ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್ ಡೇಟಾ ಸೆಂಟರ್‌ ಉದ್ಯಮದಲ್ಲಿ ಕಾರ್ಲೈಲ್ ಶೇ 25ರಷ್ಟು ಪಾಲು: ₹1,780 ಕೋಟಿ

Last Updated 1 ಜುಲೈ 2020, 4:52 IST
ಅಕ್ಷರ ಗಾತ್ರ

ನವದೆಹಲಿ: ಏರ್‌ಟೆಲ್‌ನ ಡೇಟಾ ಸೆಂಟರ್‌ ಉದ್ಯಮದಲ್ಲಿ ಶೇ 25ರಷ್ಟು ಪಾಲುದಾರಿಕೆಯನ್ನು ದಿ ಕಾರ್ಲೈಲ್‌ ಗ್ರೂಪ್‌ ಸ್ವಾಧೀನ ಪಡಿಸಿಕೊಳ್ಳಲಿದೆ. 235 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಸುಮಾರು ₹1,780 ಕೋಟಿ) ಮೊತ್ತದ ಒಡಂಬಡಿಕೆಯಾಗಲಿದೆ ಎಂದು ಏರ್‌ಟೆಲ್‌ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಲುದಾರಿಕೆ ಸ್ವಾಧೀನ ಪ್ರಕ್ರಿಯೆ ಮೂಲಕ ಏರ್‌ಟೆಲ್‌ ಡೇಟಾ ಸೆಂಟರ್‌ ಎನ್‌ಎಕ್ಸ್‌ಟ್ರಾ ( Nxtra) ಉದ್ಯಮದ ಮೌಲ್ಯವು 1.2 ಬಿಲಿಯನ್‌ ಅಮೆರಿಕನ್‌ ಡಾಲರ್‌ (ಸುಮಾರು ₹9,084 ಕೋಟಿ) ಆಗಲಿದೆ.

ಹೂಡಿಕೆ ಒಪ್ಪಂದ ಪೂರ್ಣವಾದರೆ, ಎನ್‌ಎಕ್ಸ್‌ಟ್ರಾದಲ್ಲಿ ಕಾರ್ಲೈಲ್‌ ಶೇ 25ರಷ್ಟು ಪಾಲು ಹಾಗೂ ಏರ್‌ಟೆಲ್‌ ಶೇ 75ರಷ್ಟು ಪಾಲುದಾರಿಕೆಯೊಂದಿಗೆ ಮುಂದುವರಿಯಲಿದೆ.

ಎನ್‌ಎಕ್ಸ್‌ಟ್ರಾ ನವದೆಹಲಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಎನ್‌ಎಕ್ಸ್‌ಟ್ರಾ ದೇಶ ಹಾಗೂ ಜಾಗತಿಕ ಕಂಪನಿಗಳಿಗೆ, ಸ್ಟಾರ್ಟ್–ಅಪ್‌ಗಳು, ಸಣ್ಣ ಮತ್ತು ಮಧ್ಯ ಗಾತ್ರದ ಉದ್ಯಮಗಳು ಹಾಗೂ ಸರ್ಕಾರಗಳಿಗೆ ಡೇಟಾ ಸೆಂಟರ್‌ ಸೇವೆಗಳನ್ನು ನೀಡುತ್ತಿದೆ.

ದೇಶದಾದ್ಯಂತ 10 ಬೃಹತ್‌ ಡೇಟಾ ಸೆಂಟರ್‌ಗಳು ಹಾಗೂ ಸಣ್ಣ ಗಾತ್ರದ 120 ಡೇಟಾ ಸೆಂಟರ್‌ಗಳ (ಎಡ್ಜ್) ಮೂಲಕ ಕ್ಲೌಡ್‌ ಸೌಕರ್ಯ, ಡೇಟಾ ಬ್ಯಾಕ್‌ಅಪ್‌, ಅವಘಡಗಳಲ್ಲಿ ಡೇಟಾ ಪುನರ್‌ಸ್ಥಾಪಿಸುವುದು ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದೆ. ಸೇವೆ ಹಾಗೂ ಉದ್ಯಮಗಳು ಡಿಜಿಟಲೀಕರಣದತ್ತ ಹೊರಳುತ್ತಿರುವುದರಿಂದ ಡೇಟಾ ಸೆಂಟರ್‌ಗಳ ಸೇವೆಗಳಿಗೆ ಬೇಡಿಕೆ ಹೆಚ್ಚಿದೆ.

ಗ್ರಾಹಕರು, ಬಳಕೆದಾರರ ಮಾಹಿತಿಗಳನ್ನು ಕಂಪನಿಗಳು ಪ್ರಾದೇಶಿಕ ಕೇಂದ್ರಗಳಲ್ಲಿ ಸಂಗ್ರಹಿಸುವಂತೆ ಸರ್ಕಾರ ಸೂಚನೆ ನೀಡಿರುವುದರಿಂದಲೂ ಈ ಉದ್ಯಮಕ್ಕೆ ಬೇಡಿಕೆ ಉಂಟಾಗಿದೆ. ಎನ್‌ಎಕ್ಸ್‌ಟ್ರಾ ದೇಶದಲ್ಲಿ ಇನ್ನಷ್ಟು ಬೃಹತ್‌ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಕಾರ್ಯದಲ್ಲಿದೆ.

ಕಳೆದ ವರ್ಷ ಕಂಪನಿ ಪುಣೆಯಲ್ಲಿ ಹೊಸ ಡೇಟಾ ಸೆಂಟರ್‌ ಆರಂಭಿಸಿತು. ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತದಲ್ಲಿ ಹೊಸ ಕೇಂದ್ರಗಳ ನಿರ್ಮಾಣ ಕಾರ್ಯ ನಡೆಸುತ್ತಿದೆ. ಷೇರು ಮಾರಾಟದ ಮೂಲಕ ಸಂಗ್ರಹಿಸುವ ಹಣವನ್ನು ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಕಾರ್ಯಗಳಲ್ಲಿ ಏರ್‌ಟೆಲ್‌ ತೊಡಗಿಸಲಿದೆ.

'ಕ್ಷಿಪ್ರಗತಿಯ ಡಿಜಟಲೀಕರಣದಿಂದಾಗಿ ಭಾರತದಲ್ಲಿ ಡೇಟಾ ಸೆಂಟರ್‌ಗಳ ಬೆಳವಣಿಗೆಗೆ ಸಾಕಷ್ಟು ಅವಕಾಶ ದೊರೆತಿದೆ. ಈ ವಲಯದಲ್ಲಿ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಹೂಡಿಕೆ ಹೆಚ್ಚಿಸಲಿದ್ದೇವೆ' ಎಂದು ಭಾರ್ತಿ ಏರ್‌ಟೆಲ್‌ ಸಿಇಒ ಗೋಪಾಲ್‌ ವಿಠ್ಠಲ್‌ ಹೇಳಿದ್ದಾರೆ.

ಕಾರ್ಲೈಲ್‌ ಗ್ರೂಪ್‌ ಅಮೆರಿಕ ಮತ್ತು ಸ್ಪೇನ್‌ನಲ್ಲಿ ಡೇಟಾ ಸೆಂಟರ್‌ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಅನುಭವ ಹೊಂದಿದೆ. ಕಾರ್ಲೈಲ್‌ ಭಾರತದ ಮಾರುಕಟ್ಟೆಯಲ್ಲಿ 2000ದಿಂದಲೂ ಹೂಡಿಕೆ ಮಾಡುತ್ತಿದೆ. ಎಸ್‌ಬಿಐ ಲೈಫ್‌, ಎಸ್‌ಬಿಐ ಕಾರ್ಡ್‌, ಎಚ್‌ಡಿಎಫ್‌ಸಿ, ಇಂಡಿಯಾ ಇನ್ಫೊಲೈನ್‌, ಡೆಲಿವೆರಿ ಹಾಗೂ ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌, ಪಿರಾಮಲ್ ಫಾರ್ಮಾ ಲಿಮಿಟೆಡ್‌ ಹಾಗೂ ಸಿಕ್ವೆಂಟ್‌ ಸೈಂಟಿಫಿಕ್‌ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿದೆ. ಭಾರತದಲ್ಲಿ ಈವರೆಗೆ 2.5 ಬಿಲಿಯನ್‌ ಅಮೆರಿಕನ್‌ ಡಾಲರ್‌ ಹೂಡಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT