ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌| ಕಾರ್ಪೊರೇಟ್ ಸಾಲ ಬಾಕಿ ಹೆಚ್ಚಳ: ಇಂಡಿಯಾ ರೇಟಿಂಗ್ಸ್‌ ಆ್ಯಂಡ್ ರಿಸರ್ಚ್‌

Last Updated 6 ಜುಲೈ 2020, 14:30 IST
ಅಕ್ಷರ ಗಾತ್ರ

ಮುಂಬೈ‌: ಕೋವಿಡ್‌ ಪಿಡುಗಿನ ಕಾರಣಕ್ಕೆ ಮುಂಚೂಣಿ 500 ಕಂಪನಿಗಳು 2022ರ ಮಾರ್ಚ್‌ ವೇಳೆಗೆ ₹ 1.67 ಲಕ್ಷ ಕೋಟಿ ಸಾಲ ಮರುಪಾವತಿ ಬಾಕಿ ಉಳಿಸಿಕೊಂಡಿರಲಿವೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್ ರಿಸರ್ಚ್‌ (ಇಂಡ್‌ರೇ) ತಿಳಿಸಿದೆ.

ಖಾಸಗಿ ವಲಯದ ಕಂಪನಿಗಳಿಂದ ಸಕಾಲದಲ್ಲಿ ಸಾಲ ಮರುಪಾವತಿ ಸಾಧ್ಯವಾಗದ ಕಾರಣಕ್ಕೆ ಮುಂಚೂಣಿ 500 ಕಾರ್ಪೊರೇಟ್‌ಗಳ ಒಟ್ಟಾರೆ ಸಾಲ ಮರುಪಾವತಿ ಬಾಕಿ ಮೊತ್ತವು ₹ 4.21 ಲಕ್ಷ ಕೋಟಿಗೆ ತಲುಪಲಿದೆ ಎಂದು ‘ಇಂಡ್‌ರೇ’ ವರದಿಯಲ್ಲಿ ಅಂದಾಜಿಸಲಾಗಿದೆ.

ಕೋವಿಡ್‌ ಪಿಡುಗಿನ ಹಾವಳಿ ಆರಂಭವಾಗುವ ಮುಂಚೆ ₹ 2.54 ಲಕ್ಷ ಕೋಟಿ ಮೊತ್ತದ ಸಾಲವು 2022ರವರೆಗೆ ಮರುಪಾವತಿ ಆಗುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಈಗ ಅದಕ್ಕೆ ಹೆಚ್ಚುವರಿಯಾಗಿ ₹ 1.67 ಲಕ್ಷ ಕೋಟಿ ಸೇರ್ಪಡೆಯಾಗಲಿದೆ.

ಈಗಾಗಲೇ ಕಾರ್ಪೊರೇಟ್‌ ವಲಯದ ಶೇ 11.57ರಷ್ಟು ಸಾಲದ ಮರುಪಾವತಿ ವಿಳಂಬವಾಗಲಿದೆ ಎಂದು ಲೆಕ್ಕ ಹಾಕಲಾಗಿದೆ. ನಿಗದಿತ ಅವಧಿಯಲ್ಲಿ ಮರುಪಾವತಿಯಾಗದ ಸಾಲಕ್ಕೆ ಹೊಸ ಮೊತ್ತ ಸೇರ್ಪಡೆಯಾಗುವುದರಿಂದ ಅದರ ಪ್ರಮಾಣ ಈಗ ಶೇ 18.21ಕ್ಕೆ ಏರಿಕೆಯಾಗಲಿದೆ.

ಕೋವಿಡ್‌ ಪಿಡುಗಿನ ಹಾವಳಿ ಕಂಡು ಬರುತ್ತಿದ್ದಂತೆ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಏರಿಕೆಯಾಗಿ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನುವ ಆತಂಕ ಕಂಡುಬಂದಿತ್ತು. ಅವಧಿ ಸಾಲಗಳ ಕಂತು ಮರುಪಾವತಿ ಮುಂದೂಡಿಕೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ 6 ತಿಂಗಳವರೆಗೆ ಅವಕಾಶ ನೀಡಿರುವುದು ಬ್ಯಾಂಕ್‌ಗಳ ಹಣಕಾಸು ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವ ಶಂಕೆ ಮೂಡಿಸಿದೆ.

ಬ್ಯಾಂಕ್‌ಗಳ ಮರು ಹಣಕಾಸು ಸೌಲಭ್ಯದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಕಾಲದಲ್ಲಿ ಸಾಲ ಪಡೆಯುವುದು ಖಾಸಗಿ ಕಂಪನಿಗಳಿಗೂ ಸವಾಲಾಗಿ ಪರಿಣಮಿಸಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

₹ 4.21 ಲಕ್ಷ ಕೋಟಿ

ಕಾರ್ಪೊರೇಟ್‌ ವಲಯದ ಸಾಲ ಮರುಪಾವತಿ ಮುಂದೂಡಿಕೆಯ ಒಟ್ಟಾರೆ ಮೊತ್ತ

₹ 20.97 ಲಕ್ಷ ಕೋಟಿ

ಆರ್ಥಿಕ ಬಿಕ್ಕಟ್ಟಿಗೆ ಕಡಿವಾಣ ಹಾಕಲು ಸರ್ಕಾರ ಪ್ರಕಟಿಸಿರುವ ಉತ್ತೇಜನಾ ಕೊಡುಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT