವಿಡ್ ಪರೀಕ್ಷೆ ಹಾಗೂ ಲಸಿಕೆಗೆ ಸಂಪನ್ಮೂಲ ಒಗ್ಗೂಡಿಸಲು ಅತ್ಯಂತ ದುಬಾರಿ ಮೌಲ್ಯದ ಕೆಲವು ಐಷಾರಾಮಿ ಉತ್ಪನ್ನಗಳ ಮೇಲೆ ಹೊಸ ಸೆಸ್ ವಿಧಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಿಎಲ್‌ಎಫ್‌ ಕಂಪನಿ ಐಷಾರಾಮಿ ಮನೆಗಳಿಗೆ ಹಿಂದಿನ ವರ್ಷದಲ್ಲಿ ದಾಖಲೆಯ ಬೇಡಿಕೆ ಬಂದಿದೆ. ಜರ್ಮನಿ ಮೂಲದ ಬಿಎಂಡಬ್ಲ್ಯು ಕಂಪನಿಯು 2021ರಲ್ಲಿ 8,876 ಕಾರುಗಳನ್ನು, 5,191 ದುಬಾರಿ ಬೈಕ್‌ಗಳನ್ನು ಮಾರಾಟ ಮಾಡಿದೆ. ಔಡಿ ಕಾರುಗಳಿಗೆ ಹಿಂದಿನ ವರ್ಷದಲ್ಲಿ ಬೇಡಿಕೆಯು ದುಪ್ಪಟ್ಟಾಗಿದೆ. 2020–21ರಲ್ಲಿ ದೇಶವು ಐದು ವರ್ಷಗಳ ಗರಿಷ್ಠ ಮೌಲ್ಯದ ಚಿನ್ನ ಆಮದು ಮಾಡಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು