ಭಾನುವಾರ, ಡಿಸೆಂಬರ್ 15, 2019
17 °C
ವಿಸ್ತರಣೆಯ ಹಾದಿಯಲ್ಲಿ ಕ್ಯಾಂಪ್ಕೊ

ಶೀಘ್ರವೇ ಹೊಸ ಚೋಕೊಚಿಪ್‌ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಗಳೂರು: ‘ಕ್ಯಾಂಪ್ಕೊ ಸಂಸ್ಥೆಯ ಚಾಕ್ಲೇಟ್‌ ತಯಾರಿಕೆ ಉದ್ಯಮವು ಲಾಭದಾಯಕ ದಾರಿಯಲ್ಲಿದ್ದು, ಬೇಡಿಕೆಯನ್ನು ಗಮನಿಸಿಕೊಂಡು ಚೋಕೊಚಿಪ್‌ ತಯಾರಿಸುವ ನೂತನ ಯಂತ್ರವು ಫೆಬ್ರುವರಿ ಅಂತ್ಯದ ವೇಳೆಗೆ ಪುತ್ತೂರಿನ ಘಟಕದಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್‌ಚಂದ್ರ ಹೇಳಿದರು.

‘ಪ್ರಜಾವಾಣಿ’ಯ ಮಂಗಳೂರು ಕಚೇರಿಯಲ್ಲಿ ಸೋಮವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

‘ಇದಕ್ಕೆ ಅಗತ್ಯವಿರುವ ಹೊಸ ಯಂತ್ರವನ್ನು ಟರ್ಕಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ₹5 ಕೋಟಿ ಮೌಲ್ಯದ ಈ ಯಂತ್ರವು ಜನವರಿಯಲ್ಲಿ ತಲುಪುವ ನಿರೀಕ್ಷೆ ಇದೆ.

‘ಹೊಸ ರೀತಿಯ ಚಾಕ್ಲೇಟ್‌ ಮಾದರಿಗಳನ್ನು ಕ್ಯಾಂಪ್ಕೊ ಅಭಿವೃದ್ಧಿಪಡಿಸಿದೆ. ಅವುಗಳ ತಯಾರಿ ಮತ್ತು ವಿವಿಧ ವಿನ್ಯಾಸಗಳಲ್ಲಿ ಚೋಕೊಚಿಪ್ಸ್‌ ತಯಾರಿಸುವ ನಿಟ್ಟಿನಲ್ಲಿ ಪುತ್ತೂರಿನಲ್ಲಿರುವ ಚಾಕ್ಲೇಟ್‌ ಘಟಕವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ಚಾಕ್ಲೇಟ್‌ಗೆ ಬೇಡಿಕೆ ಉತ್ತಮವಾಗಿದೆ’ ಎಂದು ಹೇಳಿದರು.

‘ಹೊಸ ಯಂತ್ರ ಅಳವಡಿಸಿದ ಬಳಿಕ ದಿನಕ್ಕೆ 10 ಟನ್‌ನಂತೆ (ಸದ್ಯ 3 ಟನ್‌) ತಿಂಗಳಿಗೆ 300 ಟನ್‌ ಚೋಕೊಚಿಪ್ಸ್‌ ತಯಾರಿಸುವುದು ಸಾಧ್ಯವಾಗಲಿದೆ’ ಎಂದು ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಂ. ಸುರೇಶ್‌ ಭಂಡಾರಿ ಹೇಳಿದರು.

ದೇಶಕ್ಕೇ ಮಾದರಿ: ‘ಇತ್ತೀಚೆಗೆ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಕ್ಯಾಂಪ್ಕೊ ಸಹಕಾರಿ ಮಾದರಿಯನ್ನು ಪ್ರಸ್ತುತಪಡಿಸಲು ಅವಕಾಶ ಲಭಿಸಿತ್ತು. ಜತೆಗೆ ಇಫ್ಕೊ, ಅಮುಲ್‌, ಮಹಿಳಾ ಫಿಷರೀಸ್‌ ಸೊಸೈಟಿ ಸಂಸ್ಥೆಗಳಿಗೂ ಅವಕಾಶ ಸಿಕ್ಕಿತ್ತು.

‘ದೇಶದ 100 ಕಡೆಗಳಲ್ಲಿ ಕ್ಯಾಂಪ್ಕೊ ಮಾದರಿಯ ಘಟಕಗಳನ್ನು ತೆರೆಯುವಂತೆ ಸಲಹೆ ಮಾಡುವ ಉದ್ದೇಶದಿಂದ ಕ್ಯಾಂಪ್ಕೊ ಮಾದರಿಯನ್ನು ಬಿಂಬಿಸುವ ವ್ಯವಸ್ಥೆಯನ್ನು ಕೇಂದ್ರ ಸಚಿವ ಸುರೇಶ್‌ ಪ್ರಭು ಮಾಡಿದ್ದರು’ ಎಂದು ಸತೀಶ್‌ಚಂದ್ರ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು