ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್ ಬೆಲೆ ಶೇ 3ರಷ್ಟು ಇಳಿಕೆ?

ಸಿಮೆಂಟ್ ಬೇಡಿಕೆಯು ಶೇ 10ರಷ್ಟು ಹೆಚ್ಚಾಗುವ ನಿರೀಕ್ಷೆ
Published 20 ಜೂನ್ 2023, 16:25 IST
Last Updated 20 ಜೂನ್ 2023, 16:25 IST
ಅಕ್ಷರ ಗಾತ್ರ

ಮುಂಬೈ : ಸಿಮೆಂಟ್‌ ತಯಾರಿಕಾ ಕಂಪನಿಗಳು ಈ ವರ್ಷದಲ್ಲಿ ಸಿಮೆಂಟ್ ಬೆಲೆಯನ್ನು ಶೇಕಡ 3ರವರೆಗೆ ಇಳಿಕೆ ಮಾಡುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಸಿಮೆಂಟ್‌ಗೆ ಬೇಡಿಕೆಯು ಆರೋಗ್ಯಕರ ಮಟ್ಟದಲ್ಲಿ ಉಳಿಯುತ್ತದೆಯಾದರೂ, ಕಂಪನಿಗಳ ನಡುವೆ ಸ್ಪರ್ಧೆ ಬಿರುಸು ‍ಪಡೆದಿರುವ ಕಾರಣ ಅವು ಬೆಲೆ ಇಳಿಕೆಗೆ ಮುಂದಾಗುವ ಸಾಧ್ಯತೆ ಇದೆ.

ಸಿಮೆಂಟ್ ತಯಾರಿಕಾ ಕಂಪನಿಗಳು ಕಳೆದ ನಾಲ್ಕು ವರ್ಷಗಳಲ್ಲಿ ಶೇ 4ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್) ದಾಖಲಿಸಿದ್ದವು. ‘ಸಿಮೆಂಟ್ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಬೆಲೆ ತಗ್ಗುತ್ತಿರುವುದು ಕೂಡ ಸಿಮೆಂಟ್ ಮಾರಾಟ ಬೆಲೆ ಇಳಿಕೆಗೆ ನೆರವಾಗಲಿದೆ’ ಎಂದು ಕ್ರಿಸಿಲ್ ರೇಟಿಂಗ್ಸ್ ಸಂಸ್ಥೆ ಸಿದ್ಧಪಡಿಸಿರುವ ವರದಿ ಹೇಳಿದೆ.

ಸಿಮೆಂಟ್ ಬೆಲೆಯು ಕಳೆದ ಆರ್ಥಿಕ ವರ್ಷದಲ್ಲಿ ಪ್ರತಿ 50 ಕೆ.ಜಿ. ಚೀಲಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹391ಕ್ಕೆ ಏರಿಕೆ ಆಗಿತ್ತು.

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಎದುರಾದ ಸಮಸ್ಯೆಗಳು, ಅಗತ್ಯ ವಸ್ತುಗಳ ಬೆಲೆಯಲ್ಲಿ ಆದ ಏರಿಕೆ, ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮವಾಗಿ ಬೆಲೆಯು ಭಾರಿ ‍‍ಪ್ರಮಾಣದಲ್ಲಿ ಏರಿಕೆ ಕಂಡಿತ್ತು ಎಂದು ವರದಿಯು ಹೇಳಿದೆ.

ಮಾರ್ಚ್‌ ತ್ರೈಮಾಸಿಕದಲ್ಲಿ ಸಿಮೆಂಟ್ ಬೆಲೆಯು ₹388ಕ್ಕೆ ಇಳಿಕೆಯಾಗಿದೆ. ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಸಿಮೆಂಟ್ ತಯಾರಿಕಾ ಕಂಪನಿಗಳು ಮುಂಗಾರು ಪೂರ್ವದಲ್ಲಿ (ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ) ಸಿಮೆಂಟ್ ಬೆಲೆಯನ್ನು ಹೆಚ್ಚು ಮಾಡಿಲ್ಲ. ಬೇಡಿಕೆಯು ಸ್ಥಿರವಾಗಿದ್ದರೂ ಬೆಲೆ ಹೆಚ್ಚಳ ಮಾಡಿಲ್ಲದೆ ಇರುವುದು ಕಂಪನಿಗಳ ನಡುವಿನ ಸ್ಪರ್ಧೆಯನ್ನು ಸೂಚಿಸುತ್ತಿದೆ ಎಂದು ವರದಿ ವಿವರಿಸಿದೆ.

ಸಿಮೆಂಟ್‌ ಬೇಡಿಕೆಯು 2023–24ರಲ್ಲಿ, ಹಿಂದಿನ ವರ್ಷದ ಮಟ್ಟಕ್ಕೆ ಹೋಲಿಸಿದರೆ ಶೇ 8ರಿಂದ ಶೇ 10ರಷ್ಟು ಹೆಚ್ಚು ಇರಬಹುದು ಎಂದು ಕ್ರಿಸಿಲ್ ಸಂಸ್ಥೆಯ ವರದಿಯಲ್ಲಿ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT