ಶುಕ್ರವಾರ, ಅಕ್ಟೋಬರ್ 18, 2019
20 °C

ಕಾಫಿ ಡೇ: ನೆರವಿನ ನಿರೀಕ್ಷೆಯಲ್ಲಿ ಕಾಫಿ ಬೆಳೆಗಾರ

Published:
Updated:
Prajavani

ಇಥಿಯೋಪಿಯಾದ ಕುರಿಗಾಹಿಯೊಬ್ಬನಿಂದ ಹದಿನೇಳನೆ ಶತಮಾನದಲ್ಲಿ ಜಗತ್ತಿಗೆ ಪರಿಚಯವಾದ ಕಾಫಿ, ಮೆಕ್ಕಾ ಮೂಲದ ಬಾಬಾಬುಡನ್ ರಿಂದ ಕರ್ನಾಟಕದ ಚಿಕ್ಕಮಗಳೂರಿನ ಗಿರಿಯಲ್ಲಿ ಬಿತ್ತನೆಯಾಗಿ ಎಲ್ಲೆಡೆ ತನ್ನ ಪರಿಮಳ ಪಸರಿಸಿದ್ದು ಬಹುತೇಕರಿಗೆ ತಿಳಿದಿಲ್ಲ.

ಕಾಫಿ ನಮ್ಮದೇ ಬೆಳೆ ಎನ್ನುವಷ್ಟರ ಮಟ್ಟಿಗೆ ರಾಜ್ಯದಲ್ಲಿ ತನ್ನ ದಟ್ಟ ಛಾಪು ಮೂಡಿಸಿದೆ. ಕಾಫಿ ಇಲ್ಲಿಗೆ ಪರಿಚಯವಾದ ತುಸುವೇ ದಿನಗಳಲ್ಲಿ ಇಲ್ಲಿನ ಆಳರಸರಾದ ಬ್ರಿಟಿಷರು ಅದನ್ನು ಒಂದು ವಾಣಿಜ್ಯ ವ್ಯವಸಾಯವಾಗಿಸುವಲ್ಲಿ ಸಫಲರಾದರು. ದೇಶದಲ್ಲಿ ಕಾಫಿಗೆ ಬೇಕಾದ ಹವಾಮಾನ ಗುರುತಿಸಿ ಅಲ್ಲಿ ಕಾಫಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಬ್ರಿಟಿಷರ ಕೊಡುಗೆ ಗಣನೀಯವಾಗಿದೆ.

ಈ ಕಾರಣಕ್ಕಾಗಿಯೇ ಕಾಫಿ ಬೆಳೆಗಾರರು ಬೆಳೆ ಪದ್ಧತಿಯಲ್ಲಿ (ಪ್ಯಾಕೇಜ್ ಆಫ್ ಪ್ರ್ಯಾಕ್ಟೀಸ್) ವಿಪರೀತ ಶಿಸ್ತು ಅನುಸರಿಸುತ್ತಾರೆ. ಉದಾಹರಣೆಗೆ ಹವಾಮಾನ ಇಲಾಖೆಯನ್ನು ಹೊರತುಪಡಿಸಿದರೆ ದೇಶದ ಇನ್ನಾವ ಬೇಸಾಯವೂ ಮಳೆ ಮತ್ತು ಉಷ್ಣಾಂಶದ ಲೆಕ್ಕ ಇಡುವುದಿಲ್ಲ. ಒಬ್ಬ ಸಾಮಾನ್ಯ ಕಾಫಿ ಬೆಳೆಗಾರನ ಬಳಿ ಸುಮಾರು ಮೂವತ್ತು ವರ್ಷಗಳ ಕರಾರುವಾಕ್ಕಾದ ಮಳೆ ಲೆಕ್ಕ ಇರುತ್ತದೆ. ದೊಡ್ಡ ಹಿಡುವಳಿದಾರರು ಮತ್ತು ಕೆಲವು ಆಸಕ್ತ ಬೆಳೆಗಾರರ ಬಳಿ ಇನ್ನೂರು ವರ್ಷಗಳ ನಿಖರವಾದ ಹವಾಮಾನದ (ಮಳೆ ಮತ್ತು ಉಷ್ಣಾಂಶ) ವಿವರಗಳಿವೆ. ಇದು ಜಾಗತಿಕ ತಾಪಮಾನದ ಅಧ್ಯಯನಕ್ಕೂ ಬಳಕೆಯಾಗುತ್ತದೆ.

ಕಾಫಿ ಬೆಳೆಯುವ ರಾಷ್ಟ್ರಗಳ ಪೈಕಿ ಭಾರತ ಆರನೇ ಸ್ಥಾನದಲ್ಲಿದ್ದು ಜಾಗತಿಕ ಉತ್ಪಾದನೆಗೆ ಶೇಕಡಾ 5.3ರ‌ಷ್ಟು ಕೊಡುಗೆ ಕೊಡುತ್ತದೆ. ಕೇರಳ, ಕರ್ನಾಟಕ, ತಮಿಳುನಾಡು ಸಾಂಪ್ರದಾಯಿಕ ಕಾಫಿ ಬೆಳೆಯುವ ಪ್ರದೇಶಗಳಾಗಿವೆ. ಆಂದ್ರಪ್ರದೇಶ, ಒಡಿಶಾ ಮತ್ತು ಪೂರ್ವಘಟ್ಟ ಪ್ರದೇಶದ ಕೆಲವು ಭಾಗಗಳಲ್ಲಿ ಕೂಡ ಕಾಫಿ ವಾಣಿಜ್ಯ ಬೆಳೆಯಾಗಿದೆ.

ದೇಶದ ಒಟ್ಟು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 68ರಷ್ಟಿದೆ. ಹಾಸನ, ಚಿಕ್ಕಮಗಳೂರು, ಕೊಡಗು ರಾಜ್ಯದ ಪ್ರಮುಖ ಕಾಫಿ ಬೆಳೆಯುವ ಜಿಲ್ಲೆಗಳಾಗಿವೆ.

ತುಸು ಹಿಂದಕ್ಕೆ ಹೋದರೆ, ಅರವತ್ತರ ದಶಕದಲ್ಲಿ (1951-1989)  ದೊಡ್ಡ ಪ್ರಮಾಣದಲ್ಲಿ ವಿದೇಶಿ ವಹಿವಾಟು (forex) ನಡೆಸುವ ಮತ್ತು ವಿದೇಶಿ ವಿನಿಮಯ ತಂದುಕೊಡುವ ಏಕಮಾತ್ರ ಕೃಷಿ ಉತ್ಪನ್ನ ಕಾಫಿಯಾಗಿತ್ತು. ಚಿನ್ನ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರತು ಪಡಿಸಿದರೆ ಕಾಫಿ ಜಾಗತಿಕ ವಹಿವಾಟಿನ ದೊಡ್ಡಭಾಗವನ್ನು ಆಕ್ರಮಿಸಿಕೊಂಡಿತ್ತು. ರಷ್ಯಾಕ್ಕೆ ರಫ್ತಾಗುತ್ತಿದ್ದ ಕಾಫಿಗೆ ಪ್ರತಿಯಾಗಿ ಅಲ್ಲಿಂದ ರಕ್ಷಣಾ ಸಾಮಗ್ರಿಗಳು ಭಾರತಕ್ಕೆ ಬರುತ್ತಿದ್ದವು. ಕಾಫಿ ಬೆಳೆಗಾರರ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ.

ಆದರೆ, ಕುಸಿದ ಬೆಲೆ, ಏರಿದ ನಿರ್ವಹಣಾ ವೆಚ್ಚ, ಕಾರ್ಮಿಕರ ಕೊರತೆ ಮತ್ತವರ ದುಬಾರಿ ಕೂಲಿ, ಜಾಗತಿಕ ತಾಪಮಾನ, ಅತಿವೃಷ್ಟಿ, ಅನಾವೃಷ್ಟಿ, ಸಿಂಪರಣೆ ಗೊಬ್ಬರಗಳ ದುಬಾರಿ ಧಾರಣೆ, ರೋಗ ಕೀಟಗಳ ಹಾವಳಿ, ರೋಗ ನಿರೋಧಕ ತಳಿಗಳಲ್ಲಿ ಗಮನಾರ್ಹ ಸಾಧನೆ ಆಗದಿರುವುದು‌ ಕಾಫಿ ನಂಬಿದವರನ್ನು ನಲುಗಿಸುವಂತೆ ಮಾಡುತ್ತಿದೆ.

ಇಷ್ಟೆಲ್ಲಾ ಅನನುಕೂಲತೆಗಳ ನಡುವೆಯೂ ಕಾಫಿ ಉದ್ಯಮ ರಾಜ್ಯಕ್ಕೆ ಉತ್ತಮ ವಹಿವಾಟು ಒದಗಿಸಿದೆ. 2016-17ರಲ್ಲಿ 3.12 ಲಕ್ಷ ಟನ್ ಇದ್ದ ಕಾಫಿ ಪ್ರಮಾಣ 2017-18ರಲ್ಲಿ 3.16 ಲಕ್ಷ ಟನ್ ಆಗಿದೆ. ಕಾಫಿ ಮಂಡಳಿಯ ಪೂರ್ವ ಮುಂಗಾರು ಸರಾಸರಿ ಲೆಕ್ಕಾಚಾರದಂತೆ 2018-19ಕ್ಕೆ 3.19ಲಕ್ಷ ಟನ್ ಆಗಬೇಕಾದ ನಿರೀಕ್ಷೆ ಇದೆ. ಆಗಸ್ಟ್ ತಿಂಗಳಿನಲ್ಲಿ ಸುರಿದ ಶತಮಾನದ ಭಾರಿ ಮಳೆಯಿಂದಾಗಿ 60 ಸಾವಿರ ಟನ್ ಇಳಿಮುಖವಾಗಿದೆ. ಶೇ 18.02ರಷ್ಟು ಕುಸಿತ ಕಾಣಲಿದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು ಕಳೆದ ಮೂರು ವರ್ಷಗಳಲ್ಲಿ ಶೇ 3ರಷ್ಟು ಭೂಮಿಯು ಕಾಫಿ ತೋಟವಾಗಿ ಮಾರ್ಪಟ್ಟಿದೆ.

ಎರಡು ಹಂತದ ನೆರಳಿನ ಆಶ್ರಯದಲ್ಲಿ ಬೆಳೆಯುವ ದೇಶದ ಕಾಫಿ ಜಾಗತಿಕವಾಗಿ ವಿಶೇಷ ಮಾನ್ಯತೆ ಪಡೆದುಕೊಂಡಿದೆ. ‘ಷೇಡ್ ಗ್ರೋನ್ ಹ್ಯಾಂಡ್ ಪಿಕ್ಡ್’ ಅಸ್ಮಿತೆಯ ಕಾಫಿ ಜಾಗತಿಕವಾಗಿ  ಮನ್ನಣೆ ಗಳಿಸಿದೆ.

ಕಾಫಿ ಸೇವನೆಯ ಆರೋಗ್ಯ ಲಾಭದ ಹೊರತಾಗಿಯೂ ಚಹಾ ಬಳಕೆಯೇ ನಮ್ಮಲ್ಲಿ ಹೆಚ್ಚು. ಹೀಗಾಗಿ ದೇಶಿ ಕಾಫಿ ಉದ್ಯಮವು ವಿದೇಶಿ ಮಾರುಕಟ್ಟೆಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಕಾಫಿಯ ಸ್ಥಳೀಯ ಬಳಕೆ ಉತ್ತೇಜಿಸಲು ಕಾಫಿ ಮಂಡಳಿ ಮತ್ತು ಕೆಲವು ಆಸಕ್ತ ಸಂಘಟನೆಗಳು ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದವು. ಈ ಪ್ರಯತ್ನಗಳು ಒಂದು ಹಂತದ ಹೆಚ್ಚಳ ಕಾಣುವಲ್ಲಿ ಯಶಸ್ವಿಯಾಗಿವೆ.

‘ಕಾಫಿ ಬೆಳೆಗಾರರು ಉಳಿಯಬೇಕಾದರೆ ಮಾರುಕಟ್ಟೆ ಉತ್ತಮವಾಗಿರಬೇಕು. ವಿದೇಶಿ ಮಾರುಕಟ್ಟೆಗೆ ಸಾಗಿಸುವ ಕಾಫಿಯ ಗುಣಮಟ್ಟ ಅತ್ಯುತ್ತಮವಾಗಿರಬೇಕು– ಎನ್ನುವ ಧ್ಯೇಯವನ್ನು ಕಾರ್ಯಗತಗೊಳಿಸಲು ಸರ್ಕಾರಿ ಸ್ವಾಮ್ಯದ ಕಾಫಿ ಮಂಡಳಿ ಮತ್ತು ಖಾಸಗಿ ಕ್ಯೂರಿಂಗ್ ವರ್ಕ್ಸಗಳು  ಕಾಫಿ ಬೆಳೆಯುವ ಪ್ರದೇಶಗಳಲ್ಲಿ ‘ಕಾಫಿ ಕಪ್ಪಿಂಗ್’ ಹೆಸರಿನ ಗುಣಮಟ್ಟವೇ ಆದ್ಯತೆಯಾಗಿರಿಸಿಕೊಂಡ ಕಾರ್ಯಕ್ರಮವನ್ನು ಬೆಳೆಗಾರರಿಗಾಗಿ ನಡೆಸುತ್ತಿವೆ.

ಕಾಫಿಯು ಮಾನವ ಸಂಪನ್ಮೂಲವನ್ನೇ ಹೆಚ್ಚಾಗಿ ಬೇಡುವ ಬೆಳೆ. ಹಣ್ಣಿನಿಂದ ಬೇರ್ಪಡಿಸಲು ಪಲ್ಪರ್ ಯಂತ್ರ ಬಳಕೆಯ ಆರಂಭವೇ ಮೊದಲಿಗೆ ಕಾಫಿ ಬೇಸಾಯದಲ್ಲಾದ ಯಾಂತ್ರೀಕರಣ. ಪ್ರಸ್ತುತ ವ್ಯವಸ್ಥೆ ತುಸು ಯಾಂತ್ರೀಕರಣಗೊಂಡಿದ್ದರೂ ಕಾರ್ಮಿಕರ ಅವಲಂಬನೆ ತಗ್ಗುವುದಿಲ್ಲ. ಕಾಫಿ ತೋಟದಿಂದ ಬಟ್ಟಲಿಗೆ ಬರುವ ಪಯಣದಲ್ಲಿ ಪಿಕ್ಕಿಂಗ್, ಪಲ್ಪಿಂಗ್, ಡ್ರೈಯಿಂಗ್, ಸ್ಟೋರಿಂಗ್‌ಗಳು ಕಾಫಿಯ ಗುಣಮಟ್ಟ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ನಂತರದ ಹಲ್ಲಿಂಗ್, ರೋಸ್ಟಿಂಗ್, ಗ್ರೈಂಡಿಂಗ್‌ಗೆ ಯಂತ್ರಗಳೇ ಬೇಕಾಗುತ್ತವೆ.

ಕಾಫಿಯ ಗುಣಮಟ್ಟ ಕಾಯ್ದುಕೊಳ್ಳಲು ಸರ್ಟಿಫೀಕೇಷನ್ ಮತ್ತು ಪ್ರೀಮಿಯಂ ಬೆಲೆ ಪದ್ಧತಿ ಪರಿಚಯವಾಗಿದ್ದರೂ ಒಬ್ಬ ಸಣ್ಣ, ಸಾಮಾನ್ಯ ಬೆಳೆಗಾರ ಸಹ ಗುಣಮಟ್ಟ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ.

ಮುನ್ನೆಚ್ಚರಿಕೆಗಳು

ಕಾಫಿ ಸಾಮಾನ್ಯವಾಗಿ ನವೆಂಬರ್‌ನಿಂದ ಕೊಯ್ಲಿಗೆ ಬರುವುದು. ಕೊಯ್ಲಿಗೆ ಮುನ್ನ ಕೊಡುವ ಕೊನೆಯ ಗೊಬ್ಬರ, ಸಿಂಪರಣೆ (ಗ್ಯಾಪ್), ಪಕ್ವ ಹಣ್ಣುಗಳನ್ನು ಮಾತ್ರ ಬಿಡಿಸುವುದು, ಹಣ್ಣು ತಾಜಾವಿದ್ದಾಗಲೇ ಪಲ್ಪಿಂಗ್ ಮಾಡಿಸುವುದು, ತಕ್ಷಣವೇ ಒಂದೇ ಸಮವಾಗಿ ಸ್ವಚ್ಛ ಕಣದಲ್ಲಿ ಒಣಗಿಸುವುದು (ಡ್ರೈಯಿಂಗ್ ಯಾರ್ಡ್), ಕಾಲಾಡಿ, ರಾಶಿ ಮಾಡಿ ಒಣಗಿಸುವುದು, ಸಾಕುಪ್ರಾಣಿಗಳ ಮಲಮೂತ್ರ ಸೇರದಂತೆ ಜಾಗ್ರತೆ ವಹಿಸುವುದು, ಐದು ಅಥವಾ ಆರು ಬಿಸಿಲಿನ ನಂತರ ಕಾಫಿಯ ತೇವಾಂಶ ಹತ್ತೂವರೆಯಿಂದ ಹನ್ನೊಂದರೊಳಗೆ ಬಂದಮೇಲೆ ಗೋದಾಮಿಗೆ ಸಾಗಿಸುವುದು, ಶೇಖರಣಾ ಸ್ಥಳದಲ್ಲಿ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಇಂಧನ, ಇಲಿ ಔಷಧಿ, ಶುಂಠಿ, ಮೆಣಸು, ಗಂಧ, ಏಲಕ್ಕಿಯಂತಹ ವಸ್ತುಗಳು ಇಲ್ಲದಂತೆ ನೋಡಿಕೊಳ್ಳುವುದು, ಮರದ ಹಲಗೆಗಳ ಮೇಲೆ ಶೇಖರಿಸುವುದು, ಗೋಡೆಯಿಂದ ಅಂತರವಿಡುವುದು, ಚಾವಣಿ ಸೋರದಂತೆ ಜಾಗ್ರತೆ ವಹಿಸುವುದು, ಹೆಚ್ಚು ಕಾಲ ಶೇಖರಿಸುವಿರಾದರೆ ಆಗಾಗ ಗಮನಿಸುವುದು.

ಈ ಎಲ್ಲವೂ ಗುಣಮಟ್ಟದ ಕಾಫಿಗಾಗಿ ಮಾಡಲೇಬೇಕಾದ ಕೆಲಸಗಳು. ಈ ಎಲ್ಲ ಕೆಲಸಗಳನ್ನು ಬೆಳೆಗಾರನೊಬ್ಬ ಸಹಜವಾಗಿಯೇ ಪಾಲಿಸುತ್ತಾನೆ. ಆದರೆ, ಮೇಲೆ ಹೇಳಿದ ಅಷ್ಟೂ ಕೆಲಸಗಳಲ್ಲಿ ಗಮನಿಸಲೇಬೇಕಾದ ಉಪ ಕೆಲಸಗಳು ಬೆಳೆಗಾರನೊಬ್ಬನ ಕಾಫಿಯನ್ನು ಅತ್ಯುತ್ತಮ, ಶ್ರೇಷ್ಠ ಕಾಫಿಯನ್ನಾಗಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಬೆಳೆಗಾರನೂ ಗಮನವಹಿಸಿದರೆ ಮಾರುಕಟ್ಟೆ ಧಾರಣೆ ಉತ್ತಮವಾಗಬಹುದು.

ಆದರೂ ಅಸಂಖ್ಯ ಜನರಿಗೆ ಪ್ರತ್ಯಕ್ಷ ಇಲ್ಲಾ ಪರೋಕ್ಷವಾಗಿ ಉದ್ಯೋಗ ನೀಡುತ್ತಿರುವ, ದೇಶದ ವನಸಂಪತ್ತನ್ನು ಉಳಿಸುವಲ್ಲಿ ಗಮನಾರ್ಹ ಕಾಣಿಕೆ ನೀಡುತ್ತಿರುವ ಕಾಫಿ ಉದ್ಯಮದ ಉಳಿವಿಗೆ ಸರ್ಕಾರ ನಿಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಬೆಳೆಗಾರನಿದ್ದಾನೆ.

Post Comments (+)