ಭಾನುವಾರ, ಅಕ್ಟೋಬರ್ 25, 2020
27 °C

ಜಿಎಸ್‌ಟಿ: ಕೇಂದ್ರದಿಂದ ಸಾಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಿಎಸ್‌ಟಿ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ಭರ್ತಿ ಮಾಡಿಕೊಡಲು ಕೇಂದ್ರ ಸರ್ಕಾರವು ರಾಜ್ಯಗಳ ಪರವಾಗಿ ಗರಿಷ್ಠ ₹ 1.1 ಲಕ್ಷ ಕೋಟಿಯವರೆಗೆ ಸಾಲ ಮಾಡಲಿದೆ.

‘ಜಿಎಸ್‌ಟಿ ಸಂಗ್ರಹದಲ್ಲಿ ಆಗಿರುವ ಅಂದಾಜು ಕೊರತೆ ಭರ್ತಿಗೆ ವಿಶೇಷ ಯೋಜನೆಯ ಮೂಲಕ ಸಾಲ ಮಾಡಲಾಗುವುದು. ಜಿಎಸ್‌ಟಿ ಪರಿಹಾರ ಸೆಸ್‌ ಬಿಡುಗಡೆ ಮಾಡುವ ಬದಲಿಗೆ ಈ ಸಾಲವನ್ನು ರಾಜ್ಯಗಳಿಗೆ ವರ್ಗಾಯಿಸಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಆದರೆ, ಈ ಸಾಲದ ಅಸಲು ಹಾಗೂ ಸಾಲದ ಮೇಲಿನ ಬಡ್ಡಿಯನ್ನು ಯಾರು ಪಾವತಿಸುತ್ತಾರೆ ಎಂಬ ವಿವರಣೆಯು ಪ್ರಕಟಣೆಯಲ್ಲಿ ಇಲ್ಲ.

ರಾಜ್ಯಗಳ ಪರವಾಗಿ ಕೇಂದ್ರವು ಸಾಲ ಮಾಡುವುದರಿಂದಾಗಿ, ಏಕರೂಪದ ಬಡ್ಡಿ ದರಕ್ಕೆ ಸಾಲ ಸಿಗಲಿದೆ. ಈ ಸಾಲದಿಂದ ‘ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯ ಮೇಲೆ ಯಾವ ಪರಿಣಾಮವೂ ಇರುವುದಿಲ್ಲ’ ಎಂದು ಹಣಕಾಸು ಸಚಿವಾಲಯ ಹೇಳಿದೆ. ‘ಈ ಮೊತ್ತವನ್ನು ರಾಜ್ಯ ಸರ್ಕಾರಗಳು ತಮ್ಮ ವಿತ್ತೀಯ ಕೊರತೆಯನ್ನು ಸರಿದೂಗಿಸಿಕೊಳ್ಳಲು ಮಾಡುವ ಬಂಡವಾಳ ಸಾಲ ಎಂದೇ ನಮೂದಿಸಲಾಗುತ್ತದೆ’ ಎಂದು ಸಚಿವಾಲಯ ಹೇಳಿದೆ.

ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯಗಳಿಗೆ ಆಗುವ ವರಮಾನ ಕೊರತೆಯನ್ನು ಭರ್ತಿ ಮಾಡಿಕೊಡುವ ಹೊಣೆ ಕೇಂದ್ರದ್ದು ಎಂದು ಕಾನೂನು ಹೇಳುತ್ತದೆ. ಕೆಲವು ವಸ್ತುಗಳ ಮೇಲೆ ವಿಧಿಸುವ ಸೆಸ್‌ನಿಂದ ಸಂಗ್ರಹವಾಗುವ ಮೊತ್ತವನ್ನು ಬಳಸಿ ರಾಜ್ಯಗಳಿಗೆ ಪರಿಹಾರ ನೀಡಲಾಗುತ್ತದೆ. ಆದರೆ, ಲಾಕ್‌ಡೌನ್‌ ಪರಿಣಾಮವಾಗಿ, ಪರಿಹಾರ ಮೊತ್ತ ವಿತರಿಸಲು ಅಗತ್ಯವಿರುವಷ್ಟು ಸೆಸ್‌ ಸಂಗ್ರಹವಾಗಿಲ್ಲ.

ವರಮಾನ ಕೊರತೆಯನ್ನು ರಾಜ್ಯಗಳು ಸಾಲದ ರೂಪದಲ್ಲಿ ಭರ್ತಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಹೇಳಿತ್ತು. ಆದರೆ, ಇದಕ್ಕೆ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ಕೆಲವು ರಾಜ್ಯಗಳು ಒಪ್ಪಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು